ಊಹಾತ್ಮಕ ದಾವೆಗಳಿಂದ ಹೆಚ್ಚುತ್ತಿರುವ ಹೊರೆ

ಊಹಾತ್ಮಕ ದಾವೆಗಳಿಂದ ಹೆಚ್ಚುತ್ತಿರುವ ಹೊರೆ

ವ್ಯವಸ್ಥೆ ಮೇಲಿನ ನಂಬಿಕೆ ಕುಂಠಿತವಾಗುವ ಅಪಾಯ: ನ್ಯಾ||  ಸಂತೋಷ್ ಹೆಗ್ಡೆ

ದಾವಣಗೆರೆ, ಫೆ. 12 – ತೀರ್ಪು ನಮ್ಮ ಪರವಾಗಿ ಬರುವ ಸಾಧ್ಯತೆ ಇರದಿದ್ದರೂ, ಊಹಾತ್ಮಕ ದಾವೆಗಳನ್ನು ದಾಖಲಿಸುವ ಪ್ರವೃತ್ತಿಯಿಂದಾಗಿ ನ್ಯಾಯಾಂಗದ ಉನ್ನತ ಹಂತದಲ್ಲಿ ಪ್ರಕರಣಗಳ ಹೊರೆ ಹೆಚ್ಚಾಗುತ್ತಿದೆ. ಇಂತಹ ಪ್ರವೃತ್ತಿಯಿಂದ ವ್ಯವಸ್ಥೆಯ ಮೇಲಿನ ನಂಬಿಕೆ ಕುಂಠಿತವಾಗುವ ಅಪಾಯವಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ನಗರದ ಆರ್.ಎಲ್. ಕಾನೂನು ಕಾಲೇಜಿ ನಲ್ಲಿ ಇಂದು ಆಯೋಜಿಸಲಾಗಿದ್ದ ವೃತ್ತಿಪರ ಪುಷ್ಠೀಕರಣ ಕಾರ್ಯಕ್ರಮದಲ್ಲಿ `ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಪರಿಣಾಮಗಳು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ನನ್ನ ತಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ, ಒಂಭತ್ತು ನ್ಯಾಯಮೂರ್ತಿಗಳಿದ್ದರು. ಈಗ ಸುಪ್ರೀಂ ಕೋರ್ಟ್‌ನಲ್ಲಿ 34 ನ್ಯಾಯಮೂರ್ತಿಗಳಿದ್ದಾರೆ. ಪ್ರಕರಣಗಳು ಹೆಚ್ಚಾಗಿರುವ ಕಾರಣ, ಇನ್ನೂ ಹತ್ತು ನ್ಯಾಯಮೂರ್ತಿಗಳ ಬೇಡಿಕೆ ಇದೆ. ಪ್ರಾಂತೀಯ ಸುಪ್ರೀಂ ಕೋರ್ಟ್ ಪೀಠಗಳ ಸ್ಥಾಪನೆಯ ಬೇಡಿಕೆಯೂ ಇದೆ ಎಂದವರು ಹೇಳಿದರು.

ಮೊದಲ ಹಂತದಲ್ಲೇ ತೀರ್ಪು ನಿಮ್ಮ ಪರವಾಗಿ ಬರದೇ ಇರುವಾಗ ಊಹಾತ್ಮಕವಾಗಿ ಮೇಲ್ಮನವಿ ದಾಖಲಿಸಿದಾಗ ಪ್ರಕರಣ ನಿಮ್ಮ ಪರವಾಗಿ ಆಗುತ್ತದೆಯೇ? ಎಂದವರು ಪ್ರಶ್ನಿಸಿದರು.

ಊಹಾತ್ಮಕ ಆಧಾರದ ಮೇಲೆ ಮೇಲ್ಮನವಿ, ಎರಡನೇ ಮೇಲ್ಮನವಿ, ಮರು ಪರಿಶೀಲನೆ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಇದರಿಂದಾಗಿ, ಹಲವು ಜನರು ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕೊಳ್ಳಲು ಭೂಗತರ ಮೊರೆ ಹೋಗುವುದೂ ನಡೆದಿದೆ. ಇಂತಹ ಪ್ರವೃತ್ತಿ ಹೆಚ್ಚಿದರೆ ವ್ಯವಸ್ಥೆಯ ಮೇಲೆ ಪರಿಣಾಮವಾಗುತ್ತದೆ ಎಂದು ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ಎಚ್ಚರಿಸಿದರು.

ಅಮೆರಿಕದಲ್ಲಿ ಸುಪ್ರೀಂ ಕೋರ್ಟ್ ಕೇವಲ ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆ ನಡೆಸುತ್ತದೆ. ಹೀಗಾಗಿ ಅಲ್ಲಿನ ಸುಪ್ರೀಂ ಕೋರ್ಟ್ ಮೇಲೆ ಪ್ರಕರಣಗಳ ಒತ್ತಡವಿಲ್ಲ. ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ಅಲ್ಲಿನ ಸುಪ್ರೀಂ ಕೋರ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಹೆಗ್ಡೆ ತಿಳಿಸಿದರು. ತೃಪ್ತಿ ಹಾಗೂ ಮಾನವೀಯತೆಯ ಕೊರತೆಯಿಂದಾಗಿ ಈ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ವಾಮ ಮಾರ್ಗ ಹಿಡಿದವರ ಆದಾಯ ಹೆಚ್ಚಿದಷ್ಟೂ, ಸರಿಯಾದ ದಾರಿಯಲ್ಲಿ ಸಾಗುತ್ತಿರುವವರ ಆದಾಯ ಕಡಿಮೆಯಾಗುತ್ತದೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ ಎಂದರು.

ವೇದಿಕೆಯ ಮೇಲೆ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮತ್ತು ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಉಪಸ್ಥಿತರಿದ್ದರು.

ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಜಿ.ಎಸ್. ಯತೀಶ್ ಅಧ್ಯಕ್ಷತೆ ವಹಿಸಿದ್ದರು.

error: Content is protected !!