ವಸತಿ ಯೋಜನೆ ಕಲ್ಪಿಸಲು ಆಗ್ರಹಿಸಿ ತುಂಗಭದ್ರಾ ನದಿ ನೀರಿಗಿಳಿದು ಪ್ರತಿಭಟನೆ

ವಸತಿ ಯೋಜನೆ ಕಲ್ಪಿಸಲು ಆಗ್ರಹಿಸಿ ತುಂಗಭದ್ರಾ ನದಿ ನೀರಿಗಿಳಿದು ಪ್ರತಿಭಟನೆ

ಹರಿಹರ ಫೆ. 14- ತಾಲ್ಲೂಕಿನ ಕಡ್ಲೆಗೊಂದಿ ಹಾಗೂ ಭಾನುವಳ್ಳಿ ಗ್ರಾಮಗಳ ನಿರ್ವಸತಿಗರಿಗೆ ವಸತಿ ಯೋಜನೆ ಕಲ್ಪಿಸಲು ಆಗ್ರಹಿಸಿ ಕಳೆದ 50 ದಿನಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು ಬುಧವಾರ ಹರಿಹರದ ತುಂಗಭದ್ರಾ ನದಿ ನೀರಲ್ಲಿ ನಿಂತು ಪ್ರತಿಭಟಿಸಿದ್ದು ವಿಶೇಷವಾಗಿತ್ತು.

ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 50 ದಿನಗಳಿಂದ ಎರಡೂ ಗ್ರಾಮಗಳ ಮಾದಿಗ ಹಾಗೂ ಹಿಂದುಳಿದ ಸಮುದಾಯದ ಬಡ ನಿರ್ವಸತಿಗರು ಪ್ರತಿಭಟನೆ ನಡೆಸುತ್ತಿದ್ದರೂ ತಾಲ್ಲೂಕು ಮತ್ತು ಜಿಲ್ಲಾಡಳಿತ ನೆಪಗಳನ್ನು ಹೇಳುತ್ತಾ ಸಮಯ ಕಳೆಯುತ್ತಿದೆ ಎಂದು ದೂರಿದರು.

ವಸತಿ ಯೋಜನೆ ಕಲ್ಪಿಸಲು ಜಮೀನು ಖರೀದಿ ಮಾಡುವ ಅಗತ್ಯವಿಲ್ಲ, ಎರಡೂ ಗ್ರಾಮಗಳಲ್ಲಿ ಸರ್ಕಾರಕ್ಕೆ ಸೇರಿದ ಜಮೀನಿದೆ. ನಿಯಮಾವಳಿಯಂತೆ ಪ್ರಕ್ರಿಯೆಗಳನ್ನು ಕೈಗೊಂಡು ವಸತಿ ಯೋಜನೆ ಕಲ್ಪಿಸಲು ಸಾಧ್ಯವಿದೆ, ಆದರೆ ಇದನ್ನು ಕೈಗೊಳ್ಳಲು ಅಧಿಕಾರಿಗಳು ನಿರ್ಣಯಿಸುತ್ತಿಲ್ಲ ಎಂದರು.

ಪ್ರತಿಭಟನೆಯಲ್ಲಿ ಭಾನುವಳ್ಳಿಯ ತೆಲಗಿ ಸುಶೀಲಮ್ಮ, ಶಾಂತಮ್ಮ, ರತ್ನಮ್ಮ, ಹನುಮಕ್ಕ, ಭಾಗ್ಯಮ್ಮ, ಮಲ್ಲಮ್ಮ, ಪುಷ್ಪ, ಪೂಜಾರ್ ನಾಗಮ್ಮ, ಶಕುಂತಲಾ, ಗುಣೇರ ಹನುಮಕ್ಕ, ಕಡ್ಲೆಗೊಂದಿ ಗ್ರಾಮದ ತಿಮ್ಮಣ್ಣ, ಹನುಮಂತಪ್ಪ ಎಸ್.ಟಿ., ಲಕ್ಷ್ಮಣರೆಡ್ಡಿ, ರೇಣುಕಮ್ಮ ಎ.ಕೆ., ಹಾಲಮ್ಮ, ಕರಿಬಸಮ್ಮ, ಪವಿತ್ರ, ಸಾಕಮ್ಮ, ಗಂಗಮ್ಮ, ಶೈಲೂ ಬಿ., ಗೌರಮ್ಮ, ಮಲ್ಲಮ್ಮ ಇತರರಿದ್ದರು.

error: Content is protected !!