ರಂಗಭೂಮಿಗೆ ಚಿಂದೋಡಿ ಲೀಲಾರ ಕೊಡುಗೆ ಅಪಾರ

ರಂಗಭೂಮಿಗೆ ಚಿಂದೋಡಿ ಲೀಲಾರ ಕೊಡುಗೆ ಅಪಾರ

ಚಿಂದೋಡಿ ಲೀಲಾ ಅವರ 14 ನೇ ವರ್ಷದ ರಂಗಸ್ಮರಣೆ, ರಂಗಭೂಮಿ ಕಲಾವಿದರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮೆಚ್ಚುಗೆ

ದಾವಣಗೆರೆ,ಜ. 24- ರಂಗಭೂಮಿ ಕ್ಷೇತ್ರಕ್ಕೆ ಚಿಂದೋಡಿ ಲೀಲಾ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಲೀಲಾ ಅವರು ನಟನೆ ಜೊತೆಗೆ ಕುಟುಂಬವನ್ನು ಕಟ್ಟಿ ಬೆಳೆಸುವ ಜೊತೆಗೆ ಕಲಾವಿದರ ಬದುಕಿಗೆ ಆಸರೆಯಾಗಿದ್ದರು ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.

ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ನಡೆದ ಚಿಂದೋಡಿ ಲೀಲಾ ಅವರ 14 ನೇ ವರ್ಷದ ರಂಗಸ್ಮರಣೆ, ರಂಗಭೂಮಿ ಕಲಾವಿದರ ಸಮ್ಮಿಲನ, ಕಲಾ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಶೂನ್ಯದಿಂದ ಸಾಧನೆ ಮಾಡಿದ ರಂಗ ನಟಿ ಚಿಂದೋಡಿ ಲೀಲಾ ಅವರು ರಂಗಭೂಮಿಯಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅವರು ನಟಿಸಿದ `ಪೊಲೀಸನ ಮಗಳು’ ನಾಟಕ ರಾಜ್ಯಾದ್ಯಂತ ಅದ್ಭುತ ಪ್ರದರ್ಶನದ  ಮೂಲಕ ಗಿನ್ನಿಸ್ ದಾಖಲೆ ಮಾಡಿತ್ತು ಎಂದರು.

ಲೀಲಾ ಅವರು ರಾಜ್ಯ ಕಂಡ ಅಪರೂಪದ ಕಲಾವಿದೆ. ಅವರ ಮಗ ಚಿಂದೋಡಿ ಚಂದ್ರಧರ ಕೂಡ ಅವರ ಹಾದಿಯಲ್ಲಿಯೇ ಸಾಗುತ್ತಿದ್ದು, ರಂಗಭೂಮಿಯಲ್ಲಿ ಕೂಡ ಹೆಸರು ಮಾಡಿದ್ದಾರೆ ಎಂದು ಹೇಳಿದರು.

ಸಾರ್ಥಕ ಬದುಕು ಸಾಗಿಸಿದರೆ ಸಮಾಜಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಬಹುದು ಎಂಬುದಕ್ಕೆ ಚಿಂದೋಡಿ ಲೀಲಾ ಅವರೇ ಸಾಕ್ಷಿ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಿರ ಬೇಕು. ಅಂತಹ ಸ್ಮರಣೀಯ ಸಾರ್ಥಕ ಬದುಕು ಲೀಲಾ ಅವರದ್ದಾಗಿತ್ತು ಎಂದು ತಿಳಿಸಿದರು.

ಮಾಜಿ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಉತ್ತಮ ನಾಟಕಗಳು, ಚಲನಚಿತ್ರಗಳ ವೀಕ್ಷಣೆ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡರೆ, ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯವಿದೆ ಎಂದರು.

ರಂಗಭೂಮಿ ಕ್ಷೇತ್ರದಲ್ಲಿ ದಾವಣಗೆರೆಗೆ ಕೀರ್ತಿ ತಂದುಕೊಟ್ಟ ಏಕೈಕ ಕಲಾವಿದೆ ಚಿಂದೋಡಿ ಲೀಲಾ. ಅವರ ಹೆಸರನ್ನು ಯಾವ ವೃತ್ತಕ್ಕೆ ಇಡಬೇಕೆಂಬ ಪ್ರಸ್ತಾವನೆ ಸಲ್ಲಿಸಿದರೆ, ಮಹಾನಗರ ಪಾಲಿಕೆಯ ಸಾಮಾನ್ಯಸಭೆಯ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಇದೇ ವೇಳೆ 12 ಜನ ಕಲಾಪ್ರತಿಭೆಗಳನ್ನು  ಪುರಸ್ಕರಿಸಲಾಯಿತು. ಬನಹಟ್ಟಿಯ ಮಹಾಂತ ಮಂದಾರ ಮಠದ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು.

ಚಿಂದೋಡಿ ಲೀಲಾ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಚಿಂದೋಡಿ ಎಲ್. ಚಂದ್ರಧರ ಅಧ್ಯಕ್ಷತೆ ವಹಿಸಿದ್ದರು. ಶಿವಸಿಂಪಿ ಸಮಾಜದ ಮುಖಂಡ ಜಗದೀಶ್ ಬಾವಿಕಟ್ಟೆ, ಹಾಸ್ಯ ನಟ ಡಿಂಗ್ರಿ ನಾಗರಾಜ್, ಜ್ಞಾನೇಶ್ವರ ಜವಳಿ, ಸಿ.ಸಿ. ವೀರಶಂಕರ್, ಚಿಂದೋಡಿ ಕುಟುಂಬದವರು ಭಾಗವಹಿಸಿದ್ದರು.

ಎಸ್.ಎನ್. ಕೊಟ್ರೇಶ್ ಹಾಗೂ ಧೀಮನಿ ಪ್ರಾರ್ಥಿಸಿದರು. ಸಿ.ಸಿ. ವೀರಶಂಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನೇಶ್ವರ ಜವಳಿ ನಿರೂಪಿಸಿದರು. ಕೆ.ಎಸ್. ಶಾರದಾ ಅವರ ಭರತ ನಾಟ್ಯ ಪ್ರೇಕ್ಷಕರ ಗಮನ ಸೆಳೆಯಿತು.

ಕಾರ್ಯಕ್ರಮದ ನಂತರ `ಯಾರ ಹೂವು ಯಾರ ಮುಡಿಗೋ’ ನಾಟಕ ಪ್ರದರ್ಶನಗೊಂಡಿತು. 

error: Content is protected !!