ನೀರಿನ ಸಮಸ್ಯೆಗೆ ಪಾಲಿಕೆ ಸದಸ್ಯರ ಆತಂಕ

ನೀರಿನ ಸಮಸ್ಯೆಗೆ ಪಾಲಿಕೆ ಸದಸ್ಯರ ಆತಂಕ

ದಾವಣಗೆರೆ, ಫೆ.28- ಬೇಸಿಗೆಯ ಆರಂಭಿಕ ದಿನಗಳಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿರುವ ಬಗ್ಗೆ ಪಾಲಿಕೆ ಸದಸ್ಯರು ಪಕ್ಷ ಭೇದ ಮರೆತು ದನಿ ಎತ್ತಿದರು.

ಬುಧವಾರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಬಿ.ಹೆಚ್. ವಿನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ, ಆಡಳಿತದಲ್ಲಿ ಅವ್ಯವಹಾರ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ನಗರದಲ್ಲಿನ ನೀರಿನ ಸಮಸ್ಯೆ ಚರ್ಚೆಗೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಮುನ್ನುಡಿ ಹಾಕುತ್ತಿದ್ದಂತೆ, ಆಡಳಿತ ಹಾಗೂ ಪ್ರತಿ ಪಕ್ಷದ ಸದಸ್ಯರೂ ದನಿಗೂಡಿಸಿದರು. ಸದಸ್ಯರಿಗೆ ಅಗೌರವ ತೋರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದರು.

ಬೇಸಿಗೆಯ ಆರಂಭಿಕ ದಿನಗಳಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ. ವಾರ್ಡ್‌ ಜನತೆಗೆ ಟ್ಯಾಂಕರ್ ಮೂಲಕ ನೀರು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಪಾಲಿಕೆಯಿಂದ ಒಂದು ಟ್ಯಾಂಕರ್ ನೀರು ತರಿಸಬೇಕಾದರೆ 50 ಕ್ಕೂ ಹೆಚ್ಚು ಜನರಿಗೆ ಪೋನ್ ಮಾಡಬೇಕು. ನನ್ನ ವಾರ್ಡ್‌ಗೆ ಬೆಳಿಗ್ಗೆ 7.30ಕ್ಕೆ ಟ್ಯಾಂಕರ್ ತರಲು ಪ್ರಯತ್ನಿಸಿದೆ. ಸಂಜೆ 5.30ಕ್ಕೆ ಟ್ಯಾಂಕರ್ ತರಿಸುವಲ್ಲಿ ಹೈರಾಣಾಗಿದ್ದೆ ಎಂದಾಗ, ಸದಸ್ಯರಾದ ಶಿವಾನಂದ್, ಮೀನಾಕ್ಷಿ ಜಗದೀಶ್ ದನಿಗೂಡಿಸಿದರು.

ನಗರದಲ್ಲಿ ಸದ್ಯ ಎಷ್ಟು ನೀರು ಲಭ್ಯವಿದೆ. ಅದು ಎಷ್ಟು ದಿನಗಳಿಗಾಗುತ್ತದೆ ಎಂಬ ಮಾಹಿತಿ ಪಡೆದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಸಹಾಯದಿಂದ ಭದ್ರಾ ನಾಲಾ ನೀರಿನಿಂದ ಕೆರೆ ಭರ್ತಿ ಮಾಡಿಕೊಳ್ಳಬಹುದೇ? ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ವೀರೇಶ್ ಸಲಹೆ ನೀಡಿದರು.

ಮುಂದುವರಿದ ಅವರು, ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದೆ, ನೀರಿನ ಅಭಾವ ಉಂಟಾದಲ್ಲಿ ಜನರ ಜೊತೆಯೇ ಪಾಲಿಗೆ ಬಂದು ಮೇಯರ್ ಹಾಗೂ ಆಯುಕ್ತರ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದೂ ಎಚ್ಚರಿಸಿದರು.

ಸದಸ್ಯರು ಟ್ಯಾಂಕರ್ ನೀರು ಕೇಳಿದರೆ ಅಲ್ಲಿನ ಕೆಲಸಗಾರರು ಇಂಜಿನಿಯರ್ ಹೇಳಿದರೆ ಮಾತ್ರ ಕೊಡುತ್ತೇವೆ ಎನ್ನುತ್ತಾರೆ. ಸದಸ್ಯರಿಗೆ ಕೆಲಸಗಾರರೂ ಗೌರವ ಕೊಡುವುದಿಲ್ಲ. ಸದಸ್ಯರಿಗೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯ ಎ.ನಾಗರಾಜ್ ಹೇಳಿದಾಗ,  ಹಿರಿಯ ಸದಸ್ಯ ಚಮನ್ ಸಾಬ್, ಮಂಜಾನಾಯ್ಕ ದನಿಗೂಡಿಸಿದರು.

ಸದಸ್ಯರಿಗೆ ಗೌರವ ಕೊಡದ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರಾದ ರೇಣುಕಾ ಭರವಸೆ ನೀಡಿದರು.

ಸದಸ್ಯರಾದ ಅಬ್ದುಲ್ ಲತೀಫ್, ಉಮಾ ಪ್ರಕಾಶ್, ಕೆ.ಎಂ. ವೀರೇಶ್, ಶಿವಾನಂದ, ಮೀನಾಕ್ಷಿ ಜಗದೀಶ್ ಇತರರು ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು.

ಸಿದ್ಧವೀರಪ್ಪ ಬಡಾವಣೆಯ ಯಾರದ್ದೋ ಆಸ್ತಿಗೆ ಇ ಸ್ವತ್ತು ಕೊಡಲಾಗಿದೆ. ಇಂತಹ ಅಕ್ರಮಗಳು  ಬಹಳಷ್ಟು ನಡೆಯುತ್ತಿದ್ದು,  ಇ-ಸ್ವತ್ತಿನ ಮೇಲೂ ಜನರಿಗೆ ನಂಬಿಕೆ ಇಲ್ಲವಾಗಿದೆ. ಇಂತಹ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಕೆ.ಪ್ರಸನ್ನ ಆಗ್ರಹಿಸಿದಾಗ ಗಮನಕ್ಕೆ ಬಂದ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು.

ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದವರಿಗೆ  ಎಂಡ್ರಾಸ್‌ಮೆಂಟ್ ಕೊಟ್ಟು, ಇ ಆಸ್ತಿಗೆ ಮತ್ತೆ ಅರ್ಜಿ ಸಲ್ಲಿಸುವಂತೆ ಹೇಳಲಾಗುತ್ತಿದೆ. ಜನರನ್ನು ಅಲೆದಾಡಿಸಲಾಗುತ್ತಿದೆ ಎಂದು ಪ್ರಸನ್ನ ಕುಮಾರ್ ಆರೋಪಿಸಿದರು.

ಆಸ್ತಿ ಕಣಕ್ಕೆ ಎಂದು ಜನರಿಂದ ದಾಖಲೆ ಪಡೆದು, ಮತ್ತೆ ಇ ಆಸ್ತಿಗಾಗಿ ದಾಖಲೆ ಪಡೆಯಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ 200-300 ರೂ. ಹೊರೆಯಾಗುತ್ತದೆ. ಒಮ್ಮೆ ಮಾತ್ರ ದಾಖಲೆ ಪಡೆಯುವಂತೆ ಎ.ನಾಗರಾಜ್ ಸಲಹೆ ನೀಡಿದರು.

ಎಲ್.ಡಿ. ಗೋಣೆಪ್ಪ, ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ 19 ದಿನ ಮಾತ್ರ ಉಳಿದಿದ್ದು, ಮೂಲ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಈ ಭಾಗದ ಮೂವರು ನೀರುಗಂಟಿಗಳು ಅಗೌರವ ತೋರುತ್ತಿದ್ದಾರೆ ಎಂದರು.

ಉಪ ಮೇಯರ್ ಯಶೋಧ ಯಗ್ಗಪ್ಪ, ಸ್ಥಾಯಿ ಸಮಿತಿ ಸದಸ್ಯರುಗಳಾದ ಉದಯ್ ಕುಮಾರ್, ಅಬ್ದುಲ್ ಲತೀಫ್, ಮೀನಾಕ್ಷಿ ಜಗದೀಶ್, ಪಾಲಿಕೆ ಸದಸ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

error: Content is protected !!