ಈ ವರ್ಷ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ನಾಡೋಜ ಪ್ರೊ. ತೇಜಸ್ವಿ ಕಟ್ಟಿಮನಿ, ರಂಗರಾಜು ವನದುರ್ಗ ಅವರಿಗೆ `ವಾಲ್ಮೀಕಿ ರತ್ನ’ ಪ್ರಶಸ್ತಿ ಮತ್ತು ಖ್ಯಾತ ಸಾಹಿತಿ ಬಿ.ಎಲ್.ವೇಣು ಅವರಿಗೆ `ಮದಕರಿ ನಾಯಕ’ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸ್ವಾಮೀಜಿ ಪ್ರಕಟಿಸಿದರು.
ಮಲೇಬೆನ್ನೂರು, ಫೆ.6- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇದೇ ದಿನಾಂಕ 8 ಮತ್ತು 9 ರಂದು ಜರುಗಲಿರುವ 6ನೇ ವರ್ಷದ ವಾಲ್ಮೀಕಿ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶ್ರೀಗಳೇ ಖುದ್ದು ನಿಂತು ಸಿದ್ಧತೆಗಳಿಗೆ ಅಂತಿಮ ರೂಪ ನೀಡಲು ನಿರ್ದೇಶನ ನೀಡುತ್ತಿದ್ದಾರೆ.
ಏತನ್ಮಧ್ಯೆ ಮಂಗಳವಾರ ಶ್ರೀಮಠದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು, ಈ ಬಾರಿಯ ವಾಲ್ಮೀಕಿ ಜಾತ್ರೆಗೆ ಸಿನಿಮಾ ನಟರಿಗೆ ಆಮಂತ್ರಣ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ವಾಲ್ಮೀಕಿ ಜಾತ್ರೆಯನ್ನು ಜಾಗೃತಿಗಾಗಿ ಮಾಡುತ್ತಿದ್ದು, ಜಾತ್ರೆ ಮೂಲಕ ಸಂವಿಧಾನ ಬದ್ಧ ಹಕ್ಕುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತಾ ಬಂದಿದ್ದೇವೆ. ಇದರಿಂದ ಕೆಲವು ಒತ್ತಾಯಗಳಿಗೆ ಸ್ಪಂದನೆ ಸಿಕ್ಕಿದೆ. ಈ ವರ್ಷದ ಜಾತ್ರೆಯಲ್ಲಿ ಎಸ್ಸಿ-ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸುವಂತೆ ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಪಡೆದವರಿಗೆ ಹಾಗೂ ನೀಡಿದವರಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗುವುದು.
ಜೊತೆಗೆ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಮತ್ತು ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪಿಸುವಂತೆ ಆಗ್ರಹಿಸಲಾಗುವುದು.
ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣವನ್ನು 9 ಷೆಡ್ಯೂಲ್ಗೆ ಸೇರಿಸುವಂತೆ ಮತ್ತು ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡಿರುವ ಶ್ರೀರಾಮ ಮಂದಿರದಲ್ಲಿ ವಾಲ್ಮೀಕಿ, ಶಬರಿ, ಭಗೀರಥ, ವಶಿಷ್ಟ ಋಷಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದೆಂದು ಸ್ವಾಮೀಜಿ ತಿಳಿಸಿದರು.
ಕಳೆದ 2 ತಿಂಗಳಲ್ಲಿ 30 ಜಿಲ್ಲೆಗಳಲ್ಲಿ 175 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ, ಭಕ್ತರನ್ನು ಜಾತ್ರೆಗೆ ಆಹ್ವಾನಿಸಿ ಬಂದಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ 5 ಜನ ವಿಎಸ್ಎಸ್ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಜಾತ್ರೆಯ ಕರಪತ್ರ, ಪೋಸ್ಟರ್ಗಳನ್ನು ತಲುಪಿಸುವುದು ಮತ್ತು ಜಾತ್ರೆಗೆ ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆಯನ್ನುಸಂಗ್ರಹಿಸಿ ಮಠಕ್ಕೆ ತಂದು ಒಪ್ಪಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ಈ ಸಮಾಜ ನಾಡು-ನುಡಿಗಾಗಿ ಹೋರಾಟ, ಬಲಿದಾನ ಮಾಡಿದ್ದು, ಸ್ವಾತಂತ್ರ್ಯ ನಂತರ ನಮ್ಮ ಜನರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡಾ. ಅಂಬೇಡ್ಕರ್ ಅವರು, ನೀಡಿದ ಸಂವಿಧಾನ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಮೀಸಲಾತಿ, ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ ದಿಂದಾಗಿ ನಾಯಕ ಸಮಾಜಕ್ಕೆ ಅನುಕೂಲ ವಾಗಿದೆ ಎಂದು ಸ್ವಾಮೀಜಿ ಹೇಳಿದರು.
ನಾಳೆ ಗುರುವಾರ ಮತ್ತು ಶುಕ್ರವಾರ ಜರುಗುವ 6ನೇ ವರ್ಷದ ವಾಲ್ಮೀಕಿ ಜಾತ್ರೆ ಅರ್ಥಪೂರ್ಣವಾಗಲಿದ್ದು, 2 ರಿಂದ 3 ಲಕ್ಷ ಜನ ಜಾತ್ರೆಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುವಾರ ವಿವಿಧ ವಿಚಾರಗೋಷ್ಠಿಗಳನ್ನು ಹಾಗೂ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ 9ಕ್ಕೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ವಾಲ್ಮೀಕಿ ತೇರು ಹರಿಯಲಿದೆ.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿ ದ್ದಾರೆಂದು ಸ್ವಾಮೀಜಿ ತಿಳಿಸಿದರು.
ಎಸ್ಪಿ ಭೇಟಿ : ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರು, ಮಂಗಳವಾರ ಮಠಕ್ಕೆ ಆಗಮಿಸಿ ವೇದಿಕೆ, ಹೆಲಿಪ್ಯಾಡ್, ಊಟದ ಸ್ಥಳ ಮತ್ತು ವಾಹನಗಳ ಪಾರ್ಕಿಂಗ್ ಪರಿಶೀಲಿಸಿದರು.
ನಂತರ ಶ್ರೀಗಳ ಜೊತೆ ಜಾತ್ರೆಯ ಕಾರ್ಯಕ್ರಮಗಳು ಮತ್ತು ಜಾತ್ರೆಗೆ ಬರುವ ಗಣ್ಯರ, ಮಠಾಧೀಶರ ಹಾಗೂ ಜನರ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಬಂದೋಬಸ್ತ್ ಕಲ್ಪಿಸುವ ವಿಚಾರವಾಗಿ ಪೊಲೀಸ್ ಅಧಿಕಾರಿಗಳ ಸಭೆಯನ್ನೂ ನಡೆಸಿದರು.
ವಾಣಿಜ್ಯ ಇಲಾಖೆಯ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್, ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಸಿಗರಿ, ಪಿಎಸ್ಐ ಅರವಿಂದ್ ಮತ್ತು ಮಠದ ಧರ್ಮದರ್ಶಿ ಕೆ.ಬಿ.ಮಂಜುನಾಥ್, ಸಮಾಜದ ಮುಖಂಡರಾದ ತಿಮ್ಮೇನಹಳ್ಳಿ ಚಂದ್ರಪ್ಪ, ಜಿಗಳಿ ಆನಂದಪ್ಪ, ಕೊಕ್ಕನೂರು ಸೋಮಶೇಖರ್, ಪಾಳೇಗಾರ್ ನಾಗರಾಜ್, ಮಕರಿ ಪಾಲಾಕ್ಷಪ್ಪ, ರಾಜನಹಳ್ಳಿ ಭೀಮಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.