ಶಾಲೆಗೆ ಚಕ್ಕರ್, ಲೆಕ್ಕದಲ್ಲಿ ಊಟದ ಹಾಜರ್‌!

ಶಾಲೆಗೆ ಚಕ್ಕರ್, ಲೆಕ್ಕದಲ್ಲಿ ಊಟದ ಹಾಜರ್‌!

ಶಿಕ್ಷಕರ ಕಾರ್ಯವೈಖರಿಗೆ ಶಾಸಕ ಕೆ.ಎಸ್. ಬಸವಂತಪ್ಪ ತರಾಟೆ

ದಾವಣಗೆರೆ, ಜ. 30 – ಶಾಲೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದರೂ ಅವರು ಹಾಜರಾಗಿದ್ದಾರೆ ಎಂದು ತೋರಿಸಲಾಗುತ್ತಿದೆ. ತಿಂಗಳ ಕೊನೆಗೆ ವಿದ್ಯಾರ್ಥಿಗಳ ಎಲ್ಲ ಪಡಿತರ ಖರ್ಚಾಗಿದೆ ಎಂದು ತೋರಿಸಲಾಗುತ್ತಿದೆ. ದೇವರಂತ ಮಕ್ಕಳ ವಿಷಯದಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ವಿಷಾದಿಸಿದ್ದಾರೆ.

ತಾಲ್ಲೂಕು ಪಂಚಾಯ್ತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅವರು ಮಾತನಾಡಿದರು.

ಹೊನ್ನೂರು – ಗೊಲ್ಲರಹಟ್ಟಿ ಶಾಲೆಗೆ ತಾವು ಭೇಟಿ ನೀಡಿದಾಗ ಗೈರಾದ ವಿದ್ಯಾರ್ಥಿಗಳಿಗೂ ಹಾಜರಿ ನೀಡಲಾಗಿತ್ತು. ಇದೇ ಪರಿಸ್ಥಿತಿ ಹಲವು ಶಾಲೆಗಳಲ್ಲಿದೆ. ವಿದ್ಯಾರ್ಥಿಗಳ ವಾಸ್ತವಿಕ ಹಾಜರಿ ಕಡಿಮೆ ಇದ್ದರೂ, ಆಹಾರ ವಸ್ತುಗಳ ಬಳಕೆ ಪೂರ್ಣವಾಗಿ ಆಗಿದೆ  ಎಂದು ತೋರಿಸಲಾಗುತ್ತಿದೆ.  ವಿದ್ಯಾರ್ಥಿಗಳ ಗೈರಿನಿಂದ ಉಳಿಕೆಯಾದ ಆಹಾರ ವಸ್ತುಗಳನ್ನು ಮುಂದಿನ ತಿಂಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಲ್ಪನಹಳ್ಳಿ ಶಾಲೆಗೆ ಭೇಟಿ ನೀಡಿದಾಗ ತರಕಾರಿ ಕೊಳೆತಿತ್ತು. ಸಾರಿನಲ್ಲಿ ಬೇಳೆಯೇ ಇರಲಿಲ್ಲ. ಬೇಳೆ ಯಾರಿಗೆ ದಕ್ಕಬೇಕೋ ಅವರಿಗೆ ದಕ್ಕಿರಬಹುದು ಎಂದು ಬಸವಂತಪ್ಪ ಹೇಳಿದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುವುದೇ ಕಡಿಮೆಯಾಗಿದೆ. ನಾನು ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದೇನೋ ಅದರ ಅರ್ಧದಷ್ಟೂ ಬಿ.ಇ.ಒ.ಗಳು ಭೇಟಿ ನೀಡಿಲ್ಲ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಮಕ್ಕಳಿಗೆ ಸರ್ಕಾರದ ವತಿಯಿಂದ ಶೂ ನೀಡಲಾಗಿದೆ. ಆದರೆ, ಮೂರು ತಿಂಗಳಲ್ಲೇ ಶೂಗಳು ಹರಿದು ಹೋಗಿದ್ದು ಮಕ್ಕಳು ಬರಿಗಾಲಲ್ಲಿ ಶಾಲೆಗೆ ಬರುವುದನ್ನು ನೋಡಿದ್ದೇನೆ ಎಂದು ಶಾಸಕರು ಹೇಳಿದರು.

ನಾನು ಶಾಲೆಗಳಿಗೆ ಹೋದಾಗ ಇಂತಹ ಹತ್ತಾರು ಲೋಪಗಳು ಕಾಣುತ್ತವೆ. ಆದರೆ, ಅಧಿಕಾರಿಗಳು ಹೋದಾಗ ಇಂತಹ ಲೋಪಗಳು ಏಕೆ ಕಾಣುವುದಿಲ್ಲ? ಎಂದವರು ಅಚ್ಚರಿ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳ ಕಡತಗಳಿಗೂ ಅನುಮೋದನೆ ಕೊಡದೇ ಬಾಕಿ ಉಳಿಸಲಾಗುತ್ತಿದೆ. ಈ ಬಗ್ಗೆ ಒಕ್ಕೂಟದವರು ತಮ್ಮ ಬಳಿ ದೂರು ನೀಡಿದ್ದಾರೆ ಎಂದು ಬಸವಂತಪ್ಪ ಹೇಳಿದರು.

ಅನುಕಂಪದ ನೌಕರಿಗಾಗಿ ಅರ್ಜಿಯ ಜೊತೆಗೆ ಎಲ್ಲ ದಾಖಲೆ ಸಲ್ಲಿಸಿದರೂ ವಿಳಂಬ ಮಾಡಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಈ ರೀತಿಯ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿಕ್ಷಣ ಇಲಾಖೆಯ ಸಿಬ್ಬಂದಿ ಹೇಳದೇ ಕೇಳದೇ ಬೇರೆ ಕಚೇರಿಗಳಿಗೆ ಹೋಗಬಾರದು ಎಂದು ತಾಕೀತು ಮಾಡಿದ ತಾ.ಪಂ. ಆಡಳಿತಾಧಿಕಾರಿ ಎಲ್.ಎ. ಕೃಷ್ಣಾನಾಯ್ಕ, ಚಲನವಲನದ ಪುಸ್ತಕವನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ರಾಮಾಭೋವಿ, ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ್‌, ಬಿಇಒ ಪುಷ್ಪಲತ ಹಾಗೂ ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!