ಜಿಲ್ಲೆಯಲ್ಲಿ ಏರಿದ ಬಿಸಿಲು, ಕುಸಿಯುತ್ತಿರುವ ಅಂತರ್ಜಲ

ಜಿಲ್ಲೆಯಲ್ಲಿ ಏರಿದ ಬಿಸಿಲು, ಕುಸಿಯುತ್ತಿರುವ ಅಂತರ್ಜಲ

ಗ್ರಾಮಾಂತರದಲ್ಲಿ ಕಾಣಿಸಿಕೊಳ್ಳುತ್ತಿರುವ ನೀರಿನ ಸಮಸ್ಯೆ

ದಾವಣಗೆರೆ, ಫೆ. 16 – ಫೆಬ್ರವರಿಯಲ್ಲಿ ಬಿಸಿಲು ಏರುಮುಖವಾಗುತ್ತಿರುವಂತೆಯೇ, ಅಂತರ್ಜಲದ ಅವಲಂಬನೆ ಹೆಚ್ಚಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ ಮುಂದುವರೆದಿದೆ.

ಕಳೆದ ವರ್ಷ ಜನವರಿ ಅಂತ್ಯದಲ್ಲಿ ಜಿಲ್ಲೆಯಲ್ಲಿ ಸರಾಸರಿ ಅಂತರ್ಜಲ ಮಟ್ಟ 6.02 ಮೀಟರ್ ಆಗಿತ್ತು. ಈ ವರ್ಷ ಅಂತರ್ಜಲ ಮಟ್ಟವು 10.85 ಮೀಟರ್‌ಗಳ ಹಂತಕ್ಕೆ ಕುಸಿದಿದೆ. ಅದರಲ್ಲೂ ದಾವಣಗೆರೆ, ನ್ಯಾಮತಿ ಹಾಗೂ ಜಗಳೂರುಗಳಲ್ಲಿ ಅಂತರ್ಜಲ ಮಟ್ಟ ಎರಡಂಕಿಯ ಮಟ್ಟಕ್ಕೆ ಕುಸಿದಿದೆ.

ಕಳೆದ ವರ್ಷ ಈ ವೇಳೆಗೆ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಎರಡಂಕಿಯ ಮಟ್ಟಕ್ಕೆ ಕುಸಿದಿರಲಿಲ್ಲ. ಈ ವರ್ಷ ದಾವಣಗೆರೆ ತಾಲ್ಲೂಕಿನಲ್ಲಿ ಅಂತರ್ಜಲ 12.74 ಮೀಟರ್‌ಗೆ ಕುಸಿದಿದೆ. ನ್ಯಾಮತಿಯಲ್ಲಿ 10.97 ಮೀಟರ್‌ಗಳಿಗೆ ಇಳಿಕೆಯಾಗಿದೆ. ಜಗಳೂರಿನಲ್ಲಂತೂ ಅಂತರ್ಜಲ ಮಟ್ಟ 21.50 ಮೀಟರ್‌ ಹಂತಕ್ಕೆ ಬಂದಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಆರ್.ಬಸವರಾಜ್‌, ಬಿಸಿಲು ಏರುತ್ತಿರುವ ಕಾರಣ ಸಹಜವಾಗಿಯೇ ಅಂತರ್ಜಲ ಅವಲಂಬನೆ ಹೆಚ್ಚಾಗಿದೆ. ಭದ್ರಾ ಕಾಲುವೆಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದೂ ಅಂತರ್ಜಲ ಅವಲಂಬನೆ ಹೆಚ್ಚಳಕ್ಕೆ ಕಾರಣವಾಗಿದೆ. ಇಷ್ಟಾದರೂ, ಅನಿರೀಕ್ಷಿತ ಪ್ರಮಾಣದಲ್ಲೇನೂ ಅಂತರ್ಜಲ ಕುಸಿತವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ನಡುವೆಯೇ, ಜಿಲ್ಲೆಯ 9 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಈ ಗ್ರಾಮಗಳಿಗೆ ನೀರು ಪೂರೈಸಲು 13 ಖಾಸಗಿ ಬೋರ್‌ಗಳನ್ನು ಮುನ್ನೆಚ್ಚರಿಕೆಯಾಗಿ ಗುರುತಿಸಲಾಗಿದೆ. ಇನ್ನೂ 126 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಜಗಳೂರನ್ನು ಬರದ ನಾಡು ಎಂದು ಗುರುತಿಸಲಾಗುತ್ತದೆ. ಆದರೆ, ಈ ಬೇಸಿಗೆಯಲ್ಲಿ ನ್ಯಾಮತಿ ತಾಲ್ಲೂಕಿನಲ್ಲಿ ಮೊದಲ ನೀರಿನ ಸಮಸ್ಯಾತ್ಮಕ ಗ್ರಾಮ ಕಂಡು ಬಂದಿದೆ. ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ ಹಾಗೂ ನ್ಯಾಮತಿಗಳಲ್ಲಿನ ಒಟ್ಟು 9 ಗ್ರಾಮಗಳಲ್ಲಿ ನೀರಿನ ಸಮಸ್ಯೆಯ ಗ್ರಾಮಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾವಣಗೆರೆಯಲ್ಲಿ 42, ಹರಿಹರದಲ್ಲಿ 21, ಚನ್ನಗಿರಿಯಲ್ಲಿ 30, ಹೊನ್ನಾಳಿಯಲ್ಲಿ 7 ಹಾಗೂ ಜಗಳೂರಿನಲ್ಲಿ 26 ಗ್ರಾಮಗಳೂ ಸೇರಿದಂತೆ ಒಟ್ಟು 126 ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಸಮಸ್ಯೆ ಕಂಡು ಬರಬಹುದು ಎಂದು ಗುರುತಿಸಲಾಗಿದೆ.

ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳಲ್ಲಿ ಬೋರ್‌ವೆಲ್‌ಗಳನ್ನು ಆಳಗೊಳಿಸುವ, ಫ್ಲಶ್‌ ಮಾಡುವ ಕೆಲಸ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಪೈಪ್‌ಲೈನ್‌ ಮೂಲಕವೂ ನೀರು ತರಲಾಗುವುದು. ಖಾಸಗಿ ಬೋರ್‌ಗಳನ್ನು ತಿಂಗಳಿಗೆ 14-15 ಸಾವಿರ ರೂ.ಗಳಿಗೆ ಬಾಡಿಗೆಗೆ ಪಡೆಯಲೂ ಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಸರ್ಕಾರ ಕೊಳವೆ ಬಾವಿಗಳ ನವೀಕರಣಕ್ಕೆ ಪ್ರತಿ ತಾಲ್ಲೂಕಿಗೆ 25 ಲಕ್ಷ ರೂ. ಬಿಡುಗಡೆ ಮಾಡಿದೆ. ಇದನ್ನು ಅವಶ್ಯಕತೆ ಇರುವ ಗ್ರಾಮಗಳಿಗೆ ಬಳಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದ್ದಾರೆ.

error: Content is protected !!