ಚಿತ್ರದುರ್ಗ, ಜ. 28 – ನ್ಯಾಯಮೂರ್ತಿ ಕಾಂತರಾಜು ಅವರ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಜಾತಿ ಗಣತಿ ವರದಿಯನ್ನು ನಮ್ಮ ಸರ್ಕಾರ ಸ್ವೀಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗದಲ್ಲಿ ಆಯೋಜಿಸಿದ್ದ `ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶವನ್ನು’ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ಮಾಡಿಸಿದ್ದೆ. ನನ್ನ ಬಳಿಕ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರೂ ಕೂಡ ಜಾತಿ ಗಣತಿ ವರದಿಯನ್ನು ಸ್ವೀಕರಿಸಲಿಲ್ಲ ಎಂದರು.
ಕಾಂತರಾಜ್ ಅವರ ವರದಿಯನ್ನು ಕೆಲವರು ಓದದೇ, ತಿಳಿಯದೇ ವಿರೋಧಿಸುತ್ತಿದ್ದಾರೆ. ಜಾತಿ ಗಣತಿಯ ವರದಿ ಅವೈಜ್ಞಾನಿಕ ಎಂದು ಹೇಳಿಕೆ ನೀಡುತ್ತಿದ್ದಾರೆ. ಜಾತಿ ಗಣತಿಯನ್ನು ನಾವು ಸ್ವೀಕರಿಸುತ್ತೇವೆ. ಏನಾದರೂ ಭಿನ್ನಾಭಿಪ್ರಾಯಗಳಿ ದ್ದರೆ ತಜ್ಞರ ಸಲಹೆ ಪಡೆದು ಅದನ್ನು ಸರಿಪಡಿಸಿ ಕೊಳ್ಳ ಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದುಳಿದ, ದಲಿತ ಮತ್ತು ಶೋಷಿತ ಜಾತಿ ಸಮುದಾಯಗಳ ಜನ ತಮ್ಮ ಶತ್ರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಶತ್ರುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಿಮ್ಮ ಸ್ವಾಭಿಮಾನ ಬೆಳೆಸಿಕೊಳ್ಳಿ ಎಂದು ಹೇಳಿದರು.
ಮಂಡಲ್ ವರದಿಯನ್ನು ಬಿಜೆಪಿ ಮತ್ತು ಆರೆಸ್ಸೆಸ್ ವಿರೋಧಿಸುತ್ತಲೇ ಬಂದಿವೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಬಿಜೆಪಿ, ಆರೆಸ್ಸೆಸ್ ನಿರಂತರವಾಗಿ ವಿರೋಧಿಸುತ್ತಲೇ ಇವೆ. ಆದ್ದರಿಂದ ಸಂವಿಧಾನ ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳ ಕೈಗೆ ಅಧಿಕಾರ ಹೋಗಬಾರದು ಎಂದು ಅಂಬೇಡ್ಕರ್ ಎಚ್ಚರಿಸಿ ದ್ದರು. ಈ ಎಚ್ಚರಿಕೆಯನ್ನು ನಾವು ಮರೆಯ ಬಾರದು ಎಂದರು.
`ಅವಳನ್ನು’ ಪಾರ್ಲಿಮೆಂಟ್ ಉದ್ಘಾಟನೆಗೆ ಕರೆಯಲಿಲ್ಲ
ರಾಷ್ಟ್ರಪತಿ ಬಗ್ಗೆ ಏಕವಚನ ಬಳಸಿದ ಮುಖ್ಯಮಂತ್ರಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸಲಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ದ್ರೌಪದಿ ಮುರ್ಮು ಅವರು ಶೋಷಿತ ಸಮುದಾಯಕ್ಕೆ ಸೇರಿದವರು. `ಅವಳನ್ನು ಪಾರ್ಲಿಮೆಂಟ್ ಉದ್ಘಾಟನೆಗೆ ಕರೆಯಲಿಲ್ಲ’. ಅವರು ಸಂವಿಧಾನದ ಸಂರಕ್ಷಕರಾಗಿದ್ದರೂ ಕರೆಯಲಿಲ್ಲ. ಮೊನ್ನೆ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದೇವಸ್ಥಾನ ಉದ್ಘಾಟನೆಗೂ ಕರೆಯಲಿಲ್ಲ ಎಂದರು. ಈ ಹೇಳಿಕೆ ನೀಡುವ ವೇಳೆ ರಾಷ್ಟ್ರಪತಿ ಮುರ್ಮು ಅವರ ಬಗ್ಗೆ ಸಿದ್ದರಾಮಯ್ಯ ಏಕವಚನ ಬಳಸಿದರು.
ನಾನು ಹಿಂದೂ ವಿರೋಧಿ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಯಾರ ವಿರೋಧಿಯೂ ಅಲ್ಲ. ಎಲ್ಲ ಮ ನುಷ್ಯತ್ವದ ಪರವಾಗಿರುವವನು, ಮನುಷ್ಯ ಧರ್ಮದ ಪರವಾಗಿರುವವನು ಎಂದು ಸಿಎಂ ತಿಳಿಸಿದರು.
ಸಂಪತ್ತಿನ ಸಮಾನ ಹಂಚಿಕೆಯಾಗಲಿ
ಸಮಾಜದಲ್ಲಿ ಮೇಲ್ವರ್ಗ ಹಾಗೂ ಕೆಳವರ್ಗದ ಅಂತರ ಇದೆ. ಇದೆಲ್ಲ ಹೋಗಿ ಸಮಾನತೆ ಬರಬೇಕಿದೆ. ಈ ದೇಶದ ಸಂಪತ್ತು ಹಾಗೂ ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯ ಮಾತೃ ಸಂಸ್ಥೆಯಾದ ಆರ್.ಎಸ್.ಎಸ್. ಅಸಮಾನತೆಯನ್ನು ಬೆಂಬಲಿಸುತ್ತಿದೆ. ಮಂಡಲ್ ಆಯೋಗದ ವರದಿ ಜಾರಿಯಾಗುವುದನ್ನು ಬಿಜೆಪಿ ವಿರೋಧಿಸಿತ್ತು ಎಂದು ಸಿದ್ದರಾಮಯ್ಯ ನೆನಪಿಸಿದರು.
ವಿ.ಪಿ. ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಮಂಡಲ್ ವರದಿ ಸ್ವೀಕಾರ ಮಾಡಿದ್ದರು. ನಂತರ ಪ್ರಧಾನಿ ಯಾದ ನರಸಿಂಹರಾವ್ ಈ ವರದಿ ಜಾರಿಗೆ ತಂದರು ಎಂದು ಹೇಳಿದರು. ಆರೆಸ್ಸೆಸ್, ಬಿಜೆಪಿಯವರು ಮೊದಲಿನಿಂದಲೂ ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಕುರಿ ಕಾಯೋನ ಮಗ ಎಂದು ವಿರೋಧ
ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿಬಿಟ್ಟೆ ಎನ್ನುವ ಕಾರಣಕ್ಕೆ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಿದ್ದರಾಮಯ್ಯ 14 ಬಜೆಟ್ ಮಂಡಿಸಿದರು ಎಂಬ ಕಾರಣಕ್ಕಾಗಿ ನನ್ನ ವಿರೋಧ ಮಾಡುತ್ತಾರೆ. ನಾನು ಏನು ತಪ್ಪು ಮಾಡಿದ್ದೇನೆ? ಎಲ್ಲ ಜಾತಿಯ ಬಡವರಿಗೆ ನ್ಯಾಯ ಕೊಡಿಸುವ ನಿರ್ಣಯ ಮಾಡಿದ್ದು ತಪ್ಪಾ? ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಷೂ ಭಾಗ್ಯ, ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್ ಎಲ್ಲ ಕಾರ್ಯಕ್ರಮ ಮಾಡಿದ್ದು ಸಿದ್ದರಾಮಯ್ಯ ಅಲ್ಲವಾ? ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ ಅಲ್ಲವಾ? ಸಿದ್ದರಾಮಯ್ಯ ಅಲ್ಲವಾ? ಇದಕ್ಕಾಗಿ ಕೆಲವರು ನನ್ನ ವಿರೋಧ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಬದಲಾವಣೆ ಮಾಡುತ್ತಾರೆ, ಮಹಿಳೆಯರಿಗೆ ಆರ್ಥಿಕ – ಸಾಮಾಜಿಕ ಶಕ್ತಿ ಕೊಡುತ್ತಾರೆ, ಹಿಂದುಳಿದವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಬಡವರಿಗೆ ಶಕ್ತಿ ಕೊಡುತ್ತಾರೆ ಎಂದು ಕೆಲವರು ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿ ಗಣತಿ ಮಾಡಿಸುತ್ತೇವೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಜಾತಿ ಗಣತಿಯ ಪರವಾಗಿದೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಸದಾಕಾಲ ನಿಮ್ಮ ಪರವಾಗಿ ಇರುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಬಾಬಾ ಸಾಹೇಬ್ ಅವರ ಸಂವಿಧಾನ ಇಲ್ಲದೇ ಹೋಗಿದ್ದರೆ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಮತ್ತು ಆರ್.ಅಶೋಕ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಸಾಧ್ಯವೇ ಇರಲಿಲ್ಲ. ಯಾರದ್ದೋ ಹೊಲ ಗದ್ದೆಗಳಲ್ಲಿ ಕೂಲಿ ಮಾಡುತ್ತಾ ಕೂರಬೇಕಾಗಿತ್ತು ಎಂದೂ ಮುಖ್ಯಮಂತ್ರಿ ಹೇಳಿದರು.
ಈ ಜಾತಿ ಶೋಷಣೆಗೆ ಕೊನೆ ಹಾಡುವ ಉದ್ದೇಶದಿಂದಲೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದರು. ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಬುದ್ದ, ಬಸವಣ್ಣ, ನಾರಾಯಣಗುರು, ನಾಲ್ವಡಿ ಅರಸರು, ವಿವೇಕಾನಂದ, ಕನಕದಾಸರೆಲ್ಲರೂ ಈ ಜಾತಿ ವ್ಯವಸ್ಥೆ ತೊಡೆದು ಹಾಕಲು ಶ್ರಮಿಸಿದರು. ನಮ್ಮ ಸಂವಿಧಾನ ಕೂಡ ಈ ಎಲ್ಲಾ ಮಹನೀಯರ ಆಶಯಗಳನ್ನು ಒಳಗೊಂಡಿದೆ ಎಂದರು.
ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಬೋಸ ರಾಜು, ಕೆ.ಹೆಚ್.ಮುನಿಯಪ್ಪ, ಭೈರತಿ ಸುರೇಶ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ದಿನೇಶ್ ಗುಂಡೂರಾವ್, ಆರ್. ಬಿ.ತಿಮ್ಮಾಪುರ್, ನಾಗೇಂದ್ರ, ಡಿ.ಸುಧಾಕರ್, ಶಿವರಾಜ್ ತಂಗಡಗಿ, ರಹೀಂಖಾನ್ ಮತ್ತಿತರರು ಮಾತನಾಡಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಅವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಾವಳ್ಳಿ ಶಂಕರ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಹೆಚ್.ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.