ತ್ಯಾವಣಿಗೆಗೆ ಆಗಮಿಸಿದ ರೈತರ ಪಾದಯಾತ್ರೆ

ತ್ಯಾವಣಿಗೆಗೆ ಆಗಮಿಸಿದ ರೈತರ ಪಾದಯಾತ್ರೆ

ಬೇಡಿಕೆ ಈಡೇರಿಕೆಗಾಗಿ 22 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ

ದಾವಣಗೆರೆ, ಫೆ. 20 –  ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ  ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಿಂದ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಎರಡನೇ ದಿನವಾದ ಮಂಗಳವಾರ ತ್ಯಾವಣಿಗೆ ಗ್ರಾಮ ಪಂಚಾಯತ್ ಎದುರು ಸಾರ್ವಜನಿಕ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಕ್ಕೂವಾಡ ಮಂಜುನಾಥ್, ಕೇಂದ್ರದ ಬಿಜೆಪಿ ಸರ್ಕಾರ ಸಾಮಾನ್ಯ ಜನರು, ರೈತರ ಪರವಾಗಿ ಕಾಯಿದೆಗಳನ್ನು ಜಾರಿಗೊಳಿಸದೆ ಬಂಡವಾಳ ಶಾಹಿಗಳ ಪರವಾಗಿದ್ದು, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.

ಜಿ.ಪಂ. ಮಾಜಿ ಸದಸ್ಯ ಪಿ.ಸಿ.ಗೋವಿಂದಸ್ವಾಮಿ ಮಾತನಾಡಿ, ತಾಲ್ಲೂಕು ಕೇಂದ್ರವಾಗಲು ಎಲ್ಲ ಸೌಲಭ್ಯಗಳನ್ನು ಹೊಂದಿರುವ ತ್ಯಾವಣಿಗೆ ಗ್ರಾಮವನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು. ತಾಲ್ಲೂಕು ಘೋಷಣೆಗೆ ಸಂಬಂಧಿಸಿದಂತೆ ಸರ್ಕಾರದ ನೂರು ಎಕರೆ ಜಮೀನು‌ ಇದ್ದು, ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮ‌ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಲೋದಹಳ್ಳಿ ರವಿ ಮಾತನಾಡಿ, ಕಳೆದ ಎರಡು ದಿನಗಳಿಂದ ಪಾದಯಾತ್ರೆ ನಡೆಯುತ್ತಿದೆ. ಇದುವರೆಗೂ ಯಾವುದೇ ಅಧಿಕಾರಿಗಳು ನಮ್ಮ ಬೇಡಿಕೆ ಆಲಿಸಲು ಬಂದಿಲ್ಲ. ಈ ಕೂಡಲೇ ಬಗರ್ ಹುಕ್ಕುಂ ಅಡಿ ಸಲ್ಲಿಸಿದ್ದ ಫಾರಂ ನಂಬರ್ 57 ನ್ನು ತಿರಸ್ಕರಿಸುವ ಬದಲು ಸಂಭವಿಸಿದವರಿಗೆ ಸರಿಯಾದ ಮಾಹಿತಿ ಒದಗಿಸಿ  ಭೂಮಿ ಹಕ್ಕುಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಗಂಡುಗಲಿ ಮಾತನಾಡಿ, ಆಸ್ತಾಪನಹಳ್ಳಿಯಲ್ಲಿ ಎಂಪಿಎಂ ಮಿಲ್‌ಗೆ ನೀಡಿರುವ ಭೂಮಿಯ ಲೀಸ್‌ ಅವದಿ ಮುಗಿದಿದ್ದು, ಮತ್ತೆ ಈ ಜಮೀನನ್ನು ಎಂಪಿಎಂಸಿಗೆ ಲೀಸ್‌ ನೀಡುವ ಬದಲು ವಾಪಾಸ್ ಪಡೆದು ಬಗರ್ ಹುಕ್ಕುಂ ರೈತರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.

ನಿಟುವಳ್ಳಿ ಪೂಜಾರ ಅಂಜಿನಪ್ಪ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ‌ ಬೆಲೆ ಕಾಯಿದೆ ಜಾರಿ ಮಾಡಬೇಕೆಂದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ರೈತರ ಮೇಲೆ‌ ಶೆಲ್ ದಾಳಿ, ಜಲ ಫಿರಂಗಿ ಪ್ರಯೋಗಿಸುವ ಮೂಲಕ ಹೋರಾಟ ಹತ್ತಿಕ್ಕಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆಗೆ ಏಕೆ ಕಾನೂನು ರಚನೆ ಮಾಡುತ್ತಿಲ್ಲ. ಈ ಕಾನೂನು ಜಾರಿಯಾಗದೆ ಹೊರತು ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ, ಮತ್ತೊಂದೆಡೆ ಕೇಂದ್ರ ಸರ್ಕಾರ 29 ರೂಗೆ  ಭಾರತ್ ರೈಸ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಅಕ್ಕಿ ಬಿಡುಗಡೆ ಮಾಡಿದೆ. ಇದು ಸಹಜವಾಗಿಯೇ ಭತ್ತ ಬೆಳೆಗಾರರಿಗೆ ಆತಂಕ ತಂದಿದೆ. ಇದರ ಪರಿಣಾಮ ಭತ್ತದ ಬೆಲೆ ಕುಸಿದಿದೆ. ಈಗಾಗಲೇ ಖರೀದಾರರು ಖರೀದಿ ಮಾಡಿರುವ ಭತ್ತದ ಹಣ ಕೇಳಲು ಹೋದರೆ ಗೋದಾಮಿನಲ್ಲಿರುವ ನಿಮ್ಮ ಭತ್ತ ನೀವೇ ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಇದಕ್ಕೆ ಹೊಣೆಗಾರರು ಯಾರು ಎಂದು ಪ್ರಶ್ನಿಸಿದ ಮಂಜುನಾಥ್, ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಫೆ.22 ರ ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಬಗರ್ ಹುಕ್ಕುಂ ರೈತರು, ಸಾಸ್ವೆಹಳ್ಳಿ ಏತ ನೀರಾವರಿ ಯೋಜನಾ ವ್ಯಾಪ್ತಿಯ ರೈತರು, ಜಗಳೂರು ರೈತರು, ಆಶ್ರಯ ನಿವೇಶನಕ್ಕಾಗಿ ಹೋರಾಟ ಮಾಡುತ್ತಿರುವ ವಸತಿ‌ ರಹಿತರು ಸೇರಿದಂತೆ ಎಲ್ಲರೂ ಕೂಡ ಈ ಬೃಹತ್ ಹೋರಾಟದಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ನಾಳೆ ಹದಡಿ ರಸ್ತೆಯಲ್ಲಿರುವ ಶಿರಮಗೊಂಡನಹಳ್ಳಿ ಬಳಿಯ ಬೈಪಾಸ್ ರಸ್ತೆ ಸೇರಬೇಕು. ಅಲ್ಲಿಂದ ಜಿಲ್ಲಾಧಿಕಾರಿ ‌ಕಚೇರಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.

ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಕರಿಬಸಪ್ಪ ಅಧ್ಯಕ್ಷತೆ‌‌ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾ್ ಶರಣಮ್ಮ, ಕೋಗಲೂರು ಕುಮಾರ, ಉಪ್ಪನಾಯಕಹಳ್ಳಿ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!