ಉದ್ಯಮಶೀಲ ಮಹಿಳೆಯರಿಗೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕರೆ
ದಾವಣಗೆರೆ, ಫೆ.2- ಉದ್ಯಮ ಶೀಲ ಮಹಿಳೆಯರು ತಮ್ಮ ಕೌಶಲ್ಯವನ್ನು ಮಕ್ಕಳಿಗೂ ಧಾರೆ ಎರೆದು ಅವರ ಬೆಳವಣಿಗೆಗೆ ಸಹಕರಿಸಬೇಕು ಎಂದು ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ ನೀಡಿದರು.
ಇಲ್ಲಿನ ಡಾ. ಸದ್ಯೋಜ್ಯಾತ ಶಿವಾಚಾರ್ಯ ಸ್ವಾಮಿಗಳವರ ಹಿರೇಮಠದಲ್ಲಿ ಬುಧವಾರ ನಡೆದ ಸ್ನೇಹ ಮಹಿಳಾ ಬಳಗದ 12ನೇ ವಾರ್ಷಿಕೋತ್ಸವ, ವಸ್ತು ಪ್ರದರ್ಶನ, ಮಾರಾಟ ಹಾಗೂ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪತಿ, ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಮಕ್ಕಳಲ್ಲಿ ಸಂಸ್ಕಾರ, ಮೌಲ್ಯ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆತ್ತವರು ತಮ್ಮ ಮಕ್ಕಳಿಗೆ ಸಮಯ ಮೀಸಲಿಡಬೇಕು. ಆ ಮೂಲಕ ಅವರಲ್ಲಿ ಮೌಲ್ಯ ಬೆಳೆಸಿ, ಬಾಂಧವ್ಯ ಗಟ್ಟಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಮಹಿಳೆಯರು ಕೌಟುಂಬಿಕ ಜವಾಬ್ದಾರಿಯ ಜೊತಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿಭಾಯಿಸಬೇಕು. ಆಗ ಮಾತ್ರ ನೀವು ಯಶಸ್ವಿಗೆ ಪರಿಪೂರ್ಣ ಮಹಿಳೆಯರಾಗಲು ಸಾಧ್ಯ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಬಳಗದ ಗೌರವಾಧ್ಯಕ್ಷೆ ಮಂಜುಳ ಬಸವಲಿಂಗಪ್ಪ ಮಾತನಾಡುತ್ತಾ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ಕೊಡುವ ಮೂಲಕ ಪ್ರಭಾ ಮಲ್ಲಿಕಾರ್ಜುನ್ ಅವರು ಸ್ತ್ರೀ ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದಾರೆ ಎಂದರು. ಬೆಳಗ್ಗೆಯಿಂದ ಸಂಜೆ 7 ಗಂಟೆಯ ವರೆಗೆ ಸುಮಾರು 40 ಮಳಿಗೆಗಳಲ್ಲಿ ಮಹಿಳಾ ಉದ್ಯಮಿಗಳು ಉತ್ಪಾದಿಸಿದ್ದ ಸೀರೆ, ಸಿರಿಧಾನ್ಯ, ಗೃಹೋಪಯೋಗಿ ವಸ್ತುಗಳು, ತಿಂಡಿ, ತಿನಿಸುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡ ಲಾಗಿತ್ತು. ಕಾರ್ಯಕ್ರಮದಲ್ಲಿ ಬಳಗದ ಮಂಜುಳ ನಿಂಗಪ್ಪ, ನೇತ್ರಾ ವೆರ್ಣೇಕರ್ ಮತ್ತಿತರರಿದ್ದರು.