ಸಮುದ್ರ ತಳದ ದ್ವಾರಕೆ ವೀಕ್ಷಿಸಿದ ಪ್ರಧಾನಿ

ಸಮುದ್ರ ತಳದ ದ್ವಾರಕೆ ವೀಕ್ಷಿಸಿದ ಪ್ರಧಾನಿ

ಸ್ಕೂಬಾ ಡೈವಿಂಗ್‌ ಮೂಲಕ ಶ್ರೀ ಕೃಷ್ಣನಿಗೆ ನಮನ ಸಲ್ಲಿಸಿದ ನರೇಂದ್ರ ಮೋದಿ

ದೇವಭೂಮಿ ದ್ವಾರಕ, ಫೆ. 25 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಕೂಬಾ ಡೈವಿಂಗ್ ಮೂಲಕ ಗುಜರಾತ್‌ನ ಕಡಲ ತೀರದಲ್ಲಿ ಮುಳುಗಿ ಪುರಾತನ ದ್ವಾರಕಾ ನಗರವನ್ನು ವೀಕ್ಷಿಸಿದ್ದಾರೆ.

ಶ್ರೀ ಕೃಷ್ಣನ ಪುರಾತನ ನಗರದ ದ್ವಾರಕೆಯ ದರ್ಶನ ಪಡೆದಿರುವುದು ದೈವಿಕ ಅನುಭವ ನೀಡಿದೆ ಎಂದು ಮೋದಿ ಹೇಳಿದ್ದಾರೆ.

ಸಮುದ್ರ ತಳದಲ್ಲಿ ಪ್ರಧಾನಿ ಮೋದಿ ಧ್ಯಾನಸ್ಥಿತಿಯಲ್ಲಿ ಕುಳಿತು ಶ್ರೀ ಕೃಷ್ಣನಿಗೆ ನಮನ ಸಲ್ಲಿಸಿದರು. ಕೃಷ್ಣ ದೇವರ ಎದುರು ನವಿಲುಗರಿಗಳ ನಮನವನ್ನೂ ಸಲ್ಲಿಸಿದರು.

ಪ್ರಧಾನಿ ಮೋದಿ ಅವರು ದ್ವಾರಕಾ ಕರಾವಳಿಯ ಬೇಟ್‌ ದ್ವಾರಕಾ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ಕೈಗೊಂಡರು. ಇಲ್ಲಿಂದ ಜನರು ಸಮುದ್ರದಡಿ ಇರುವ ಪುರಾತನ ದ್ವಾರಕಾ ನಗರವನ್ನು ವೀಕ್ಷಿಸಬಹುದಾಗಿದೆ.

ನಂತರ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪುರಾತನ ನಗರವನ್ನು ವೀಕ್ಷಿಸಿ ಭಾವುಕನಾಗಿದ್ದೇನೆ. ನನ್ನ ಕಣ್ಣೆದುರು 21ನೇ ಶತಮಾನದ ಭವ್ಯ ಭಾರತದ ಚಿತ್ರಣ ಬಂದಿದೆ ಎಂದು ಹೇಳಿದರು. ಸಮುದ್ರದಲ್ಲಿ ದ್ವಾರಕೆ ವೀಕ್ಷಿಸಿದಾಗ, ವಿಕಸಿತ ಭಾರತ ನಿರ್ಮಿಸುವ ನನ್ನ ಬದ್ಧತೆ ಇನ್ನಷ್ಟು ಹೆಚ್ಚಾಗಿದೆ ಎಂದು ಮೋದಿ ತಿಳಿಸಿದರು.

ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥಿಸಿರುವುದು ದೈವಿಕ ಅನುಭವ ನೀಡಿದೆ. ಅಲ್ಲಿ ಅಧ್ಯಾತ್ಮ ಹಾಗೂ ಇತಿಹಾಸ ಸಂಗಮಿಸಿವೆ. ಅಲ್ಲಿನ ಪ್ರತಿ ಕ್ಷಣವೂ ದೈವೀಕ ಸ್ಪರ್ಷ ನೀಡಿದೆ. ಶ್ರೀ ಕೃಷ್ಣ ದೇವರ ಅನಂತ ಉಪಸ್ಥಿತಿ ಪ್ರತಿಧ್ವನಿಸಿದೆ ಎಂದು ಮೋದಿ ಹೇಳಿದ್ದಾರೆ.

ಪುರಾತತ್ವ ಶಾಸ್ತ್ರಜ್ಞರು ದ್ವಾರಕೆಯ ಬಗ್ಗೆ ಬಹಳಷ್ಟು ಹೇಳಿ ದ್ದಾರೆ. ದ್ವಾರಕೆಯ ಬಗ್ಗೆ ನಮ್ಮ ಶಾಸ್ತ್ರಗಳಲ್ಲೂ ಸಾಕಷ್ಟು ತಿಳಿಸ ಲಾಗಿದೆ. ವಿಶ್ವಕರ್ಮ ದೇವರೇ ದ್ವಾರಕ ನಗರವನ್ನು ನಿರ್ಮಿಸಿದ ಎಂಬ ಪ್ರತೀತಿಯೂ ಇದೆ ಎಂದು ಪ್ರಧಾನಿ ಹೇಳಿದರು.

ಪುರಾತನ ದ್ವಾರಕ ನಗರವು ಭವ್ಯ ನಗರವೊಂದರ ಯೋಜನೆ ಹಾಗೂ ಅಭಿವೃದ್ಧಿಗೆ ಉದಾಹರಣೆಯಾಗಿದೆ. ದ್ವಾರಕೆಯ ದರ್ಶನ ಪಡೆದಾಗ ಪುರಾತನ ಭವ್ಯ ಹಾಗೂ ದಿವ್ಯತೆಯ ಅನುಭವವಾಯಿತು. ಅಲ್ಲಿ ಶ್ರೀ ಕೃಷ್ಣನಿಗೆ ನಮಿಸಿದೆ ಹಾಗೂ ನಾನು ತೆಗೆದುಕೊಂಡು ಹೋಗಿದ್ದ ನವಿಲುಗರಿಗಳನ್ನು ಕೃಷ್ಣ ದೇವರಿಗೆ ಸಮರ್ಪಿಸಿದೆ ಎಂದು ಮೋದಿ ತಿಳಿಸಿದರು.

ಸಮುದ್ರ ತಳದಲ್ಲಿರುವ ದ್ವಾರಕೆಯ ಬಗ್ಗೆ ಬಹಳ ವರ್ಷಗಳಿಂದ ಕುತೂಹಲ ಇತ್ತು. ಈಗ ನನ್ನ ವರ್ಷಗಳ ಬಯಕೆ ಈಡೇರಿದೆ. ಇದರಿಂದ ಭಾವುಕನಾಗಿದ್ದೇನೆ. ಈ ಪವಿತ್ರ ಭೂಮಿ ಸ್ಪರ್ಷಿಸುವ ದಶಕಗಳ ಕಾಲದ ಆಸೆ ಇಂದು ಈಡೇರಿದೆ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಇದೇ ವೇಳೆ ದ್ವಾರಕೆಯಲ್ಲಿರುವ ಶ್ರೀ ಕೃಷ್ಣ ದೇವಾಲಯದಲ್ಲೂ ಪೂಜೆ ಸಲ್ಲಿಸಿದರು.

ಇದಕ್ಕೂ ಮುಂಚೆ ಪ್ರಧಾನಿ ಮೋದಿ ಅವರು ಸುದರ್ಶನ್ ಸೇತುವೆ ಉದ್ಘಾಟಿಸಿದರು. 2.32 ಕಿ.ಮೀ. ಉದ್ದದ ಇದು, ದೇಶದ ಅತ್ಯಂತ ದೊಡ್ಡ ತಂತಿ ಸೇತುವೆಯಾಗಿದೆ. ಇದು ಅರಬ್ಬೀ ಸಮುದ್ರದಲ್ಲಿರುವ ಬೇಟ್‌ ದ್ವಾರಕಾ ದ್ವೀಪವನ್ನು ದೇವಭೂಮಿ ದ್ವಾರಕ ಜಿಲ್ಲೆಯ ಒಖಾ ಮುಖ್ಯ ಭೂಮಿಯನ್ನು ಸಂಪರ್ಕಿಸುತ್ತದೆ. 

ಇದೇ ವೇಳೆ ಅವರು ದೇವಭೂಮಿ ದ್ವಾರಕ, ಜಾಮ್ನಗರ ಹಾಗೂ ಪೋರಬಂದರ್‌ ಜಿಲ್ಲೆಗಳಲ್ಲಿನ 4,100 ಕೋಟಿ ರೂ.ಗಳ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

error: Content is protected !!