ನಾಗರಿಕರ ಸಹಕಾರವಿದ್ದಲ್ಲಿ ಅಪರಾಧಗಳ ಇಳಿಕೆ

ನಾಗರಿಕರ ಸಹಕಾರವಿದ್ದಲ್ಲಿ ಅಪರಾಧಗಳ ಇಳಿಕೆ

ದಾವಿವಿ ವಿಧಿ ವಿಜ್ಞಾನ, ಅಪರಾಧ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ನಟರಾಜ್

ದಾವಣಗೆರೆ, ಫೆ. 21- ಎಲ್ಲಿ ಸಾರ್ವಜನಿಕರ ಹಾಗೂ ಪೊಲೀಸರ ಸಂಬಂಧ ಚೆನ್ನಾಗಿರುತ್ತದೆಯೋ ಅಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿರುತ್ತದೆ ಎಂದು ದಾವಣಗೆರೆ ವಿವಿ ವಿಧಿ ವಿಜ್ಞಾನ ವಿಭಾಗ, ಅಪರಾಧ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಹೇಳಿದರು.

ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಹಾಗೂ ಎನ್‌ಎಸ್‌ಎಸ್‌ ವಿಭಾಗ, ದಾವಣಗೆರೆ ವಿವಿ ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ `ವಿದ್ಯಾರ್ಥಿ-ಪೊಲೀಸ್ ಅನುಭವ ಕಲಿಕೆ’ ತರಬೇತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲಿಯೇ ಅಪರಾಧಗಳು ನಡೆದರೂ ಅದನ್ನು ತಡೆಯುವುದು ಪೊಲೀಸರ ಕೆಲಸ ಎನ್ನುವ  ಭಾವನೆ ಎಲ್ಲರಲ್ಲಿದೆ. ಆದರೆ ಅಪರಾಧ ತಡೆಯುವಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ ಏನು? ಪೊಲೀಸರಿಗೆ ತಾನು ಏನು ನೆರವು ನೀಡಬೇಕು? ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದರು.

ಪೊಲೀಸರು ಹಾಗೂ ಸಾರ್ವಜನಿಕರ ಪರಸ್ಪರ ಸಹಕಾರ ಇಲ್ಲದಿದ್ದರೆ ಯಾವುದೇ ಅಪರಾಧದ ಪತ್ತೆ ಅಥವಾ ನಿಯಂತ್ರಣ ಸಾಧ್ಯವಿಲ್ಲ. ಎನ್‌ಸಿಆರ್‌ಬಿ ವರದಿ ಪ್ರಕಾರ ಬೆರಳೆಣಿಕೆಯಷ್ಟು ಅಪರಾಧಿಗಳು ಮಾತ್ರ ಶಿಕ್ಷೆ ಅನುಭವಿಸುತ್ತಾರೆ. ಪೊಲೀಸರು ಎಷ್ಟೇ ಶ್ರಮ ವಹಿಸಿ ಅಪರಾಧಿಗಳನ್ನು ಹಿಡಿದು ಜೈಲಿಗಟ್ಟಿದರೂ ಅಪರಾಧ ಸಾಬೀತು ಪಡಿಸ ಲಾಗದೆ ಅನೇಕರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿ ದ್ದಾರೆ. ನಾಗರಿಕರು ತಮ್ಮ ಜವಾಬ್ದಾರಿ ನಿರ್ವಹಿಸದಿರುವುದೇ ಇದಕ್ಕೆ ಕಾರಣ ಎಂದರು.

ಅಪರಾಧ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿದರೆ ನಮಗೆ ನಾವೇ ಸಹಕಾರ ಕೊಟ್ಟುಕೊಂಡಂತೆ, ಕಾನೂನು ಸುವ್ಯವಸ್ಥೆಗೆ, ನಮ್ಮ ನೆಮ್ಮದಿಗೆ ಸಹಕಾರ ನೀಡಿದಂತೆ ಎಂದು ನಟರಾಜ್ ಹೇಳಿದರು.

ಈ ಕಾರ್ಯಕ್ರಮದ ಮೂಲಕ ತರಬೇತಿ ಪಡೆಯುವ ವಿದ್ಯಾರ್ಥಿಗಳು ನಿಮ್ಮ ಕಾಲೇಜಿನಲ್ಲಿ ಉಳಿದ ವಿದ್ಯಾರ್ಥಿಗಳಿಗೂ ತಮ್ಮ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಬೇಕು. ಎಲ್ಲರೂ ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸಿದರೆ ಪೊಲೀಸರ ಅರ್ಧದಷ್ಟು ಹೊರೆ ಕಡಿಮೆಯಾಗುತ್ತದೆ ಎಂದರು.

ಎಸ್ಪಿ ಉಮಾ ಪ್ರಶಾಂತ್ ಕಾರ್ಯಕ್ರಮ ಉದ್ಘಾಟಿಸಿ,  ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತರಬೇತಿಯ ಪ್ರಾಯೋಗಿಕ ಹಂತವಾಗಿ 5 ಕಾಲೇಜುಗಳಿಂದ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, 30 ದಿನಗಳ ಕಾಲ ಮೂಲಭೂತ ಅಪರಾಧಗಳ ಕಾನೂನು, ಅಪರಾಧಿಗಳ ತನಿಖೆ, ಸಂಚಾರ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆ, ಮಾದಕ ವ್ಯಸನ ಕಾರ್ಯಕ್ರಮಗಳ ಬಗ್ಗೆ ಹೇಳಿಕೊಡಲಾಗುತ್ತದೆ ಎಂದರು.

ದಾವಿವಿ ಎನ್‌ಎಸ್‌ಎಸ್ ವಿಭಾಗದ ಸಂಯೋಜನಾಧಿಕಾರಿ ಅಶೋಕ್ ಕುಮಾರ್ ಪಾಳೇದ ಉಪನ್ಯಾಸ ನೀಡಿದರು.

ಡಿವೈಎಸ್ಪಿ ಪ್ರಶಾಂತ್ ಮನೋಳಿ ಉಪಸ್ಥಿತರಿದ್ದರು. ದೇವರಾಜ್ ಸಂಗೇನಹಳ್ಳಿ ನಿರೂಪಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ ಸಂತೋಷ್ ಸ್ವಾಗತಿಸಿದರು. ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ವಂದಿಸಿದರು.

error: Content is protected !!