ವಿಭಜನೆಯ ಮಾತಿನ ಕಾಂಗ್ರೆಸ್ ಅಪ್ರಸ್ತುತಿ

ವಿಭಜನೆಯ ಮಾತಿನ ಕಾಂಗ್ರೆಸ್ ಅಪ್ರಸ್ತುತಿ

ದಾವಣಗೆರೆ, ಫೆ. 8 – ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದ ಮಾನ ತೆಗೆದಿದೆ.  ದೇಶ ವಿಭಜನೆಯ ಮಾತನಾಡುತ್ತಿ ರುವ ಕಾಂಗ್ರೆಸ್ ಕೆಲವೇ ದಿನಗಳಲ್ಲಿ ಅಪ್ರಸ್ತುತ ವಾಗಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿ ಸಲಾಗಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಚಲೋ ದೆಹಲಿ ಪ್ರತಿಭಟನೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಬಂಡವಾಳ ದೇಶದ ಮುಂದೆ ಬಯಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ವಾರ್ಥ ಹಾಗೂ ದೇಶ ವಿರೋಧಿ ನಿಲುವನ್ನು ಖಡಾಖಂಡಿತವಾಗಿ ಟೀಕಿ ಸಿದ್ದಾರೆ ಎಂದೂ ಯಡಿಯೂರಪ್ಪ ಹೇಳಿದರು.

ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಈಗ ಪತ್ರಿಕೆ ಗಳಲ್ಲಿ ಸುಳ್ಳು ಜಾಹೀರಾತು ನೀಡಿ ಸಿಕ್ಕಿಕೊಳ್ಳುವ ಹೀನಾಯ ಸ್ಥಿತಿಗೆ ಬಂದಿದೆ ಎಂದರು.

ದೇಶ ವಿಭಜನೆಯ ಮಾತನಾಡುವ ಈ ಕಾಂಗ್ರೆಸ್ಸನ್ನು ಇನ್ನು ಕೆಲವೇ ದಿನಗಳಲ್ಲಿ ದೇಶದ ಜನರು ಅಪ್ರಸ್ತುತ ಮಾಡಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಜಾತಿ ಹೆಸರಿನಲ್ಲಿ ಸಮಾಜವನ್ನು ತುಂಡು ತುಂಡು ಮಾಡಿದ್ದರು. ಅಯೋಧ್ಯೆಯಲ್ಲಿ ನೆರವೇರಿರುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆಯಿಂದ ಜಾತಿಗಳೆಲ್ಲವೂ ಒಂದಾಗಿವೆ ಎಂದರು.

ಪ್ರಾಣ ಪ್ರತಿಷ್ಠಾಪನೆಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಹೆದರಿಕೆ ಆರಂಭವಾಗಿದೆ. ಕಾಶಿ ಹಾಗೂ ಮಥುರಾಗಳಲ್ಲೂ ದೇವಾಲಯ ಸ್ಥಾಪನೆಯಾದ ನಂತರ  ನಂತರ ಹಿಂದೂಗಳು ಇನ್ನೂ ಒಂದಾಗುತ್ತಾರೆ ಎಂದು ಹೆದರಿದೆ ಎಂದೂ ಈಶ್ವರಪ್ಪ ಹೇಳಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ 400ರ ಗಡಿ ದಾಟಲಿದೆ ಎಂಬುದನ್ನು ಕಾಂಗ್ರೆಸ್ ನಾಯಕರೇ ಒಪ್ಪುತ್ತಿದ್ದಾರೆ. ಮೋದಿ ಮೂರನೇ ಬಾರಿ ಪ್ರಧಾನಿಯಾದರೆ, ದೇಶವೂ ಆರ್ಥಿಕತೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಬರಲಿದೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮೋದಿ ಮೂರನೆ ಬಾರಿ ಪ್ರಧಾನಿಯಾಗುವುದು ನಿಶ್ಚಿತ. ಜಿಲ್ಲೆಯಲ್ಲೂ ಸೂಕ್ತ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಬೇಕು. ಕಾರ್ಯಕರ್ತರು ಗೆಲ್ಲಿಸಿ ಕೊಡಲಿದ್ದಾರೆ ಎಂದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಮೋದಿ ಮತ್ತೆ ಪ್ರಧಾನಿಯಾಗಬೇಕಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಒಂದಾಗಿ ಶ್ರಮಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಪಕ್ಷ ಸದೃಢವಾಗಿರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಕೆಲ ಪಕ್ಷಗಳಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹೀಗಾಗಿ ನಮ್ಮಲ್ಲಿ ಅಭ್ಯರ್ಥಿಗಳು ಹೆಚ್ಚಿರುವುದೂ ಸಂತೋಷ ಎಂದರು.

ನೂತನ ಜಿಲ್ಲಾ ಅಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ಮೋದಿ ಪ್ರಧಾನಿಯಾದ ನಂತರ ದೇಶದ ಅಭದ್ರತೆಯನ್ನು ನಿವಾರಿಸಿದ್ದಾರೆ. ಬಡವರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಬೇಕಿದೆ. ಲೋಕಸಭಾ ಚುನಾವಣೆ ಸನಿಹವಿದ್ದು, ಕಾರ್ಯಕರ್ತರು ಪಕ್ಷಕ್ಕೆ ಹೆಚ್ಚು ಸಮಯ ಕೊಡಬೇಕು ಎಂದರು.

ಸಮಾರಂಭದಲ್ಲಿ ನೂತನ ಜಿಲ್ಲಾಧ್ಯಕ್ಷ ರಾಜಶೇಖರ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಸಿ. ಅನಿಲ್ ಕುಮಾರ್ ನಾಯ್ಕ ಹಾಗೂ ಕುಮಾರ್ ಐರಣಿ ಅವರು ಪದಗ್ರಹಣ ಮಾಡಿದರು.

ವೇದಿಕೆಯ ಮೇಲೆ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಪ್ರೊ. ಲಿಂಗಣ್ಣ, ಬಸವರಾಜ ನಾಯ್ಕ, ಮಾಡಾಳ್ ವಿರೂಪಾಕ್ಷಪ್ಪ, ಗುರುಸಿದ್ದನಗೌಡ, ಉಪ ಮೇಯರ್ ಯಶೋಧ ಹೆಗ್ಗಪ್ಪ, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಬಿಜೆಪಿ ಮುಖಂಡರಾದ ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಚನ್ನಗಿರಿ ಶಿವಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಶಾಂತರಾಜ್ ಪಾಟೀಲ್, ಯಶವಂತರಾವ್ ಜಾಧವ್, ಅನಿತ್ ಕುಮಾರ್, ಬಿ.ಎಸ್. ಜಗದೀಶ್, ರಾಜನಹಳ್ಳಿ ಶಿವಕುಮಾರ್, ಎ.ವೈ. ಪ್ರಕಾಶ್, ಡಾ. ರವಿಕುಮಾರ್, ಶಿವಪ್ರಕಾಶ್, ಆನಂದರಾಜ್, ದೇವರಮನೆ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಬಸವರಾಜ ಕೇಲಗಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!