ಬಹುತೇಕ ಜನಪ್ರತಿನಿಧಿಗಳಿಗೆ ಸಂವಿಧಾನದ ಪರಿಚಯವೇ ಇಲ್ಲ

ಬಹುತೇಕ ಜನಪ್ರತಿನಿಧಿಗಳಿಗೆ ಸಂವಿಧಾನದ ಪರಿಚಯವೇ ಇಲ್ಲ

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

 `ಶ್ರೀ ಬಸವಣ್ಣ `ಸಾಂಸ್ಕೃತಿಕ ನಾಯಕ’ ಎಂಬ ಸರ್ಕಾರದ ನಿರ್ಣಯ ಅಭಿನಂದನಾರ್ಹ.  ದಿ.17ರಂದು `ಬಸವ ತತ್ವ’  ತಿಳಿದುಕೊಳ್ಳುವ ಕೆಲಸ ಆಗಬೇಕು’:  ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ, ಫೆ.14- ನಮ್ಮ ಜನಪ್ರತಿನಿಧಿಗಳು ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡಿ ದ್ದರೆ ನಮ್ಮ ದೇಶ ಕಲ್ಯಾಣ ನಾಡಾಗುತ್ತಿತ್ತು ಎಂದು ಸಾಣೇಹಳ್ಳಿ ಶ್ರೀ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ  ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದವು. ಈ  ವರ್ಷಗಳ ಸಿಂಹಾವಲೋಕನ ಮಾಡಿದರೆ, ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ನಮ್ಮ ರಾಜಕೀಯ ನೇತಾರರು, ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆಯೇ ? ಎಂದು ಪ್ರಶ್ನೆ ಹಾಕಿದರೆ ಉತ್ತರ ಹೇಳುವುದು ತುಂಬಾ ಕಷ್ಟ. ನಾವು ಆಯ್ಕೆ ಮಾಡಿ ಕಳಿಸುವಂತಹ ಜನಪ್ರತಿನಿಧಿಗಳಿಗೆ ಸಂವಿಧಾನದ ಪರಿಚಯವೇ ಬಹುತೇಕ ಜನರಿಗೆ ಇಲ್ಲವಾಗಿದೆ ಎಂದರು.

ಇಡೀ ಸಂವಿಧಾನವನ್ನು ಓದಿಕೊಂಡ ಜನಪ್ರತಿನಿಧಿಗಳು ಬೆರಳೆಣಿಕೆಯಷ್ಟು ಮಾತ್ರ. ಜನಪ್ರನಿಧಿಯಾಗಲಿಕ್ಕೆ ಅರ್ಹತೆ ಇರಬೇಕು. ಅದರ ಬದಲಾಗಿ ಈಗ ಪ್ರಧಾನವಾಗಿರುವುದು ಜಾತಿ, ಹಣ, ಅಧಿಕಾರ. ಹಾಗಾಗಿ ಅವಿದ್ಯಾವಂತರು ಕೂಡ ನಮ್ಮ ಜನಪ್ರತಿನಿಧಿಗಳಾಗಿರುವ ನಿದರ್ಶನಗಳು ಬೇಕಾದಷ್ಟಿವೆ. 

ಅವಿದ್ಯಾವಂತರು ಜನಪ್ರನಿಧಿಗಳಾ ದಾಗ, ಹೇಗೆ ನಮ್ಮ ಸಂವಿಧಾನವನ್ನು ಅಧ್ಯಯನ ಮಾಡಲಿಕ್ಕೆ ಸಾಧ್ಯ. ಹರಿಯಾಣ, ಪಂಜಾಬ್ ರಾಜ್ಯಗಳ ರೈತರು ನಮಗೆ ಬೆಂಬಲ ಬೆಲೆಯನ್ನು ಕೊಡಿ, ನಮ್ಮ ಆಶಯಗಳನ್ನು ಈಡೇರಿಸಿ ಎಂದು ಬಹುದೊಡ್ಡ ಹೋರಾಟಕ್ಕೆ ಸನ್ನದ್ಧರಾಗಿ ಬಂದರೆ ಆ ಹೋರಾಟವನ್ನು ತಡೆಗಟ್ಟಲಿಕ್ಕೆ ಏನು ಬೇಕೋ ಆ ವ್ಯವಸ್ಥೆಯನ್ನು ಸರ್ಕಾರ ಮಾಡಿತು.

 ಇದು ಪ್ರಜಾಪ್ರಭುತ್ವದ ಸೋಲು. ಹಾಗಾಗಿ ಪ್ರಜೆಗಳು ಯೋಗ್ಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಒಳ್ಳೆಯ ಆಡಳಿತವನ್ನು ಕೊಡಲಿಕ್ಕೆ  ಸಾಧ್ಯ. ಆದರ್ಶ ಜನಪ್ರತಿನಿಧಿ ಇಲ್ಲದಿದ್ದರೆ ಆದರ್ಶ ರಾಜ್ಯವೂ ಇಲ್ಲವಾಗುತ್ತದೆ ಎಂದರು. 

ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಅಂತ ಒಂದು ನಿರ್ಣಯ ಮಾಡಿದೆ.  ಇದು ಅಭಿನಂದನಾರ್ಹ. 

ಬಸವಣ್ಣ ನವರಿಗೆ ಕಿರೀಟದ ಬಗ್ಗೆ ವ್ಯಾಮೋಹ ಇರಲಿಲ್ಲ. ಸರಕಾರ ತುಂಬಾ ಯೋಚನೆ ಮಾಡಿ ತಾಳೆಗರಿಯಲ್ಲಿ ಬರೆಯುವಂಥ ಬಸವಣ್ಣನ ಭಾವಚಿತ್ರ ಹಾಕಬೇಕೆಂದು ಜಾರಿಯಲ್ಲಿ ತಂದಿದೆ. ಹಾಗಾಗಿ 17 ನೇ ತಾರೀಖು ಅದೊಂದು ಸಂಭ್ರಮದ ದಿನಾಚರಣೆ ಆಗಬೇಕು.  ಆವೊತ್ತು ಬಸವಣ್ಣನವರ ವಚನ ಓದುವುದು, ಚರ್ಚೆ ಮಾಡುವುದು, ಬಸವತತ್ವವನ್ನು ತಿಳಿದುಕೊಳ್ಳುವ ಕೆಲಸ ಆಗಬೇಕು. ಸಾಣೇಹಳ್ಳಿಯ ಮಠದಲ್ಲೂ   ಅಂದು ಬಸವಣ್ಣನ ಭಾವಚಿತ್ರವಿಟ್ಟು ಅದಕ್ಕೆ ಪುಷ್ಟವನ್ನು ಅರ್ಪಿಸಿ ವಚನಗಳನ್ನು ಓದಿ ಕಾರ್ಯಕ್ರಮ ನಡೆಸಲಾಗು ವುದು ಎಂದರು.  

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಶಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕಾಂತರಾಜ್ ಸಂವಿಧಾನದ ಬಗ್ಗೆ ಮಾತನಾಡಿದರು.

ವೇದಿಕೆಯ ಮೇಲೆ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಗಂಗಾಧರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಬಸವರಾಜ್, ಪಿಡಿಓ ಸ್ವಾಮಿ ಮತ್ತಿತರರಿದ್ದರು. ನಿವೃತ್ತ ಶಿಕ್ಷಕ ವೀರಭದ್ರಪ್ಪ ಸ್ವಾಗತಿಸಿದರೆ, ಮಲ್ಲಿಕಾರ್ಜುನ್ ವಂದಿಸಿದರು.

error: Content is protected !!