ಭದ್ರಾ ಕಾಲುವೆ ಸುತ್ತ ನಿಷೇಧಾಜ್ಞೆ

ಭದ್ರಾ ಕಾಲುವೆ ಸುತ್ತ ನಿಷೇಧಾಜ್ಞೆ

ದಾವಣಗೆರೆ, ಫೆ.19-    ಭದ್ರಾ ಅಚ್ಚು ಕಟ್ಟು ಪ್ರದೇಶದಲ್ಲಿ  ಬೆಳೆಗಳು ಮತ್ತು ಕುಡಿಯುವ ನೀರಿನ  ಉದ್ದೇಶದಿಂದ ಇಂದಿನಿಂದ ಇದೇ ದಿನಾಂಕ 23ರವರೆಗೆ ನಾಲೆಗಳಿಗೆ ನೀರನ್ನು ಬಿಡುತ್ತಿರುವ ಹಿನ್ನೆಲೆಯಲ್ಲಿ  ಕಾಲುವೆ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ತಾಲ್ಲೂಕಿನ  ಮಾಯಕೊಂಡ ಹೋಬಳಿ ನಲ್ಕುಂದ ಬಳಿ ತಾಲ್ಲೂಕು ಗಡಿಯಿಂದ ಶಂಕರನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಭದ್ರಾ  ಕಾಲುವೆಗಳ ಸುತ್ತ ಮುತ್ತ ಕಾಲುವೆಯಿಂದ ಬಲ ಮತ್ತು ಎಡಭಾಗದಿಂದ 200 ಮೀಟರ್‌ವರೆೆಗಿನ ವ್ಯಾಪ್ತಿಯಲ್ಲಿ,   ಕಾರ್ಯನಿರ್ವಾಹಕ ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್  ಡಾ.ಎಂ.ಬಿ. ಅಶ್ವತ್ಥ್‌  ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. 

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಳೆದ 16ರಂದು ನಡೆದ ಸಭೆಯಲ್ಲಿ  ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ತಲುಪದೇ ಇರುವ ಕುರಿತು ಅನೇಕ ರೈತ ಸಂಘಟನೆಗಳು ಮನವಿ ಮಾಡಿವೆ. ಪ್ರಸ್ತುತ  ಜಿಲ್ಲೆಯಲ್ಲಿ  ಭೀಕರ ಬರಗಾಲವಿದೆ. ಬೆಳೆಗಲ್ಲದೇ ಕುಡಿಯುವ ನೀರಿಗೂ ಬರವಿದೆ. ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಹಾಗೂ ಮತ್ತೆ ಪಂಪ್‌ಸೆಟ್‌ಗಳನ್ನು ಅಳವಡಿಸದಂತೆ ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ.  

ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ವೇಳೆ, ಅಡ್ಡಿಪಡಿಸುವ ಮತ್ತು ಗಲಭೆಗಳಾಗುವ ಸಂಭವವಿರುವ ಕಾರಣದಿಂದಾಗಿ ಈ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲು ಕನೀನಿನಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಹ  ಕೋರಿದ್ದು, ಇದು ಸೂಕ್ತವಾಗಿರುವ ಕಾರಣ ನಿಷೇಧಾಜ್ಞೆ ಹೊರಡಿಸಿರುವುದಾಗಿ ತಹಶೀಲ್ದಾರರು ತಿಳಿಸಿದ್ದಾರೆ.

  ಪ್ರದೇಶದ ವ್ಯಾಪ್ತಿಯಲ್ಲಿ 4 ಜನಕ್ಕಿಂತ ಹೆಚ್ಚು ಜನ ಸೇರುವುದು, ಮಾರಕಾಸ್ತ್ರಗಳನ್ನು  ಹಿಡಿದು ತಿರುಗಾಡುವುದು, ಸ್ಪೋಟಕಗಳನ್ನು ಶೇಖರಿಸುವುದು, ಘೋಷಣೆ ಕೂಗುವುದು, ಸಾರ್ವಜನಿಕ  ಸಭ್ಯತೆ  ಅಥವಾ ನೀತಿಯನ್ನು ಮೀರುವುದು, ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮ ಜರುಗಿಸುವುದಾಗಿ ತಹಶೀಲ್ದಾರ್‌ ಎಚ್ಚರಿಸಿದ್ದಾರೆ.

error: Content is protected !!