ಮಾ.19-20ಕ್ಕೆ ದುಗ್ಗಮ್ಮನ ಜಾತ್ರೆ

ಮಾ.19-20ಕ್ಕೆ ದುಗ್ಗಮ್ಮನ ಜಾತ್ರೆ

ದಾವಣಗೆರೆ, ಜ.24-  ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ  ಜಾತ್ರೆ ಬರುವ ಮಾರ್ಚ್ 19 ಮತ್ತು 20 ರಂದು ಜರುಗಲಿದೆ.

ಇಂದು ಮಧ್ಯಾಹ್ನ ಶ್ರೀ ದುರ್ಗಾಂಬಿಕಾ ಪ್ರಸಾದ ನಿಲಯದಲ್ಲಿ ದೇವಸ್ಥಾನ ಟ್ರಸ್ಟ್‌ನ ಗೌರವ ಅಧ್ಯಕ್ಷರೂ ಆದ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ  ಜಾತ್ರೆಯ ದಿನಾಂಕ ಪ್ರಕಟಿಸಲಾಯಿತು.

ಜಾತ್ರಾ ಕಾರ್ಯಕ್ರಮದ ವಿವರ ನೀಡಿದ ದೇವಸ್ಥಾನದ ಪುರೋಹಿತ  ನಾಗರಾಜ ಜೋಯಿಸ್‌ ರವರು,  ಫೆಬ್ರವರಿ 13ರಂದು ಹಂದರಗಂಬದ ಪೂಜೆ ನೆರವೇರಿಸಲಾಗುವುದು. ಮಾ.17 ರಂದು ದೇವಿಗೆ ಅಭಿಷೇಕ, ರಾತ್ರಿ ಕಂಕಣ ಧಾರಣೆ ಮತ್ತು ವಿಶೇಷ ಪೂಜೆ ನೆರವೇರಿಸಲಾಗುವುದು. 20ರಂದು ಬೆಳಿಗ್ಗೆ ಚರುಗ ಚೆಲ್ಲುವ ಕಾರ್ಯಕ್ರಮ  ಜರುಗಲಿದೆ ಎಂದರು.

ಟ್ರಸ್ಟ್‌ನ ಗೌರವ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಮಿತಿಯವರು ಮಹಾನಗರ ಪಾಲಿಕೆ ನೆರವು ಪಡೆದು ಭಕ್ತಾದಿಗಳಿಗೆ  ನೀರು ಮತ್ತು ಶೌಚಾಲಯ ಸ್ವಚ್ಛತೆ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಿ, ಹಬ್ಬವನ್ನು ಅದ್ಧೂರಿಯಾಗಿ  ಆಚರಿಸಬೇಕು ಎಂದರು. 

ಹಬ್ಬದ ಸಂದರ್ಭದಲ್ಲಿ ಕುರಿ ಕಾಳಗ ಬೇಡವೆಂದರೆ, ಕುಸ್ತಿಯನ್ನೂ ಆಡಿಸಬೇಡಿ ಎಂದು ಕೆಲವು ಯುವಕರು ಆಕ್ಷೇಪ ವ್ಯಕ್ತಪಡಿಸಿದಾಗ, ಹಿಂದಿನಂತೆ ಪದ್ಧತಿ ಪ್ರಕಾರ ಏನು ನಡೆಯುತ್ತಿತ್ತೋ ಅವೆಲ್ಲವನ್ನೂ ನಡೆಸುವಂತೆ ಎಸ್ಸೆಸ್ ಸೂಚಿಸಿದರು.

ಸಭೆ ಆರಂಭಕ್ಕೆ ಸ್ವಾಗತಿಸಿದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಸಭೆಯಲ್ಲಿ ಕೇಳಲಾದ  ಪ್ರಶ್ನೆಗಳಿಗೆ ಉತ್ತರಿಸಿ, ಉಪ ಸಮಿತಿ ರಚಿಸಬೇಕಾಗಿದೆ. ನಂತರ ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸೋಣ ಎಂದು ತಿಳಿಸಿದರು.

ಸಭೆಯಲ್ಲಿ  ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿಗಳಾದ ಅಥಣಿ ವೀರಣ್ಣ, ಜೆ.ಕೆ.ಕೊಟ್ರಬಸಪ್ಪ, ಹೆಚ್.ಬಿ.ಗೋಣಪ್ಪ, ಬಿ.ಹೆಚ್.ವೀರಭದ್ರಪ್ಪ, ಉಮೇಶ್‌ರಾವ್ ಸಾಳಂಕಿ, ಬಿ.ಕೆ.ರಾಮಕೃಷ್ಣರಾವ್, ಸೊಪ್ಪಿನವರ ಗುರುರಾಜ್, ಹನುಮಂತರಾವ್ ಜಾಧವ್, ಎಸ್.ಬಿ.ಶಂಕರ್‌ರಾವ್ ಮತ್ತು ಮುದೇಗೌಡ್ರ ವಿಶ್ವನಾಥ ಉಪಸ್ಥಿತರಿದ್ದರು.

ಹಿಂದಿನ ಸಭೆಯ ನಡಾವಳಿಗಳನ್ನು ಓದಿ ರೆಕಾರ್ಡ್ ಮಾಡುವುದು ಎಂಬ ವಿಷಯ ಕುರಿತಂತೆ ಪ್ರಶ್ನೆ ಎತ್ತಿದ  ಕರಿಗಾರ್ ಬಸಪ್ಪ,   ಕಲ್ಯಾಣ ಮಂಟಪ ವನ್ನು  ಆದಷ್ಟು ಶೀಘ್ರವಾಗಿ ಆರಂಭಿಸಿ, ಅಲ್ಲಿ ಮದುವೆಗಳು ನಡೆಯುವಂತಾಗಲಿ ಎಂದು ಸಲಹೆ ನೀಡಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಮಾಜಿ ನಗರಸಭಾಧ್ಯಕ್ಷ ಯಶವಂತರಾವ್ ಜಾಧವ್, ಕಲ್ಯಾಣ ಮಂಟಪಕ್ಕೆ ಸಂಬಂಧಿಸಿದಂತೆ ಹಿಂದಿನ ಸಭೆಯಲ್ಲಿ ಏನು ಚರ್ಚೆ ಆಗಿತ್ತೋ ಅದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.  3.5 ಕೋಟಿ ರೂ.ಗಳ ವೆಚ್ಚಕ್ಕೆ 55 ಲಕ್ಷ ರೂ. ಜಿಎಸ್‌ಟಿ ಕಟ್ಟರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಆಡಿಟರ್ ಅಥಣಿ ವೀರಣ್ಣನವರು ಸಮಜಾಯಿಷಿ ನೀಡಿದರು.

ಕಲ್ಯಾಣ ಮಂಟಪದ ಹಸ್ತಾಂತರ ಕಾರ್ಯದ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಗಮನಕ್ಕೆ ತರಲಾಗಿದೆ. ಆ ಕೆಲಸ ಸರ್ಕಾರದ ಮಟ್ಟದಲ್ಲಿ ಆಗುತ್ತಿದೆ. ಈ ಬಗ್ಗೆ ಇನ್ನೊಂದು ಸಭೆ ಕರೆದು ಚರ್ಚೆ ಮಾಡೋಣ. ಈಗ  ಹಬ್ಬದ ಸಿದ್ದತೆ ಬಗ್ಗೆ ಮಾತನಾಡೋಣ ಎಂದು ಗೌಡ್ರು ಚನ್ನಬಸಪ್ಪ ಹೇಳಿದರು.

ಮೇಯರ್ ವಿನಾಯಕ ಪೈಲ್ವಾನ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಮುಖಂಡರಾದ  ಮಾಲತೇಶರಾವ್ ಜಾಧವ್, ಎಂ.ಮಂಜುನಾಥ್, ಎನ್.ನೀಲಗಿರಿಯಪ್ಪ, ಗೌಡ್ರು ರಾಮಣ್ಣ, ದೇವರಹಟ್ಟಿ ಶಿವಶಂಕರಪ್ಪ, ಎಸ್.ಬಸಪ್ಪ, ಹೆಚ್.ಗೋಣಪ್ಪ, ಪಿ.ಜೆ. ನಾಗರಾಜ್, ಬೊಮ್ಮಜ್ಜಿ ಬಕ್ಕೇಶ್, ರಾಜನಹಳ್ಳಿ ಶಿವಕುಮಾರ್ ಸೇರಿದಂತೆ ದೇವಸ್ಥಾನದ ಧರ್ಮದರ್ಶಿಗಳು, ಗೌಡರು, ಶಾನುಭೋಗರು, ರೈತರು, ಬಾರಿಕರು, ಬಣಕಾರರು, ಕುಂಬಾರರು, ಬಡಿಗೇರರು, ತಳವಾರರು, ಬಾಬುದಾರರು, ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿ, ಹಲವಾರು ಸಲಹೆ, ಸೂಚನೆಗಳನ್ನು ನೀಡಿದರು.  

error: Content is protected !!