ನಾಲೆಗೆ ನೀರು: ಅವೈಜ್ಞಾನಿಕ ವೇಳಪಟ್ಟಿ ರದ್ದುಗೊಳಿಸಿ

ನಾಲೆಗೆ ನೀರು: ಅವೈಜ್ಞಾನಿಕ ವೇಳಪಟ್ಟಿ ರದ್ದುಗೊಳಿಸಿ

ಕಾರಿಗನೂರು ಕ್ರಾಸ್‌ನಲ್ಲಿ  ರಾಜ್ಯ ಹೆದ್ದಾರಿ ತಡೆ ನಡೆಸಿ ಒತ್ತಾಯಿಸಿದ ರೈತರು

ದಾವಣಗೆರೆ, ಮಾ.23- ಭದ್ರಾ ನಾಲೆಯಲ್ಲಿ ನೀರು ಹರಿಸುವ ವೇಳಾಪಟ್ಟಿ ಅವೈಜ್ಞಾನಿಕವಾಗಿದ್ದು, ವೇಳಾಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘ ಮತ್ತು ರೈತರ ಒಕ್ಕೂಟದಿಂದ ಶುಕ್ರವಾರ ಕಾರಿಗನೂರು ಕ್ರಾಸ್‌ ನಲ್ಲಿನ ಜೆ. ಹೆಚ್. ಪಟೇಲ್ ವೃತ್ತದಲ್ಲಿ ದಾವಣಗೆರೆ-ಚೆನ್ನಗಿರಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸ ಲಾಯಿತು.

ರೈತ ಮುಖಂಡ ತೇಜಸ್ವಿ ಪಟೇಲ್, ಕೊಳೇ ನಹಳ್ಳಿ ಬಿ.ಎಂ. ಸತೀಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಭದ್ರಾ ನೀರು ಹರಿಸಿ ವಾರವಾದರೂ ಕೊನೆ ಭಾಗಕ್ಕೆ ನೀರು ತಲುಪಿಲ್ಲ. ಕೇವಲ 12 ದಿನ ನೀರು ಬಿಡುವ ಅವೈಜ್ಞಾನಿಕ ವೇಳಾಪಟ್ಟಿ ರದ್ದುಗೊಳಿಸಬೇಕು. 20 ದಿನ ನೀರು ಹರಿಸಿ, 20 ದಿನ ನೀರು ನಿಲ್ಲಿಸುವ ವೇಳಾಪಟ್ಟಿ ಜಾರಿ ಮಾಡಬೇಕು ಎಂದು ಆಗ್ರಹಿಸಲಾಯಿತು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಉಪವಿಭಾ ಗಾಧಿಕಾರಿ ದುರ್ಗಾಶ್ರೀ ಮತ್ತು ತಹಶೀಲ್ದಾರ್ ಅಶ್ವತ್ಥ್  ಅವರು, ಜಿಲ್ಲಾಧಿಕಾರಿಗಳು ಮಾತು ಕತೆಗೆ ಕರೆದಿದ್ದಾಗಿ ರೈತ ಮುಖಂಡರನ್ನು ಆಹ್ವಾನಿಸಿ, ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಜೆ ಸಭೆ ನಡೆಯಿತು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ಜಿಲ್ಲೆಯ ಪ್ರತಿನಿಧಿಯಾಗಿ ಐಸಿಸಿ ಸಭೆಗೆ ಹೋಗುವ ಜಿಲ್ಲಾಧಿಕಾರಿಗಳು, ಅಲ್ಲಿಗೆ ತೆರಳುವ ಮುನ್ನ ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಬೇಕು. ಅಚ್ಚುಕಟ್ಟು ಪ್ರದೇಶ ಎಷ್ಟಿದೆ, ಎಷ್ಟು ನೀರು ಬೇಕಾಗುತ್ತದೆ ಎಂಬ ಮಾಹಿತಿ ಪಡೆದು ಹೋಗಬೇಕು. ಕೇವಲ ಅಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವುದಷ್ಟೇ ನಿಮ್ಮ ಕರ್ತವ್ಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು, ಈಗಾಗಲೇ ನಾಲೆ ವ್ಯಾಪ್ತಿಯಲ್ಲಿ  ಅಕ್ರಮ ಪಂಪ್‌ಸೆಟ್‌ಗಳನ್ನು ತೆರವು ಗೊಳಿಸಲು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಪಂಪ್‌ ಸೆಟ್ ತೆರವು ಮಾಡಿದರೆ ಮಾತ್ರ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುತ್ತದೆ ಎಂದರು.

ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ 20 ದಿನ ನೀರು ಬಿಡಲು ಪ್ರಯತ್ನ ಮಾಡುವ ಭರವಸೆ ನೀಡಿದರು.

ಸಭೆಯಲ್ಲಿ ರೈತ ಮುಖಂಡರಾದ ತೇಜಸ್ವಿ ಪಟೇಲ್, ಕೊಳೇನಹಳ್ಳಿ ಬಿ.ಎಂ. ಸತೀಶ್, ಮತ್ತಿ ವಕೀಲ ಹನುಮಂತಪ್ಪ, ಕುಕ್ಕುವಾಡದ ಕೆ.ಎನ್ ಮಂಜುನಾಥ್, ಡಿ.ಮಲ್ಲೇಶಪ್ಪ, ಡಿ.ಸಿ. ದಿನೇಶ್, ಡಿ.ಬಿ. ಅರವಿಂದ್, ಎಸ್.ಎಂ. ಕುಮಾರಸ್ವಾಮಿ, ಚಂದ್ರಪ್ಪ ಮೇಷ್ಟ್ರು, ಮುದಹದಡಿ ದಿಳ್ಳೆಪ್ಪ, ಕಾರಿಗನೂರು ಮಂಜುನಾಥ ಪಟೇಲ್, ಬಿ.ಎಲ್.ಸತೀಶ್, ಶಿವಣ್ಣ, ಗಂಗಾಧರ, ಹೂವಿನಮಡು ಪ್ರಕಾಶ್, ಗೋಣಿವಾಡ ಪಿ.ಎ. ನಾಗರಾಜಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!