ಬಸವಣ್ಣ ಸಾರ್ವಕಾಲಿಕ ಕ್ರಾಂತಿ ಪುರುಷ

ಬಸವಣ್ಣ ಸಾರ್ವಕಾಲಿಕ ಕ್ರಾಂತಿ ಪುರುಷ

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ

ದಾವಣಗೆರೆ, ಫೆ. 18 – 12ನೇ ಶತಮಾನದ ಕ್ರಾಂತಿ ಪುರುಷ, ಸಮಾಜ ಸುಧಾರಕ, ವಚನಗಳ ಮೂಲಕ ಜನರಲ್ಲಿ ಜ್ಞಾನದ ದೀವಿಗೆ ಬೆಳಗಿಸಿದ ಮಹಾನ್ ಮಾನವತಾವಾದಿ, ಅಸಂಖ್ಯಾತ ವಚನಗಳ ಮೂಲಕ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿರುವ ಬಸವಣ್ಣ, ಸಾರ್ವಕಾಲಿಕ ಕ್ರಾಂತಿ ಪುರುಷ ಹಾಗೂ ಸಮಸ್ತ ವಿಶ್ವಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಬಣ್ಣಿಸಿದರು. 

ಅವರಿಂದು ಕರ್ನಾಟಕ ಸರ್ಕಾರದ ಆದೇಶದ ಅನುಸಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ರಾಷ್ಟ್ರಕವಿ ಕುವೆಂಪು ಕನ್ನಡ ಭವನದಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ಇವನಾರವ, ಇವನಾರವ ಎಂದೆನಿಸದೇ ಇವ ನಮ್ಮವ ಇವ ನಮ್ಮವ ಎಂದೆನಿಸು ಎನ್ನುವ ಬಸವಣ್ಣನವರ ಸಮ ಸಮಾಜದ ನಿರ್ಮಾಣದ ಕನಸಿನ  ಸಂದೇಶದ ಅನುಸಾರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಬ್ಬ ಕನ್ನಡಿಗನನ್ನು ಅಪ್ಪಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಮೇಲ್ವರ್ಗದ ಸಂಪ್ರದಾಯಿಗಳ ವಿರೋಧವನ್ನು ಲೆಕ್ಕಿಸದೇ 12ನೇ ಶತಮಾನದಲ್ಲಿ ಅವರು ಸಾರಿದ ತತ್ವಗಳು, ಚಿಂತನೆಗಳು, ವಚನಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಆದರ್ಶ ಪ್ರಾಯವಾಗಿವೆ. ಜಾತಿ ರಹಿತವಾದ, ವರ್ಗ ರಹಿತವಾದ, ಮೌಢ್ಯ ರಹಿತವಾದ, ಶೋಷಣೆ ರಹಿತವಾದ ಸಮ-ಸಮಾಜ ನಿರ್ಮಾಣದ ಕನಸುಗಳನ್ನು ಹೊತ್ತಿದ್ದ ಬಸವಣ್ಣ, ವಚನಗಳ ಮೂಲಕ ವಿಶ್ವ ಸಾಹಿತ್ಯಿಕ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ ಎಂದು ವಾಮದೇವಪ್ಪ ರಾಜ್ಯ ಸರಕಾರವನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ. ಜಗದೀಶ್, ಜಿಗಳಿ ಪ್ರಕಾಶ್, ತಾಲ್ಲೂಕು ಅಧ್ಯಕ್ಷರುಗಳಾದ ಡಿ.ಎಂ. ಮಂಜುನಾಥಯ್ಯ, ಮಧುಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ಎಸ್. ರಾಜು, ಪ್ರಸಾದ್ ಬಂಗೇರ, ಜ್ಯೋತಿ ಉಪಾಧ್ಯಾಯ, ಮಲ್ಲಮ್ಮ, ರುದ್ರಾಕ್ಷಿ ಬಾಯಿ, ಸತ್ಯಭಾಮ ಮಂಜುನಾಥ್, ಬಿ.ಎಂ. ಭೈರೇಶ್ವರ, ರಿಯಾಜ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!