ಟಿವಿ ಸ್ಟೇಷನ್ ಕೆರೆ ಸುತ್ತ ಸ್ವಚ್ಛತಾ ಕಾರ್ಯ

ಟಿವಿ ಸ್ಟೇಷನ್ ಕೆರೆ ಸುತ್ತ ಸ್ವಚ್ಛತಾ ಕಾರ್ಯ

ಕೆರೆ ನಿರ್ಲಕ್ಷ್ಯಕ್ಕೆ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಅಸಮಾಧಾನ

ದಾವಣಗೆರೆ, ಫೆ.25- ನಗರದ ಟಿವಿ ಸ್ಟೇಷನ್ ಕೆರೆ ಸ್ವಚ್ಛತಾ ಕಾರ್ಯಕ್ರಮವನ್ನು ಭಾನುವಾರ ಮುಂಜಾನೆ ಹಮ್ಮಿಕೊಳ್ಳಲಾಗಿತ್ತು.

33ನೇ ವಾರ್ಡ್ ಸದಸ್ಯ ಕೆ.ಎಂ. ವೀರೇಶ್ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ 50ಕ್ಕೂ ಹೆಚ್ಚು ಪೌರ ಕಾರ್ಮಿಕರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಪಾಲಿಕೆ ಸದಸ್ಯ ವೀರೇಶ್, ನಗರಕ್ಕೆ ಕುಡಿಯುವ ನೀರು ಒದಗಿಸುವಲ್ಲಿ ಒಂದಾಗಿರುವ ಈ ಕೆರೆಯನ್ನು ಪಾಲಿಕೆಯ  ಮೇಯರ್ ಹಾಗೂ ಆಯುಕ್ತರು ನಿರ್ಲಕ್ಷಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಕೆರೆ ಸುತ್ತ ಬಂಡ್ ನಿರ್ಮಿಸಿ, ವಿದ್ಯುತ್ ದೀಪಗಳನ್ನು ಅಳವಡಿಸಿ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಆದರೆ, ಸ್ವಚ್ಛತೆ ಇಲ್ಲದ ಕಾರಣ ಗಿಡಗಂಟಿಗಳು ಬೆಳೆದು ಕೆರೆ ಮತ್ತೆ ತನ್ನ ಹಳೆಯ ಸ್ಥಿತಿಗೆ ಮರಳಿದೆ ಎಂದರು.

ಕೆರೆಗೆ ಒಮ್ಮೆ ಭೇಟಿ ನೀಡಿ ಪರಿಶೀಲಿಸುವಂತೆ ಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್. ಅವರನ್ನು ಕೇಳಿಕೊಂಡರೂ ನಿರ್ಲಕ್ಷ್ಯ ವಹಿಸಿದ್ದಾರೆ. 

ಈ ಬಾರಿಯ ಬಜೆಟ್‌ನಲ್ಲಿ ಕೆರೆ ಸಂರಕ್ಷಣೆಗೆ ಹಣವನ್ನೂ ಮೀಸಲಿಟ್ಟಿಲ್ಲ.
ಕನಿಷ್ಟ ತಿಂಗಳಿಗೊಮ್ಮೆಯಾದರೂ ಹೆಚ್ಚಿನ ಸಂಖ್ಯೆಯ ಪೌರ ಕಾರ್ಮಿಕರನ್ನು ಒದಗಿಸಿ ಕೆರೆಯ ಸುತ್ತ ಸ್ವಚ್ಛ ಗೊಳಿಸಬೇಕು ಎಂದು ಒತ್ತಾಯಿಸಿದರು.

ಟಿವಿ ಸ್ಟೇಷನ್ ಕೆರೆಯು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಇದನ್ನು ಅಭಿವೃದ್ಧಿ ಪಡಿಸಿದರೆ ಹೆದ್ದಾರಿ ಮೂಲಕ ಹಾದು ಹೋಗುವವರಿಗೆ ದಾವಣಗೆರೆ ಬಗ್ಗೆ ಹೆಮ್ಮೆ ಎನಿಸುತ್ತದೆ. ಆದರೆ ಎಲ್ಲರ ಗಮನ ಕೇವಲ ಕುಂದುವಾಡ ಕೆರೆ ಅಭಿವೃದ್ಧಿ ಕಡೆಯೇ ಇದೆ. ಇದು ಸರಿಯಲ್ಲ. ಈ ಕೆರೆಯನ್ನು ಅಭಿವೃದ್ಧಿ  ಪಡಿಸಬೇಕು ಎಂದರು.

error: Content is protected !!