ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯಲ್ಲ ; ಭಕ್ತಿಯ ಪ್ರತಿಷ್ಠಾಪನೆ

ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯಲ್ಲ ; ಭಕ್ತಿಯ ಪ್ರತಿಷ್ಠಾಪನೆ

ಗಂಗನಕಟ್ಟೆ ಗ್ರಾಮದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿಶ್ಲೇಷಣೆ

ದಾವಣಗೆರೆ, ಜ. 23 – ತಾಲ್ಲೂಕಿನ ಗಂಗನಕಟ್ಟೆ ಗ್ರಾಮದಲ್ಲಿ ಮೊನ್ನೆ ಆಯೋಜಿಸಿದ್ದ ಈಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಈಶ್ವರ, ಪಾರ್ವತಿ, ಗಣೇಶ ಸೇರಿದಂತೆ, ವಿವಿಧ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಇಡೀ ಮನುಕುಲ, ಪ್ರಾಣಿ, ಪಕ್ಷಿಗಳನ್ನು ಸೃಷ್ಟಿ ಮಾಡಿದವನು ಭಗವಂತ. ಭಗವಂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಜೀವ ತುಂಬುವುದಂತಲ್ಲ. ಆ ವಿಗ್ರಹಕ್ಕೆ ನಿಮ್ಮ ಭಕ್ತಿಯನ್ನು ತುಂಬುವುದಾಗಿದೆ ಎಂದು ಶ್ರೀಗಳು ಹೇಳಿದರು.

ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ನಮ್ಮ ಪರಂಪರೆಯಿಂದ ನಡೆದುಕೊಂಡು ಬಂದಿದ್ದು, ನೀವು ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ತಪ್ಪಲ್ಲ. ಆದರೆ ನೀವು ಆ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದೀರಿ, ಅದು ಪ್ರಾಣ ಪ್ರತಿಷ್ಠಾಪನೆಯಲ್ಲ. ಆ ವಿಗ್ರಹದ ಮೇಲೆ ನಿಮ್ಮ ಭಕ್ತಿಯು ಪ್ರತಿಷ್ಠಾಪನೆಯಾಗಿದೆ ಎಂದು ಹೇಳಿದರು.

ಇದುವರೆಗೂ ಆ ವಿಗ್ರಹ ಶಿಲೆಯಾಗಿತ್ತು. ಆ ಶಿಲೆ ಈಗ ದೇವರ ಮೂರ್ತಿಯಾಗಿದೆ. ಆ ವಿಗ್ರಹ ಪ್ರತಿಷ್ಠಾಪನೆ ಮಾಡಿ ಅದರೊಳಗೆ ಜೀವ ತುಂಬಲಾಗುತ್ತಿದೆ ಎಂದು ನೀವು ಭಾವಿಸಿದ್ದೀರಿ. ಆದರೆ ನೀವು ದೇವರ ಸೃಷ್ಟಿಯೇ ಹೊರತು, ದೇವರನ್ನು ಸೃಷ್ಟಿ ಮಾಡುವವರಲ್ಲ. ಹೀಗಾಗಿ ದೇವರ ಪ್ರಾಣ ಪ್ರತಿಷ್ಠಾಪನೆ ಎಂದರೆ ಆ ವಿಗ್ರಹಕ್ಕೆ ನಿಮ್ಮ ಭಕ್ತಿಯ ಪ್ರತಿಷ್ಠಾಪನೆ ಮಾಡುವುದಾಗಿದೆ ಎಂದು ವಿವರಿಸಿದರು.

ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿ, ಬಾಲ ರಾಮನ
ಮೂರ್ತಿ ಜ.22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಆ ಮೂರ್ತಿಯನ್ನು ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್ ಸರಯೂ ನದಿಯಲ್ಲಿ ಸ್ನಾನ ಮಾಡಿ, ಇದುವರೆಗೂ ನಾನು ಉಳಿಯಿಂದ ಒಡೆದು, ಒಡೆದು ನೋವು ಕೊಟ್ಟಿದ್ದೇನೆ. ನಾನು ಮಾಡಿದ ಅಪರಾಧವನ್ನು ನೀನು ಕ್ಷಮಿಸು ಎಂದು ಆ ದೇವರಲ್ಲಿ ಪ್ರಾಯಶ್ಚಿತ ಮಾಡಿಕೊಂಡಿದ್ದಾನೆ. ‘ಈವರೆಗೂ ಶಿಲೆಯನ್ನು ಕೆತ್ತಿ ಉಳಿಪೆಟ್ಟು ಕೊಟ್ಟಿರುವ ಆ ಶಿಲ್ಪಿ, ನಾಳೆ ಬಾಲ ರಾಮನಿಗೆ ಉಳಿಯನ್ನು ಕೊಡುತ್ತಾನೆಯೇ ಇಲ್ಲ, ದೇವರಿಗೆ ಕೈಮುಗಿಯುತ್ತಾನೆ, ಅದು ಭಕ್ತಿ’ ಎಂದರು.

ಸಮಾರಂಭದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಲೋಕೇಶ್, ದೂಡಾ ಆಯುಕ್ತ ಬಸವನಗೌಡ ಕೊಟ್ಟೂರು, ತಹಸೀಲ್ದಾರ್ ಅಶ್ವತ್ಥ್‌, ಬೆಸ್ಕಾಂ ಎಇಇ ತೀರ್ಥೇಶ್, ಸಿರಿಗೆರೆ ಗುರುಸ್ವಾಮಿ ಹಾಗೂ ಗಂಗನಕಟ್ಟೆ ಗ್ರಾಮಸ್ಥರು ಇದ್ದರು.

error: Content is protected !!