ಸಂವಿಧಾನದ ಆಶಯದಂತೆ ನಡೆಯುವುದೇ ದೇಶಕ್ಕೆ ಕೊಡುವ ಬಹುದೊಡ್ಡ ಗೌರವ

ಸಂವಿಧಾನದ ಆಶಯದಂತೆ ನಡೆಯುವುದೇ ದೇಶಕ್ಕೆ ಕೊಡುವ ಬಹುದೊಡ್ಡ ಗೌರವ

ಎಲೆಬೇತೂರು ಶ್ರೀ ಕೊಂಡಜ್ಜಿ ಬಸಪ್ಪ ಶಾಲೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಂ.ಬಸವರಾಜಪ್ಪ

ದಾವಣಗೆರೆ, ಫೆ. 5- ತಾಲ್ಲೂಕಿನ ಎಲೆಬೇತೂರು ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ, ಭಾಷೆ, ಆಚಾರ-ವಿಚಾರಗಳಿದ್ದರೂ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸಂವಿಧಾನ. ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದೇ ನಾವು ನಮ್ಮ ದೇಶಕ್ಕೆ ಕೊಡುವ ಬಹುದೊಡ್ಡ ಗೌರವ ಎಂದು ಶಾಲಾ ಸಲಹಾ ಸಮಿತಿ ಅಧ್ಯಕ್ಷ  ಎಂ. ಬಸವರಾಜಪ್ಪ ಅಭಿಪ್ರಾಯಿಸಿದರು.

 ಇಲ್ಲಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತಾಶ್ರ ಯದಲ್ಲಿ 75ನೇ ಗಣರಾಜ್ಯೋತ್ಸವ  ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ   ಬಸವರಾಜಪ್ಪನವರು, ದೇಶದಲ್ಲಿ ಆಚರಿಸುವ ಪ್ರಮುಖ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವೂ ಒಂದು. ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಜಾರಿಗೆ ಬಂದದ್ದು 1950 ರ ಜನವರಿ 26 ರಂದು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಗಣರಾಜ್ಯೋತ್ಸವದ ದಿನವನ್ನಾಗಿ ವಿಜೃಂಭಣೆಯಿಂದ ಆಚರಿಸುತ್ತಾ ಬರಲಾಗುತ್ತಿದೆ ಎಂದರು.

ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ದೇಶ ಆರ್ಥಿಕವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ ಜಗತ್ತಿನ ಇತರೆ ದೇಶಗಳಿಗಿಂತ ಅಗ್ರಸ್ಥಾನದಲ್ಲಿ ನಿಲ್ಲುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗಳೂ ಶ್ರಮಿಸಬೇಕಾಗಿದೆ ಎಂದರು. 

ತರಳಬಾಳು ಪ್ರಾಥಮಿಕ ಶಾಲಾ ಸಲಹಾ ಸಮಿತಿ  ಅಧ್ಯಕ್ಷ ಹೆಚ್. ಬಸವರಾಜಪ್ಪ,   ಸಲಹಾ ಸಮಿತಿ  ಸದಸ್ಯ    ಬಿ. ಜಿ. ಸಂಗನಗೌಡರು ಮಾತನಾಡಿ ನಮ್ಮ   ಸಂವಿಧಾನ ವನ್ನು ದುರುಪಯೋಗಪಡಿಸಿಕೊಳ್ಳದೇ ಸದುಪಯೋಗ ಪಡಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು  ಎಂದರು.

ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ  ಶಿಕ್ಷಕ  ಡಾ. ಎಸ್. ಓ. ಷಣ್ಮುಖಪ್ಪ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯ ಮೇಲೆ  ಬಿ .ವಿರೂಪಾಕ್ಷಪ್ಪ, ಮರುಳಸಿದ್ಧಪ್ಪ, ಹಳ್ಳಿಕೆರೆ ರಾಜಣ್ಣ, ನರೇಂದ್ರ, ಮಹೇಶ ಎಲಿಗಾರ್, ಷಡಕ್ಷರಪ್ಪ, ಕೊಟ್ರೇಶ್   ಉಪಸ್ಥಿತರಿದ್ದರು. 

ಮುಂಜಾನೆ ಮಕ್ಕಳು ಬಹು ಶಿಸ್ತಿನಿಂದ ಗ್ರಾಮದ ಮುಖ್ಯ ಬೀದಿಗಳಲ್ಲಿ ಆಕರ್ಷಕ ಪ್ರಭಾತ್ ಫೇರಿ ನಡೆಸಿದರು. ಆರಂಭದಲ್ಲಿ ರಾಷ್ಟ್ರಗೀತೆಯೊಂದಿಗೆ ವಂದೇಮಾತರಂ, ಧ್ವಜಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಸ್ಕೌಟ್ ಅಂಡ್ ಗೈಡ್ಸ್ ಮತ್ತು ಎನ್. ಸಿ. ಸಿ ಪಡೆಯವರು ಧ್ವಜ ವಂದನೆ ನಡೆಸಿಕೊಟ್ಟರು. ಭೂಮಿಕಾ ಮತ್ತು ಸಂಗಡಿ ಗರು ದೇಶಭಕ್ತಿಗೀತೆಗೆ ಆಕರ್ಷಕ ನೃತ್ಯರೂಪಕ ನೀಡಿದರು. 

ವಿದ್ಯಾರ್ಥಿಗಳಾದ ಪ್ರತೀಕ್, ಪ್ರಕೃತಿ ವಿ, ಮೇಘನಾ ಬಿ, ಪೂಜಾ ಟಿ. ಆರ್, ಯಶೋಧ ಕೆ, ವರ್ಷಿಣಿ ಓ. ಎನ್, ಸುಪ್ರಭೆ ಡಿ. ಎಸ್, ಮೇಘನಾ, ಅಕ್ಷತಾ ಎಂ. ಸಿ, ಅನನ್ಯ ಕೆ. ಆರ್ ಮೊದಲಾದವರು ಗಣರಾಜ್ಯೋತ್ಸವ ಕುರಿತಂತೆ ಮಾತನಾಡಿದರು. ನಿಹಾಲ್ ಕೆ. ಎಂ, ಸಿಂಚನಾ ಎಂ ಮತ್ತು ಸಂಗಡಿಗರು, ರೇಷ್ಮಾ, ವಿನುತಾ, ಯಶ್ವಂತ್ ಬಿ. ಆರ್, ಅನುಷ ಮತ್ತು ಸಂಗಡಿಗರು, ಬೃಂದಾ ಎನ್, ಪವಿತ್ರಾ ಎಸ್, ನಂದೀಶ ಬಿ ಮತ್ತು ಸಂಗಡಿಗರು ದೇಶಭಕ್ತಿಗೀತೆ ಹಾಡಿದರು. 

ಶಿಕ್ಷಕಿ ಉಷಾ ಪಿ. ಎಂ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ. ಎಂ ಶಶಿಕಲಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕೀರ್ತನಾ ಬಿ ಮತ್ತು ಪೂಜಾ ಟಿ.ಆರ್ ಕಾರ್ಯಕ್ರಮ ನಡೆಸಿಕೊಟ್ಟರೆ ಮುಖ್ಯ ಶಿಕ್ಷಕಿ ಎಂ. ಬಿ. ಪ್ರೇಮಾ  ವಂದಿಸಿದರು.   

error: Content is protected !!