ರಾಜನಹಳ್ಳಿಯಲ್ಲಿ ಅರಿವಿನ ಜಾತ್ರೆಗೆ ವಿಧ್ಯುಕ್ತ ಚಾಲನೆ

ರಾಜನಹಳ್ಳಿಯಲ್ಲಿ ಅರಿವಿನ ಜಾತ್ರೆಗೆ ವಿಧ್ಯುಕ್ತ ಚಾಲನೆ

ಮಲೇಬೆನ್ನೂರು, ಫೆ. 8- ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದಲ್ಲಿ ಇಂದು ಬೆಳಿಗ್ಗೆ ರಾಜನಹಳ್ಳಿ  ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಶಕುಂತಲ ಯಲ್ಲಪ್ಪ ಅವರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ  ಸಾನ್ನಿಧ್ಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ 6ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಅರಿವಿನ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಇದಕ್ಕೂ ಮುನ್ನ ಶ್ರೀಗಳು ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಜಾತ್ರಾ ಸಮಿತಿ ಸಂಚಾಲಕರಾದ ನಿವೃತ್ತ ಡಿಸಿ ಬಿ. ಶಿವಪ್ಪ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಮಠದ ಧರ್ಮದರ್ಶಿಗಳಾದ ಹರ್ತಿಕೋಟೆ ವೀರೇಂದ್ರ ಸಿಂಹ, ಕೆ.ಬಿ. ಮಂಜುನಾಥ್, ಜಿ.ಪಂ. ಮಾಜಿ ಸದಸ್ಯ ತ್ಯಾವಣಿಗಿ ಗೋವಿಂದಸ್ವಾಮಿ, ಮಹಿಳಾ ಮುಖಂಡರಾದ ವಿಜಯಶ್ರೀ ಮಹೇಂದ್ರಕುಮಾರ್, ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ನಿವೃತ್ತ ಯೋಧ ಮಂಜುನಾಥ್, ಶಿಕ್ಷಕ ಜಿಗಳಿಯ ಜಿ.ಆರ್. ನಾಗರಾಜ್, ಪತ್ರಕರ್ತರಾದ ಆರ್.ಕೆ. ಸುಬೇದಾರ್, ಜಿಗಳಿ ಪ್ರಕಾಶ್, ಕಲಾವಿದ ಎಂ.ಡಿ. ಕೋಟೆ ಕುಮಾರ್, ರಾಜನಹಳ್ಳಿಯ ಬಾಬಣ್ಣ, ಭೀಮಣ್ಣ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು.

ಮೆರವಣಿಗೆ : ಧ್ವಜಾರೋಹಣದ ನಂತರ ರಾಜನಹಳ್ಳಿ ಗ್ರಾಮ ದಿಂದ ಮಠದವರೆಗೆ ಶ್ರೀ ವಾಲ್ಮೀಕಿ ಪ್ರತಿಮೆಯ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರ ಪೂರ್ಣ ಕುಂಭ ಮೇಳ ಹಾಗೂ ಆರುಂಡಿಯ ಡೊಳ್ಳು, ವೀರಗಾಸೆ, ಕೀಲುಕುಣಿತ ಸೇರಿದಂತೆ ವಿವಿಧ ಕಲಾ ಮೇಳಗಳು ಮೆರವಣಿಗೆಗೆ ಮೆರಗು ತಂದವು.

ಮೇಳ ಉದ್ಘಾಟನೆ : ಉದ್ಯೋಗ ಮೇಳ ಮತ್ತು ಕೃಷಿ ಮೇಳವನ್ನು ಶ್ರೀಗಳ ಸಾನ್ನಿಧ್ಯದಲ್ಲಿ ಜಾತ್ರಾ ಸಮಿತಿ ಸಂಚಾಲಕ ಬಿ. ಶಿವಪ್ಪ ಮತ್ತು ಎಸ್ಟಿ ಅಭಿವೃದ್ಧಿ ನಿಗಮದ ನಿವೃತ್ತ ಎಂ.ಡಿ. ಕೆ.ಎಸ್. ಮೃತ್ಯುಂಜಯಪ್ಪ ಉದ್ಘಾಟಿಸಿದರು.

ಗೋಷ್ಠಿ : ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಡೆದ ವಾಲ್ಮೀಕಿ ಜಾತ್ರೆಯ ಮೊದಲನೇ ಮಹಿಳಾ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ದೇವದುರ್ಗದ ಶಾಸಕಿ ಕರೆಮ್ಮ, ಮಠದ ಧರ್ಮದರ್ಶಿ  ಶಾಂತಲಾ ರಾಜಣ್ಣ, ಹೈಕೋರ್ಟ್ ವಕೀಲೆ ಅಶ್ವಿನಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂ.ಡಿ. ಕವಿತಾ ವಾರಂಗಲ್ ಅವರುಗಳು  ಬುಡಕಟ್ಟು ಮಹಿಳೆ ಮತ್ತು ಸಬಲೀಕರಣ ಕುರಿತು ಮಾತನಾಡಿದರು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕಿಯವರ ಶ್ರೀಗಳು ಗೌರವಿಸಿದರು.

ಬಳ್ಳಾರಿಯ ಆವಂತಿಕ, ದಾವಣಗೆರೆ ಸ್ಫೂರ್ತಿ ಮತ್ತು ಹಾಸನದ ಮೌಲ್ಯ  ಲಂಕೇಶ್ ಅವರ ನೃತ್ಯಗಳು ಗಮನ ಸೆಳೆದವು.

ಮಧ್ಯಾಹ್ನದ ನಂತರ ಹಮ್ಮಿಕೊಂಡಿದ್ದ ನೌಕರರ ಗೋಷ್ಠಿಯಲ್ಲಿ  ನೌಕರ ಸಮಸ್ಯೆಗಳು – ಪರಿಹಾರ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್.ಎಸ್. ಮಂಜುನಾಥ ಮಾತನಾಡಿದರೆ, ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವಿಶೇಷ ಉಪನ್ಯಾಸ ನೀಡಿದರು.

ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ್ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು.

ಸಂಜೆ ಏರ್ಪಡಿಸಿದ್ದ ಸಂಘಟನಾ ಗೋಷ್ಠಿಯಲ್ಲಿ ಎಸ್ಸಿ-ಎಸ್ಟಿ ಒಂದಾಗಬೇಕು ಏಕೆ? ಎಂಬ ಬಗ್ಗೆ ಮಾವಳ್ಳಿ ಶಂಕರ್, ಜಿ.ಟಿ. ಚಂದ್ರಶೇಖರಪ್ಪ, ಕೆ.ಎಸ್. ಮೃತ್ಯುಂಜಯಪ್ಪ, ಅನಂತನಾಯ್ಕ, ಎಲ್. ಮುನಿಸ್ವಾಮಿ, ಬೆಳ್ಳಿ ಗಂಗಾದರ್, ಹೊದಿಗೆರೆ ರಮೇಶ್, ಡಾ. ವೈ. ರಾಮಪ್ಪ ಮತ್ತಿತರರು ಮಾತನಾಡಿದರು.  ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ 10 ರಿಂದ ಹಾಸನದ ಶ್ರೀ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದವರು ವಾಲ್ಮೀಕಿ ವಿರಚಿತ `ಸಂಪೂರ್ಣ ರಾಮಾಯಣ’ ನಾಟಕವನ್ನು ಪ್ರದರ್ಶಿಸಿದರು.

error: Content is protected !!