ದಾವಣಗೆರೆ ದುಗ್ಗಮ್ಮನ ಜಾತ್ರೆಗೆ ವಿಧ್ಯುಕ್ತ ಚಾಲನೆ

ದಾವಣಗೆರೆ ದುಗ್ಗಮ್ಮನ ಜಾತ್ರೆಗೆ ವಿಧ್ಯುಕ್ತ ಚಾಲನೆ

ಹಂದರಕಂಬಕ್ಕೆ ಪೂಜೆ ಸಲ್ಲಿಸಿದ ಶಾಸಕ ಶಿವಶಂಕರಪ್ಪ, ಸಚಿವ ಮಲ್ಲಿಕಾರ್ಜುನ್ 

ದಾವಣಗೆರೆ, ಫೆ.13- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ಮಂಗಳವಾರ ಹಂದರಗಂಬದ ಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಶ್ರೀ ದುರ್ಗಾಬಿಕಾ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಂದರಗಂಬಕ್ಕೆ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್ಸೆಸ್ಸೆಂ, ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಹಂದರಗಂಬದ ಮೂಲಕ ಚಾಲನೆ ನೀಡಲಾಗಿದೆ ಎಂದರು.

ಬರುವ ಮಾರ್ಚ್ 19, 20 ರಂದು ನಡೆಯುವ ಜಾತ್ರೆ ಯನ್ನು ಸುಗಮ ಹಾಗೂ ಸರಾಗವಾಗಿ ನಡೆಯಲು ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆಯಿಂದ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ ಎಂದು ಸಚಿವರು  ಹೇಳಿದರು.

ದುರ್ಗಾಂಬಿಕಾ ಜಾತ್ರೆಯು ಹಳೆಯ ಸಂಪ್ರದಾಯದಂತೆ ನೆರವೇರಲಿದೆ. ಪೂಜೆ ಪುನಸ್ಕಾರ ಎಂದಿನಂತಿರಲಿದೆ. ಗೌಡ್ರು, ಶಾನಭೋಗರು, ರೈತರು ಎಲ್ಲರೂ ಆಗಮಿಸುತ್ತಾರೆ. ಎಲ್ಲಾ ಜಾತಿ ಜನಾಂಗದವರು ಉತ್ಸುಕರಾಗಿ ಪಾಲ್ಗೊಳ್ಳುತ್ತಾರೆ. ಪ್ರತಿಯೊಂದು ಸಮಾಜದದವರೂ ಹರಕೆ ಹೊತ್ತಿರುವವರು ಅದನ್ನು ತೀರಿಸು ತ್ತಾರೆ. ಮಾತ್ರವಲ್ಲ, ಪ್ರತಿಯೊಬ್ಬರಿಗೂ ಜವಾಬ್ದಾರಿ ವಹಿಸಲಾಗಿರುತ್ತದೆ. ಅದನ್ನು ನೆರವೇರಿಸಲಿದ್ದಾರೆ ಎಂದು ಮಲ್ಲಿಕಾರ್ಜುನ್ ಹೇಳಿದರು.

ನಗರದ ಹಳೇ ಭಾಗದಲ್ಲಿ ಪ್ರತಿ ಮನೆಯಲ್ಲೂ ಹಬ್ಬದ ರಂಗು ಹೆಚ್ಚಾಗಿರುತ್ತದೆ.  ಜಾತ್ರೆ ಎಂದರೆ ಹಿಂಗಿರಬೇಕು ಎಂದು ಅಲ್ಲಿನ ಜನ ತೋರಿಸಿಕೊಡುತ್ತಾರೆ. ಅಷ್ಟು ಸಂಭ್ರಮ ಅಲ್ಲಿ ಮನೆ ಮಾಡಿರುತ್ತದೆ. ಪ್ರತಿಯೊಂದು ಗ್ರಾಮದಿಂದಲೂ ಬೀಗರು, ನೆಂಟರಿಷ್ಟರು ಬಂದಿರುತ್ತಾರೆ. ಏಪ್ರಿಲ್ 2 ರವರೆಗೆ ಹಬ್ಬದ ವಾತಾವರಣ ಇರುತ್ತದೆ.  ಈ ವರ್ಷವೂ ಸಹ ಎಲ್ಲರ ಸಹಕಾರ ದಿಂದ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿಸೋಣ ಎಂದು ಹೇಳಿದರು.

ಡಾ. ಪ್ರಭಾ ಮಲ್ಲಿಕಾರ್ಜುನ್, ಸಮರ್ಥ್ ಶಾಮನೂರು, ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಹನುಮಂತರಾವ್ ಸಾವಂತ್, ಪಾಲಿಕೆ ಮೇಯರ್ ಬಿ.ಹೆಚ್. ವಿನಾಯಕ, ಹೆಚ್.ಬಿ. ಗೋಣೆಪ್ಪ, ಹನುಮಂತರಾವ್ ಜಾಧವ್, ಮಾಲತೇಶ್ ಜಾಧವ್, ಯಶ ವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿ.ಹೆಚ್. ವೀರಭದ್ರಪ್ಪ, ಉಮೇಶ್ ರಾವ್ ಸಾಳಂಕಿ, ಬಾಬುರಾವ್ ಸಾಳಂಕಿ, ಮುದೇಗೌಡ್ರ ವಿಶ್ವನಾಥ್, ಬಿ.ಕೆ. ರಾಮಕೃಷ್ಣ, ಕರಿಗಾರ ಬಸಪ್ಪ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!