ಹರಿಹರದ ಪಂಚಮಸಾಲಿ ಮಠ ರಾಜ್ಯದ ನಂಬರ್ ಒನ್ ಮಠವಾಗಬೇಕಿದೆ

ಹರಿಹರದ ಪಂಚಮಸಾಲಿ ಮಠ ರಾಜ್ಯದ ನಂಬರ್ ಒನ್ ಮಠವಾಗಬೇಕಿದೆ

34ನೇ ವಾರ್ಡ್ ಪಂಚಮಸಾಲಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ವಚನಾನಂದ ಶ್ರೀ

ದಾವಣಗೆರೆ,  ಫೆ.19- ಹರಿಹದಲ್ಲಿರುವ ನಮ್ಮ ಹರ ಮಠ ರಾಜ್ಯದಲ್ಲಿ ನಂಬರ್ ಒನ್ ಆಗಬೇಕಾಗಿದೆ ಎಂದು ಹರಿಹರ ಪಂಚಮ ಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ವೀರಶೈವ – ಲಿಂಗಾಯತ ಪಂಚಮಸಾಲಿ ಸಮಾಜದಿಂದ ನಗರದ ಕೆ.ಎಸ್.ಎಸ್. ಕಾಲೇಜು ಸಭಾಂಗಣದಲ್ಲಿ  ಕಳೆದ ವಾರ ಆಯೋಜಿಸಿದ್ದ 34ನೇ ವಾರ್ಡ್ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪೀಠಕ್ಕೆ ಬರುವ ಎಲ್ಲ ಭಕ್ತರಿಗೆ ನಿತ್ಯ ಶಾಂತಿ, ಸಮಾಧಾನ, ಪಂಚ ದಾಸೋಹಗಳು ಸಿಗುವಂತಹ ವಾತಾವರಣ ನಿರ್ಮಿಸೋಣ. ಪೀಠದಲ್ಲಿ ಈಗ 48 ಬಡ ವಿದ್ಯಾರ್ಥಿಗಳು ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಖ್ಯೆ ಸಾವಿರವನ್ನು ದಾಟಬೇಕು ಎಂಬುದು ನಮ್ಮ ಕನಸು. ಈ ದಿಸೆಯಲ್ಲಿ ಭಕ್ತರು ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಉದ್ಯೋಗ ಮತ್ತು ಶಿಕ್ಷಣಕ್ಕೆ ಸಮಾಜದ ವಿದ್ಯಾರ್ಥಿಗಳಿಗೆ ಮೀಸಲಾತಿ ಬೇಕೇ ಬೇಕು. ಆದರೆ ಅದನ್ನೇ ನೆಚ್ಚಿಕೊಳ್ಳದೆ ಕೌಶಲಯುತ ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದ ಶ್ರೀಗಳು,  ಸಮಾಜದವರು ಮನೆಗಳಲ್ಲಿ ಯಾವುದೇ ಶುಭ ಕಾರ್ಯ ಮಾಡಿದಾಗ ಆಹ್ವಾನ ಪತ್ರಿಕೆಯಲ್ಲಿ ಹರ ಸಿಂಬಲ್ ಹಾಕಿಸಿ. ಮಠವನ್ನು ಆರ್ಥಿಕವಾಗಿ ಸಶಕ್ತವಾಗಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ,  ಹರ ಎಜುಕೇಶನ್ ಟ್ರಸ್ಟ್‌ನಿಂದ ಡಾ. ಮಹಾಂತ ಸ್ವಾಮೀಜಿ ಪದವಿಪೂರ್ವ ಕಾಲೇಜು ಆರಂಭಿಸಲು ಪ್ರಯತ್ನ ನಡೆದಿದ್ದು, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ಶಿಕ್ಷಣ ನೀಡುವ ಚಿಂತನೆಯಿದೆ ಎಂದರು.

ದೊಡ್ಡ ಸಮಾಜವಾದರೂ ಈ ಹಿಂದೆ ಉಪೇಕ್ಷೆಗೆ ಒಳಗಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಘಟನೆ ಬೆಳೆದಿದೆ. ಹಲವು ಸಾಮಾಜಿಕ ಕಾರ್ಯಗಳಾಗಿವೆ. ವಾರ್ಡ್ ಮಟ್ಟದಲ್ಲಿ ಸಂಘಟನೆ ಮಾಡುವುದರಿಂದ ಇನ್ನಷ್ಟು ಅನುಕೂಲವಾಗುತ್ತದೆ. ಸಂಘಟ ನೆಯ ಜತೆಗೆ ಧಾರ್ಮಿಕ ಆಚರಣೆಗಳನ್ನು ಮರೆಯಬಾರದು’ ಎಂದು ಹೇಳಿದರು.

ನಗರ ಘಟಕದ ಅಧ್ಯಕ್ಷ ಕೈದಾಳ್ ಶಿವಶಂಕರ್, ಎಂ. ದೊಡ್ಡಪ್ಪ, ಶ್ರೀಧರ್, ಕಾಶೀನಾಥ್, ಶಿವಕುಮಾರ್, ಸೋಮಶೇಖರಪ್ಪ, ಮಲ್ಲಿನಾಥ್, ಮಹೇಶ್ವರಪ್ಪ, ಸುಷ್ಮಾ ಪಾಟೀಲ್, ವೀಣಾ ನಟರಾಜ್ ಬೆಳ್ಳೂಡಿ, ರಶ್ಮಿ ಕುಂಕೋದ್, ಹೇಮಾದ್ರಪ್ಪ, ಚಂದ್ರಶೇಖರ್, ವಾರ್ಡ್ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ತಿಪ್ಪೇರುದ್ರಸ್ವಾಮಿ ಇದ್ದರು. ಬಿ.ಟಿ. ಪ್ರಕಾಶ್ ಸ್ವಗತಿಸಿದರು, ಕೆ.ಕೆ. ನಾಗರಾಜ್ ನಿರೂಪಿಸಿದರು. ಸುರೇಶ್ ವಂದಿಸಿದರು.

error: Content is protected !!