ಪಾಲಿಕೆ ಹೊರ ಗುತ್ತಿಗೆ ನೌಕರರಿಂದ ಪ್ರತಿಭಟನೆ

ಪಾಲಿಕೆ ಹೊರ ಗುತ್ತಿಗೆ ನೌಕರರಿಂದ ಪ್ರತಿಭಟನೆ

ವೇತನ ನೇರ ಪಾವತಿಗೆ ಒಳಪಡಿಸಲು ಆಗ್ರಹ, ಫೆ.15ರಂದು  `ಹೊರ ಗುತ್ತಿಗೆ ನೌಕರರ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ’ ಆಂದೋಲನ

ದಾವಣಗೆರೆ, ಫೆ.13- ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಹಾನಗರ ಪಾಲಿಕೆ ಹೊರ ಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

 ಪಾಲಿಕೆ ಮುಂಭಾಗದಲ್ಲಿ ಸಂಘದ ಅಧ್ಯಕ್ಷ ಎಂ.ಆರ್.ದುಗ್ಗೇಶ ನೇತೃತ್ವದಲ್ಲಿ ಎರಡು ದಿನಗಳ ಹೋರಾಟ ಆರಂಭಿಸಿದ ಹೊರ ಗುತ್ತಿಗೆ ನೌಕರರು, ಮಾ.15ರಂದು `ಹೊರ ಗುತ್ತಿಗೆ ನೌಕರರ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ’ ಆಂದೋಲ ನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ. 

ಪ್ರತಿಭಟನೆ ವೇಳೆ ಮಾತನಾಡಿದ ಎಂ.ಆರ್.ದುಗ್ಗೇಶ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಪೌರ ಚಾಲಕರು, ನೀರುಗಂಟಿಗಳು, ಲೋಡರ್ಸ್, ಕ್ಲೀನರ್ಸ್, ಹೆಲ್ಪರ್ಸ್, ಯುಜಿಡಿ ಕಾರ್ಮಿಕರು ಸೇರಿದಂತೆ ಎಲ್ಲಾ ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಗೊಳಪಡಿಸಬೇಕು ಎಂದು ಆಗ್ರಹಿಸಿದರು. ಈವರೆಗೂ ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದ ಸ್ಪಂದನೆಯೇ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟ ನಡೆಯಲಿದೆ. ಹೊರ ಗುತ್ತಿಗೆ ನೌಕರರನ್ನು ನೇರ ಪಾವತಿಯಡಿ ತಂದರೆ ಸರ್ಕಾರಕ್ಕೆ ಜಿಎಸ್ಟಿ ಉಳಿತಾಯದ ಜೊತೆಗೆ ನೌಕರರಿಗೆ ಸೇವಾ ಭದ್ರತೆ ಸಿಗುತ್ತದೆ. ಅಲ್ಲದೇ, ಏಜೆನ್ಸಿಗಳ ಕಿರುಕುಳವೂ ತಪ್ಪಲಿದೆ ಎಂದರು. 

ಸಂಘದ ಬಿ.ಸಂತೋಷ್, ಎಚ್.ಎಂ.ಕೊಟ್ರೇಶ್, ಜಿ.ಎಚ್.ಚಂದ್ರಪ್ಪ, ಎಂ.ರಮೇಶ್, ಮೈಲಾರಪ್ಪ, ಎನ್.ದ್ಯಾಮಣ್ಣ, ನವೀನಕುಮಾರ್, ಕೆಟಿಜೆ ನಗರ ರವಿ ಮತ್ತು ಇತರರು ಇದ್ದರು. 

ಹೊರ ಗುತ್ತಿಗೆ ನೌಕರರು ಧರಣಿ ನಡೆಸಿದ್ದ ಸ್ಥಳಕ್ಕೆ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನ ಕುಮಾರ, ಸದಸ್ಯರಾದ ಎಸ್.ಟಿ.ವೀರೇಶ್, ಆರ್.ಶಿವಾನಂದ್ ಇತರರು ಬೆಂಬಲಿಸಿ, ಹೋರಾಟಕ್ಕೆ ನೈತಿಕ ಸ್ಥೈರ್ಯ ತುಂಬಿದರು.

error: Content is protected !!