ಸಂಘಟನೆ ಹೆಸರು ದುರ್ಬಳಕೆ : ಕಾನೂನು ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಕೆ

ಸಂಘಟನೆ ಹೆಸರು ದುರ್ಬಳಕೆ : ಕಾನೂನು ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಕೆ

ಮಲೇಬೆನ್ನೂರು, ಜ.19- ಸಂಘಟನೆ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಾ ಸಾರ್ವಜನಿಕರಿಗೆ ವಂಚಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ನಿನ್ನೆ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಅವರು 1974ರಲ್ಲಿ ಪ್ರೊ. ಬಿ.ಕೃಷ್ಣಪ್ಪನವರು ಈ ಸಂಘಟನೆಯನ್ನು ಭದ್ರಾವತಿಯಲ್ಲಿ ಸ್ಥಾಪಿಸಿದ್ದು, ದಿನಾಂಕ 25.01.1975 ರಂದು ಶಿವಮೊಗ್ಗ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಹಕಾರಿ ಸಂಘಗಳ ಕಾಯ್ದೆಯಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಹೆಸರಿನಲ್ಲಿ ನೊಂದಣಿ (ಸಂಖ್ಯೆ: ಎಸ್‍ಎಂಜಿ.ಎಸ್47/74-75) ಮಾಡಿಸಿ, ರಾಜ್ಯಾದ್ಯಂತ ವಿಸ್ತರಿಸಿದ್ದಾರೆ.

ಹೀಗಿದ್ದಾಗ ಕೆಲವರು ನಮ್ಮ ಸಮಿತಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳತೊಡಗಿ ದ್ದರಿಂದ ನಮ್ಮ ಮೂಲ ಸಂಘಟನೆ ಹೆಸರಿನೊಂದಿಗೆ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಎಂಬುದನ್ನು ನಿಯಮಾನುಸಾರ ಸೇರ್ಪಡೆ ಮಾಡಿಕೊಂಡಿ ದ್ದಲ್ಲದೇ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲವರ ವಿರುದ್ಧ ನಮ್ಮ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿಯವರು ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ದಲ್ಲಿ ಅಸಲು ದಾವೆ ದಾಖಲು ಮಾಡಿದ್ದರು. 

ಸುಧೀರ್ಘ ವಿಚಾರಣೆ ನಂತರ ನ್ಯಾಯಾ ಲಯವು ದಿನಾಂಕ 24/03/2021 ರಂದು ನಮ್ಮದೆ ನಿಜವಾದ, ಮೂಲ ಸಮಿತಿಯಾಗಿದೆ ಎಂದು ತೀರ್ಪು ನೀಡಿದ್ದು, ಪ್ರತಿವಾದಿಗಳು ಪ್ರೊ.ಕೃಷ್ಣಪ್ಪ ಸ್ಥಾಪಿತ ಡಿಎಸ್‍ಎಸ್ ಹೆಸರು ಬಳಕೆ ಮಾಡದಂತೆ ಮತ್ತು ಆ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ, ಸಂಘಟನೆಯ ಪದಾಧಿಕಾರಿಗಳೆಂದು ಹೇಳಿಕೊಳ್ಳದಂತೆ ಶಾಶ್ವತ ನಿರ್ಬಂಧಕಾಜ್ಞೆ ನೀಡಿ ಆದೇಶಿಸಿದೆ. ಈ ಆದೇಶದ ವಿರುದ್ದ ಪ್ರತಿವಾದಿಗಳು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರೂ ಅದು ಇದುವರೆಗೂ ಇತ್ಯರ್ಥವಾಗಿರುವುದಿಲ್ಲ. ಆದರೆ, ಕೆಲವರು `ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ಮಹಾತ್ಮ ಪ್ರೊ.ಕೃಷ್ಣಪ್ಪ ಸ್ಥಾಪಿತ ರಿ.ನಂ.386/2020-21′ ಎಂದು ಕಾನೂನು ಬಾಹಿರವಾಗಿ ಲೆಟರ್ ಹೆಡ್ ಮಾಡಿಸಿಕೊಂಡು ಜನರನ್ನು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ವಂಚಿಸುತ್ತಿದ್ದಾರೆ. 

ಸ್ವತಃ ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿ ನೊಂದಾಯಿಸಿರುವ ನಮ್ಮ ಸಮಿತಿ ಇರುವಾಗಲೂ, ಮುಖ್ಯವಾಗಿ ದಿನಾಂಕ 30.04.1997 ರಂದೇ ಪ್ರೊ.ಬಿ.ಕೃಷ್ಣಪ್ಪನವರು ನಿಧನರಾಗಿದ್ದಾಗ್ಯೂ, 2020-21ರಲ್ಲಿ ನೋಂದಾಯಿಸಿರುವ ಸಮಿತಿಗೆ `ಮಹಾತ್ಮ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ’ ಎಂದು ಬರೆದುಕೊಂಡು ಜನರ ಕಣ್ಣಿಗೆ ಮಣ್ಣೆರಚುತ್ತಿರುವ, ವಂಚಿಸುತ್ತಿ ರುವವರು ಸೇರಿದಂತೆ ಈ ವಂಚನೆಯಲ್ಲಿ ಭಾಗೀದಾರರಾಗಿರುವ ಎಲ್ಲರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಹಾಂತೇಶ್ ಅವರು ಆಗ್ರಹಿಸಿದರು.

ಭಾಗ್ಯಮ್ಮ, ಹನುಮಕ್ಕ, ಪುಷ್ಪ, ನಾಗಮ್ಮ, ಶಕುಂತಲ, ನಿರ್ಮಲ, ತಿಮ್ಮಣ್ಣ, ಮಾತಂಗ, ಶೈಲೂ, ಆಲಮ್ಮ, ಮೈಲಮ್ಮ, ಮಲ್ಲಮ್ಮ, ಗಂಗಮ್ಮ, ಹನುಮಂತ, ವೆಂಕಟೇಶ್, ರಂಗನಾಥ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!