ಹರ ಜಾತ್ರೆಯಿಂದ ಸಮಾಜದ ಜಾಗೃತಿ

ಹರ ಜಾತ್ರೆಯಿಂದ ಸಮಾಜದ ಜಾಗೃತಿ

ಪಂಚಮಸಾಲಿ ಗುರುಪೀಠಾಧ್ಯಕ್ಷ ವಚನಾನಂದ ಶ್ರೀ

 ಹರಿಹರ, ಜ,15- ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಪ್ರತಿ ವರ್ಷ ಆಚರಣೆ ಮಾಡುತ್ತಿರುವ ಹರ ಜಾತ್ರಾ ಮಹೋ ತ್ಸವದಿಂದಾಗಿ ಸಮಾಜವನ್ನು ಜಾಗೃತಿ ಮಾಡ ಲಾಗುತ್ತಿದೆಯೇ ವಿನಃ ಸಮಾಜ ಒಡೆ ಯುವ ಕೆಲಸ ಮಾಡುತ್ತಿಲ್ಲ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಸರಳವಾಗಿ ಇಂದು ನಡೆದ ಶರಣೆ ಅಕ್ಕಮಹಾದೇವಿ ವಚನಗಳ ಪಲ್ಲಕ್ಕಿ ಮಹೋತ್ಸವ ಮತ್ತು ಆರನೇ ವರ್ಷದ ಪೀಠಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ರಾಜ್ಯದ ವೀರಶೈವ ಲಿಂಗಾಯತ ಸಮಾಜದಲ್ಲಿ, ಪಂಚಮಸಾಲಿ ಸಮಾಜದ ಜನರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಅವರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಅಧ್ಯಾತ್ಮಿಕ ಮತ್ತು ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಪ್ರತಿವರ್ಷ ಹರ ಜಾತ್ರಾ ಮಹೋತ್ಸವ ಆಚರಣೆ ಮಾಡಿ, ಎಲ್ಲರನ್ನೂ ಒಗ್ಗೂಡಿಸಿ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ಮಾಡಲಾಗುತ್ತದೆ  ಎಂದು ಹೇಳಿದರು. 

ಪಂಚಮಸಾಲಿ ಸಮಾಜದಲ್ಲಿ ಬಹುತೇಕ ಜನರು ಕೃಷಿಯನ್ನು ಹೆಚ್ಚು ಅವಲಂಬಿಸಿ ಜೀವನ ಮಾಡುವುದರಿಂದ ಈ ಬಾರಿ ಮಳೆ ಬರದೇ ರೈತರು ಸಂಕಷ್ಟದ ಜೀವನ ಮಾಡುವಂತಹ ಸಂದರ್ಭದಲ್ಲಿ ಅದ್ಧೂರಿಯಾಗಿ ಹರ ಜಾತ್ರಾ ಮಹೋತ್ಸವ ಮಾಡದೇ ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದ ಸಕಲ ವೀರಶೈವ ಲಿಂಗಾಯತ ಸಮಾಜಕ್ಕೆ ಒಂದೇ ರೀತಿಯ ಮೀಸಲಾತಿ ಇರಬೇಕೆಂದು ನಮ್ಮ ಅಭಿಪ್ರಾಯವಾಗಿದ್ದು, ನಾವು ಈಗಾಗಲೇ ಎಲ್ಲಾ ಲಿಂಗಾಯತರನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಅನೇಕ ರೀತಿಯ ಹೋರಾಟ ಮಾಡಲಾಗಿದ್ದು, ಜೊತೆಗೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಕೇಳಿದಾಗ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮಗೆ 2 ಡಿ ಮತ್ತು 3 ಡಿ ಮೀಸಲಾತಿ ಕೊಡುವುದಾಗಿ ಘೋಷಣೆ ಮಾಡಿದರು. ಇದರಿಂದಾಗಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಆಗಿದ್ದರಿಂದ ನಾವು ಅದನ್ನು ಸ್ವಾಗತ ಮಾಡಲಿಲ್ಲ ಮತ್ತು ವಿರೋಧ ಕೂಡ ಮಾಡಲಿಲ್ಲ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಪಡೆಯವ ನಿಟ್ಟಿನಲ್ಲಿ ಈಗಲೂ ಕೂಡ ಕಾನೂನು ಹೋರಾಟ ನಡೆಸುತ್ತಿದ್ದು, ಸುಮಾರು 900 ಪುಟಗಳಷ್ಟು ದಾಖಲೆಗಳನ್ನು ಸರ್ಕಾರಕ್ಕೆ ನೀಡಿದ್ದು, ಆ ದೃಷ್ಟಿಯಿಂದ ನಮಗೆ ನ್ಯಾಯಲಯದಲ್ಲಿ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಹೇಳಿದರು.

ರಾಜ್ಯದ ಎಲ್ಲಾ ವೀರಶೈವ ಲಿಂಗಾಯತರು ಧರ್ಮ ಎಂದು ಬಂದಾಗ ಸಕಲ ವೀರಶೈವರೂ ಸಹ ನಾವೆಲ್ಲರೂ ವೀರಶೈವ ಲಿಂಗಾಯತ ಹಿಂದೂಗಳು ಒಂದೇ ಎಂಬ ಭಾವನೆಗಳನ್ನು ಇಟ್ಕೊಬೇಕು ಮತ್ತು  ದಿನಾಂಕ 22 ರಂದು ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಪ್ರತಿಯೊಂದು ಮನೆಯಲ್ಲಿ ದೀಪ  ಹಚ್ಚಿ ಆ ದಿನದಂದು ರಾಮನವಮಿ ಆಚರಣೆ ಎಂದು ಭಾವಿಸಿಕೊಂಡು ತಿಳಿದು ಪೂಜೆ ಮಾಡಿ ರಾಮನನ್ನು ಆರಾಧಿಸಬೇಕು ಎಂದು ಹೇಳಿದರು. 

ಶಾಸಕರೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ರೀತಿಯ ರಾಜಕೀಯ ಮಾಡದೇ ಎಲ್ಲಾ ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಣೇಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ದಾವಣಗೆರೆ ಪ್ರಭಾ ಮಲ್ಲಿಕಾರ್ಜುನ್, ಪಂಚಮಸಾಲಿ ಸಮಾಜದ ಧರ್ಮದರ್ಶಿಗಳಾದ ಬಿ.ಸಿ. ಉಮಾಪತಿ, ಬಸವರಾಜ್ ದಿಂಡೂರು, ಪಿ.ಡಿ. ಶಿರೂರು, ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೂಜಾರ್, ಆಡಳಿತ ಅಧಿಕಾರಿ ರಾಜಕುಮಾರ್ ಹೊನ್ನಾಳಿ, ಪ್ರಕಾಶ್ ಪಾಟೀಲ್ ದಾವಣಗೆರೆ, ವಸಂತ್ ಹುಲ್ಲತ್ತಿ, ರಶ್ಮಿ ಕುಂಕದ್, ಡಿ.ಜೆ. ಶಿವಾನಂದಪ್ಪ, ಗುತ್ತೂರು ಹಾಲೇಶ್ ಗೌಡ್ರು, ಮಂಜುನಾಥ್ ಪುರವಂತರ, ಕರಿಬಸಪ್ಪ ಕಂಚಿಕೇರಿ ಹರಿಹರ, ಕರಿಬಸಪ್ಪ ಗುತ್ತೂರು, ಬಾದಾಮಿ ಜಯಣ್ಣ,  ಲಿಂಗರಾಜ್ ಪಟೇಲ್ ಬೆಳಕೇರಿ, ಶಿವಪ್ಪ ಬಂಕಾಪುರ, ಮಲ್ಲಿಕಾರ್ಜುನ, ಅಶೋಕ ಬೆಂಡಿಗೇರಿ, ಸೋಮಶೇಖರ್, ಬಾತಿ ರವಿಕುಮಾರ್, ಶ್ರೀಶೈಲ,  ಇತರರು ಹಾಜರಿದ್ದರು.    

error: Content is protected !!