ಶಿವಾಜಿ ಮಹಾರಾಜರು ಸರ್ವರ ಸ್ವತ್ತು : ಎಸ್ಸೆಸ್

ಶಿವಾಜಿ ಮಹಾರಾಜರು ಸರ್ವರ ಸ್ವತ್ತು : ಎಸ್ಸೆಸ್

ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ

ದಾವಣಗೆರೆ, ಫೆ.19- ಛತ್ರಪತಿ ಶಿವಾಜಿ ಮಹಾ ರಾಜರು ಕೇವಲ ಒಂದು ಸಮುದಾಯಕ್ಕೆ ಸೇರಿದವ ರಲ್ಲ, ಅವರು ಎಲ್ಲರ ಸ್ವತ್ತು. ಸರ್ವ ಸಮುದಾಯದವರ ಪ್ರೀತಿಗೆ ಪಾತ್ರರಾಗಿದ್ದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಶಿವಾಜಿ ಕೊಡುಗೆ ಅಪಾರ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ದೇವರಾಜ ಅರಸು ಬಡಾಣೆಯಲ್ಲಿರುವ ಶ್ರೀ ಕೃಷ್ಣಭವಾನಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ಇತ್ತೀಚಿಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಆದರೆ ಮಹಾರಾಷ್ಟ್ರ  ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಈ ಮೊದಲೇ ಘೋಷಿಸಿತ್ತು. ಇದು ಅತ್ಯಂತ ಸಂತಸದ ಸಂಗತಿ ಎಂದರು. 

ಶಿವಾಜಿ ಶೌರ್ಯ, ಸಾಹಸ, ರಾಷ್ಟ್ರಭಕ್ತಿ, ದಕ್ಷ ಆಡಳಿತ ಇತರರಿಗೆ ಪ್ರೇರಣೆ. ಮಹಾರಾಷ್ಟ್ರ ರಾಜ್ಯದ ಪುಣೆಯ ಸಮೀಪದ ಶಿವನೇರಿಯಲ್ಲಿ ಜನಿಸಿದ್ದರೂ ಸಹ  ಕರ್ನಾಟಕಕ್ಕೆ ಅತ್ಯಂತ ಸಾಮೀಪ್ಯ ಹೊಂದಿದವರು. ಹಿಂದೂಸ್ಥಾನವನ್ನು ಒಗ್ಗೂಡಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿವಾಜಿ ಸಾಧನೆಯನ್ನು ಸ್ಮರಿಸಿದರು.

ಹಿಂದೂ ಸಾಮ್ರಾಟ್ ಎನಿಸಿಕೊಂಡಿದ್ದ ಶಿವಾಜಿ ಯಂತಹ ಮಹಾನ್ ಯೋಧನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಶ್ಲ್ಯಾಘನೀಯವಾದುದು ಎಂದು ಹೇಳಿದರು.

ಭಕ್ತಿ ಭಂಡಾರಿ ಬಸವಣ್ಣ ಹಾಗೂ ವೀರ ಯೋಧ ಶಿವಾಜಿ ಮಹಾರಾಜರ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡು ಮುನ್ನಡೆಯೋಣವೆಂದು ಹಿತ ನುಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶಿವಾಜಿ ಮಹಾರಾಜರು ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿದ್ದಾರೆ. ಸೇವೆ ಮತ್ತು ಹೋರಾಟದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅವರು ಸದ್ಗುಣ ಸಾಕಾರಮೂರ್ತಿ ಎಂದು ಬಣ್ಣಿಸಿದರು.

ಎಲ್ಲಾ ಮೌಲ್ಯಗಳ ಪ್ರತಿರೂಪವಾಗಿದ್ದ ಶಿವಾಜಿ ಯವರು ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಿದ್ದರು. ಸರ್ವರನ್ನೂ ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಜನ ನಾಯಕನಾಗಿದ್ದು, ಅವರಲ್ಲಿದ್ದ ಮಾತೃಪ್ರೇಮ ಮತ್ತು ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿತ್ತು ಎಂದರು.

ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಶಿವಾಜಿ ಮಹಾರಾಜರು ಅಪ್ರತಿಮ ವೀರ, ತನ್ನ ಯದ್ಧ ಕೌಶಲ್ಯದಿಂದಲೇ ಜಗತ್ಪ್ರಸಿದ್ಧಿ ಯಾದವರು. ಈಗಲೂ ಭಾರತೀಯ ಸೈನ್ಯದಲ್ಲಿ `ಮರಾಠ ಮಿಲಿಟರಿ ರೆಜಿಮೆಂಟ್’ ಎಂಬ ಪ್ರತ್ಯೇಕ ತುಕಡಿ ಇದೆ ಎಂದು ಹೇಳಿದರು.

ಶಿವಾಜಿ ಜಾತ್ಯತೀತ ವ್ಯಕ್ತಿಯಾಗಿರುವುದರಿಂದಲೇ ತನ್ನ ಸೈನ್ಯದಲ್ಲಿ ಮುಸ್ಲಿಂ ಸೈನಿಕರನ್ನು ಪ್ರಮುಖ ಹುದ್ದೆಗಳಲ್ಲಿ ನೇಮಕ ಮಾಡಿಕೊಂಡಿದ್ದರು. ಅವರ ತ್ಯಾಗ, ಬಲಿದಾನ ಅಜರಾಮರ ಎಂದರು.

ಅಪರ ಜಿಲ್ಲಾಧಿಕಾರಿ ಸೈಯಿದಾ ಅಫ್ರೀನ್ ಬಾನು ಮಾತನಾಡಿ, ಶಿವಾಜಿ ಮಹಾರಾಜರದು ಮೇರು ವ್ಯಕ್ತಿತ್ವ. ಸದೃಢ ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಶಿವಾಜಿ ಜಯಂತಿ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ವರ್ಷವಿಡಿ ಅವರ ಸ್ಮರಣೆ ಅಗತ್ಯ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯೋಣವೆಂದು ಆಶಿಸಿದರು.

ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣಾನಾಯ್ಕ  ಮಾತನಾಡಿ, ಶಿವಾಜಿ ಮಹಾರಾಜರನ್ನು ಒಂದು ಜಾತಿಗೆ ಸೀಮಿತ ಮಾಡದೇ, ಸರ್ವ ಸಮುದಾಯದವರನ್ನು ಜಯಂತ್ಯುತ್ಸವಕ್ಕೆ ಆಹ್ವಾನಿಸುವಂತೆ ಸಲಹೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜದ ಮುಖಂಡರಾದ ಅನಿತಾಬಾಯಿ ಮಾಲತೇಶ ರಾವ್ ಜಾಧವ್, ರಾಕೇಶ್ ಯಶವಂತರಾವ್ ಜಾಧವ್, ಗಾಯತ್ರಿಬಾಯಿ ಖಂಡೋಜಿರಾವ್, ಗೌರಬಾಯಿ ಮೋಹಿತೆ, ಎಂ. ಗೋಪಾಲರಾವ್ ಮಾನೆ, ಜಿ. ಯಲ್ಲಪ್ಪ ಡಮಾಳೆ, ವೈ. ಮಲ್ಲೇಶ್, ಭರತ್, ಚೇತನಾ ಶಿವಕುಮಾರ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

error: Content is protected !!