ಮಲೇಬೆನ್ನೂರು, ಫೆ. 21- ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಪ್ರತಿನಿತ್ಯ ಸಂಗ್ರ ಹಿಸಿರುವ ಹಸಿ ಕಸವನ್ನು ಸಾಂಪ್ರದಾಯಿಕ ತಿಪ್ಪೇ ಗೊಬ್ಬರ ರೀತಿಯಲ್ಲಿ ತಯಾರಿಸುವ ಪ್ರಾಯೋಗಿಕ ಪ್ರಯತ್ನದಲ್ಲಿ ಪುರಸಭೆ ಯಶಸ್ವಿಯಾಗಿದೆ.
ಪಟ್ಟಣದ ಆಶ್ರಯ ಕಾಲೋನಿ ಸಮೀಪ ಇರುವ ಪುರಸಭೆಯ ಜಾಗದಲ್ಲಿ ಸುಮಾರು 6 ಅಡಿ ಆಳದ 15ಅಡಿ ಅಗಲ ಮತ್ತು 60 ಅಡಿ ಉದ್ದದ ಗುಂಡಿಯಲ್ಲಿ ಮನೆ-ಮನೆಯಿಂದ ಸಂಗ್ರಹಿಸಿದ ಹಸಿ ಕಸವನ್ನು ಹಾಕಲಾಗಿತ್ತು. ಜೊತೆಗೆ ಆ ಕಸಕ್ಕೆ ಮಣ್ಣು- ನೀರು ಬೆರೆಸಿ ತಿಪ್ಪೆಗೊಬ್ಬರವನ್ನಾಗಿ ಮಾಡಿ ಬುಧವಾರ ಬಹಿರಂಗ ಹರಾಜು ಮೂಲಕ ರೈತರಿಗೆ ಮಾರಾಟ ಮಾಡಲಾಯಿತು.
ಇದೇ ರೀತಿ ಮನೆ-ಮನೆಯಿಂದ ಸಂಗ್ರಹಿಸಿದ್ದ ಒಣ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ತ್ಯಾಜ್ಯವನ್ನು ಬೇರೆ ಬೇರೆಯಾಗಿ ಬೇರ್ಪಡಿಸಿ ಇಟ್ಟಿದ್ದು, ಮರು ಬಳಕೆ ವಸ್ತುಗಳನ್ನು ಬುಧವಾರ ಬಹಿರಂಗ ಹರಾಜು ಮೂಲಕ ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡಲಾಯಿತು.
ನಮಗೆ ಪೌರ ಕಾರ್ಮಿಕರ ಕೊರತೆ ಇದ್ದರೂ ಸಹ ಅವರ ಸಹಾಯವನ್ನು ಪಡೆದು ಹಸಿ ಕಸ ಹಾಗೂ ಒಣ ತ್ಯಾಜ್ಯಗಳನ್ನು ಬೇರ್ಪಡಿಸಿ, ಸಂಗ್ರಹಿಸಿದ್ದರಿಂದ ನಮ್ಮ ಪುರಸಭೆಗೆ 40 ರಿಂದ 50 ಸಾವಿರ ರೂ. ಆದಾಯ ಬಂದಿದೆ ಎಂದು ಮುಖ್ಯಾಧಿಕಾರಿ ಎ. ಸುರೇಶ್ `ಜನತಾವಾಣಿ’ಗೆ ತಿಳಿಸಿದರು.
ನಾವು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಮಾಡಿದ ವಿನೂತನ ಪ್ರಯತ್ನದಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ದೇಶ ಹೊಂದಿದ್ದೇವೆ.
ಮಲೇಬೆನ್ನೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದ ಕಾರಣ, ಈ ಮೊದಲು ಈ ತ್ಯಾಜ್ಯವನ್ನು ಹರಿಹರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸುತ್ತಿದ್ದೆವು. ಈಗ ನಾವು ಈ ರೀತಿ ಮಾಡಿದ್ದರಿಂದ ವಾಹನಗಳ ಬಳಕೆ ಕಡಿಮೆಯಾಗಿ ಡೀಸೆಲ್ ಉಳಿತಾಯವಾಗಿದೆ.
ಇದಕ್ಕೆ ಶ್ರಮ ವಹಿಸಿದ ಪೌರ ಕಾರ್ಮಿಕರನ್ನು ಮತ್ತು ಪರಿಸರ ಇಂಜಿನಿಯರ್ ಉಮೇಶ್, ಹಿರಿಯ ಆರೋಗ್ಯ ನಿರೀಕ್ಷಕ ನವೀನ್, ಆರೋಗ್ಯ ನಿರೀಕ್ಷಕ ಶಿವರಾಜ್, ಅವಿನಾಶ್ ಮೇಲ್ವಿಚಾರಕ ತಿಮ್ಮೇಗೌಡ ಅವರನ್ನು ಮುಖ್ಯಾಧಿಕಾರಿ ಎ. ಸುರೇಶ್ ಅಭಿನಂದಿಸಿದ್ದಾರೆ.
ಪುರಸಭೆ ಸದಸ್ಯ ನಯಾಜ್, ಬಿ.ಸುರೇಶ್, ಭೋವಿಕುಮಾರ್, ಕೆ.ಪಿ. ಗಂಗಾಧರ್, ಎಂ.ಪ್‌ಬಿ. ರುಸ್ತುಂ, ಆಶ್ರಯ ಸಮಿತಿ ಸದಸ್ಯ ಫಕೃದ್ದೀನ್ ಮತ್ತು ಅಧಿಕಾರಿಗಳಾದ ದಿನಕರ್, ಉಮೇಶ್, ಶಿವರಾಜ್, ಅವಿನಾಶ್ ಈ ವೇಳೆ ಹಾಜರಿದ್ದರು.