ಪ್ರತಿ ರಾಜ್ಯದಲ್ಲಿ ಸಿ.ಆರ್.ಸಿ. ಸ್ಥಾಪನೆ

ಪ್ರತಿ ರಾಜ್ಯದಲ್ಲಿ ಸಿ.ಆರ್.ಸಿ. ಸ್ಥಾಪನೆ

ವೊಡ್ಡಿನಹಳ್ಳಿಯಲ್ಲಿ ಸಿಆರ್‌ಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವೀರೇಂದ್ರ ಕುಮಾರ್

ದಾವಣಗೆರೆ, ಫೆ. 21 – ಪ್ರತಿಯೊಂದು ರಾಜ್ಯದಲ್ಲೂ ದಿವ್ಯಾಂಗ ಜನರ ಕಲ್ಯಾಣಕ್ಕಾಗಿ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿ.ಆರ್.ಸಿ.) ಸ್ಥಾಪಿಸಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ತಿಳಿಸಿದ್ದಾರೆ.

ನಗರ ಸಮೀಪದ ವೊಡ್ಡನಹಳ್ಳಿಯಲ್ಲಿ ಸಿ.ಆರ್.ಸಿ. ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆನ್‌ಲೈನ್‌ ಮೂಲಕ ಪಾಲ್ಗೊಂಡು ಅವರು ಮಾತನಾಡಿದರು.

ಈ ಕೇಂದ್ರದಿಂದ ದಿವ್ಯಾಂಗರಿಗೆ ಸರ್ಕಾರಿ ಯೋಜನೆಗಳ ಲಾಭ ಸಿಗಲಿದೆ ಹಾಗೂ ವಿಶೇಷ ಶಿಕ್ಷಣವೂ ಸಿಗಲಿದೆ. ಫಿಸಿಯೋಥೆರಪಿ ಇತ್ಯಾದಿ ಚಿಕಿತ್ಸೆಗಳೂ ಸಿಗಲಿವೆ ಎಂದವರು.

ಸಶಕ್ತೀಕರಣ, ಸ್ವಾವಲಂಬನೆ ಹಾಗೂ ಆತ್ಮನಿರ್ಭರತೆಗೆ ಸಿ.ಆರ್.ಸಿ.ಗಳು ನೆರವಾಗಲಿವೆ. ಸಿ.ಆರ್.ಸಿ. ಭವನಗಳ ಜೊತೆಗೆ ರಾಷ್ಟ್ರೀಯ ಸಂಸ್ಥೆಗಳ ಮೂಲಕವೂ ನಿರಂತರವಾಗಿ ದಿವ್ಯಾಂಗರ ಸಬಲೀಕರಣಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು `ಸಬ್ಕಾ ಸಾಥ್’ ಎಂದು ಹೇಳುವಾಗ ಅದರಲ್ಲಿ ದಿವ್ಯಾಂಗರೂ ಪ್ರಮುಖ ಪಾತ್ರವಾಗಿದ್ದಾರೆ. ಅವರಿಗೆ ಸರಿಯಾದ ಅವಕಾಶ, ಉಪಕರಣಗಳು ದೊರೆತರೆ ಅವರಲ್ಲಿನ ದಿವ್ಯ ಪ್ರತಿಭೆ ಹೊರ ಬರಲಿದೆ. ಇದರಿಂದ ಅವರ ಕುಟುಂಬ, ಸಮಾಜ ಹಾಗೂ ರಾಷ್ಟ್ರಕ್ಕೆ ಕೊಡುಗೆ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸಿ.ಆರ್.ಸಿ. ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಒತ್ತಾಯಿಸಿದ್ದರು. ನಾನು ದೈಹಿಕವಾಗಿ ಅಲ್ಲಿ ಹಾಜರಾಗಲು ಸಾಧ್ಯವಾಗಿಲ್ಲದಿದ್ದರೂ, ಮಾನಸಿಕವಾಗಿ ಹಾಗೂ ಭಾವನಾತ್ಮಕಾಗಿ ನಿಮ್ಮೊಂದಿಗಿದ್ದೇನೆ ಎಂದು ವೀರೇಂದ್ರ ಕುಮಾರ್ ಹೇಳಿದರು.

error: Content is protected !!