ಸರ್ಕಾರಿ ನೌಕರರ ಗುಣಮಟ್ಟದ ಕರ್ತವ್ಯಕ್ಕೆ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿ

ಸರ್ಕಾರಿ ನೌಕರರ ಗುಣಮಟ್ಟದ ಕರ್ತವ್ಯಕ್ಕೆ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿ

ಹರಿಹರ, ಫೆ.8- ಸರ್ಕಾರಿ ನೌಕರರಿಗೆ ಅನೇಕ ಒತ್ತಡಗಳಿದ್ದರೂ, ಜನ ಮೆಚ್ಚುವ ರೀತಿಯಲ್ಲಿ ರಚನಾತ್ಮಕ ಮತ್ತು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ  ಷಡಾಕ್ಷರಿ ಅಭಿಪ್ರಾಯಪಟ್ಟರು.

ಹರಿಹರ ತಾಲ್ಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಶ್ರೀಮಠದ 26 ನೇ ವಾರ್ಷಿಕೋತ್ಸವ, ಲಿಂ. ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮಿಗಳ 17 ನೇ ವರ್ಷದ ಪುಣ್ಯರಾಧನೆ, ಜಗದ್ಗುರು ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ 16 ನೇ ವರ್ಷದ ಪಟ್ಟಾಧಿ ಕಾರ, ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸದ ಸಮಾರಂಭದ ದಿ. ವೆಂಕಟೇಶ್ ನಾಯಕ ವೇದಿಕೆಯಲ್ಲಿ ನಡೆದ ನೌಕರರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ಗುಣಮಟ್ಟದ ಕರ್ತವ್ಯ ನಿರ್ವಹಣೆಗೆ ಖಾಲಿ ಇರುವ ಎರಡು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಬೇಕು. ನೇಮಕಾತಿ ಹೊಂದುವ ನೌಕರರಿಗೆ ಸರಿಯಾದ ರೀತಿಯಲ್ಲಿ ತಾಂತ್ರಿಕ ತರಬೇತಿ ನೀಡಬೇಕು, ಗುಣಮಟ್ಟದ ಆನ್ಲೈನ್ ವ್ಯವಸ್ಥೆ ಆಗಬೇಕು. ಸರ್ಕಾರದ ನಿಯಮ ಗಳಲ್ಲಿ ಸರಳಿಕರಣವಾಗಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ ರಾಜ್ಯದಲ್ಲಿ ಹಿಂದೆ 4.5 ಕೋಟಿ ಜನಸಂಖ್ಯೆ ಇದ್ದಾಗ 7.5 ಲಕ್ಷ ಸರ್ಕಾರಿ ನೌಕರರಿದ್ದರು. ಇವಾಗ 6.5 ಕೋಟಿ ಜನಸಂಖ್ಯೆ ಇದ್ದರೂ ಸಹಿತ  5.10 ಸಾವಿರ ನೌಕರರು ಇರೋದರಿಂದ ಸುಮಾರು 2 ಲಕ್ಷದ 60 ಸಾವಿರ ನೌಕರರ ಖಾಲಿ ಹುದ್ದೆಗಳಿದ್ದು ಭರ್ತಿ ಮಾಡುತ್ತಿಲ್ಲ. ಇತ್ತೀಚೆಗೆ ನಡೆಯುತ್ತಿರುವ ಕೆ.ಪಿ.ಎಸ್.ಸಿ. ಸೇರಿದಂತೆ ಅನೇಕ ನೇಮಕಾತಿ ಪಕ್ರಿಯೆಗಳು ಕಾನೂನಿನ ಅಡಿಯಲ್ಲಿ ನಡೆಯದೇ ಮಧ್ಯಸ್ಥಿಕೆ ವಹಿಸುವ ವ್ಯಕ್ತಿಗಳ ಮಧ್ಯದಲ್ಲಿ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. 

ಇತ್ತೀಚಿನ ದಿನಗಳಲ್ಲಿ ನೇಮಕಾತಿಯಾಗುವ ನೌಕರರಿಗೆ ಸರಿಯಾದ ತಾಂತ್ರಿಕ ತರಬೇತಿ ಇಲ್ಲದೇ ಆಡಳಿತ ವ್ಯವಸ್ಥೆಯಲ್ಲಿ ಆಶಾಂತಿ ವಾತಾವರಣ ಸೃಷ್ಟಿ ಯಾಗುತ್ತಿದ್ದು, ಅದಕ್ಕಾಗಿ ಪಿಡಿಓ ಸೇರಿದಂತೆ ಅನೇಕ ಹೊಸದಾಗಿ ನೇಮಕಗೊಂಡ ನೌಕರರಿಗೆ ತಾಂತ್ರಿಕತೆಯ ತರಬೇತಿ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು. 

ನೌಕರರು ಅನೇಕ ಒತ್ತಡಗಳ ಮಧ್ಯದಲ್ಲಿ ಕರ್ತವ್ಯವನ್ನು ನಿರ್ವಹಣೆ ಮಾಡಿದರೂ ಸಹಿತ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕ 6 ನೇ ಸ್ಥಾನವನ್ನು ಹೊಂದಿದೆ. ತೆರಿಗೆ ವಸೂಲಿಯಲ್ಲಿ 2 ಸ್ಥಾನ ಹೊಂದಿದ್ದರಿಂದ ಮುಂಬರುವ ಬಜೆಟ್ ಗಾತ್ರವನ್ನು ರಾಜ್ಯ ಸರ್ಕಾರ 3 ಲಕ್ಷದ 83 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮಂಡಿಸಲಿಕ್ಕೆ ತಯಾರಿ ನಡೆದಿದೆ ಎಂದು ಹೇಳಿದರು.

ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿ, ಶೋಷಿತರ ಬದುಕನ್ನು ಮೇಲೆ ತರುವುದರ ಜೊತೆಗೆ ಸಮಸಮಾಜದ ಅಡಿಯಲ್ಲಿ ಎಲ್ಲರನ್ನೂ ತರಬೇಕು ಎಂದು ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ಗುರು ಪರಂಪರೆ, ಮಠಗಳ ಪರಂಪರೆ ಆಧ್ಯಾತ್ಮಿಕ ಪರಂಪರೆಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿ ಸಮಾಜವನ್ನು ಸದೃಢವಾಗಿ ಕಟ್ಟುವಂತ ಕೆಲಸವನ್ನು ಮಾಡುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು. 

ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿ.ಐ.ಜಿ. ರವಿ ಡಿ. ಚೆನ್ನಣ್ಣನವರ್ ಮಾತನಾಡಿ, 2011 ರ ಜನಗಣತಿ ಪ್ರಕಾರ ಭಾರತದಲ್ಲಿ 1297 ಎಸ್ಸಿ ವರ್ಗಗಳಿದ್ದವು, 812  ಪರಿಶಿಷ್ಟ ಪಂಗಡಗಳಿದ್ದವು, ರಾಜ್ಯದಲ್ಲಿ 101 ಎಸ್ಸಿ ಮತ್ತು 50 ಪರಿಶಿಷ್ಟ ಪಂಗಡಗಳಿದ್ದರೆ, 10 ಲಕ್ಷ  ನಾಯಕ ಜನಾಂಗದವರಲ್ಲಿ ಭೂಮಿಯನ್ನು ಹೊಂದದೆ ಇರುವಂತವರು ಶೇ. 74 ರಷ್ಟು ಇದ್ದಾರೆ. 10 ಸಾವಿರ ಕಡಿಮೆ ಸಂಬಳವನ್ನು ಪಡೆಯವಂತವರು ಶೇ. 90 ರಷ್ಟು ಇದ್ದಾರೆ. ಶೇ. 20 ರಷ್ಟು ವಿದ್ಯಾರ್ಥಿಗಳು ಇದ್ದು ಶೇ. 5 ರಷ್ಟು ಮಾತ್ರ ಸರ್ಕಾರಿ ನೌಕರರು ಇದ್ದಾರೆ ಆಗಾಗಿ ಸಮಾಜದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸುಧಾರಣೆ ಆಗಬೇಕಾದರೆ ಮನೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ತಂದೆ- ತಾಯಿ ಮುಂದಾಗಬೇಕಿದೆ ಎಂದು ಹೇಳಿದರು.

ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮಂಜುನಾಥ್ ಪ್ರಾಸ್ತಾವಿಕವಾಗಿ  ಮಾತನಾಡಿದರು. 

ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ,  ಮಾಜಿ ಶಾಸಕ ಪ್ರತಾಪ್ ನಾಯ್ಕ್, ಎಸ್ಸಿ ಎಸ್ಟಿ ನಿಗಮದ ಪದ್ಮನಾಭ,  ಗಂಗಾಧರ ನಾಯ್ಕ್, ಪಂಪಾಪತಿ, ಉದಯಕುಮಾರ್, ಇತರರು ಹಾಜರಿದ್ದರು. 

error: Content is protected !!