ಹರಿಹರದಲ್ಲಿ ಸಡಗರ – ಸಂಭ್ರಮ, ಅದ್ಧೂರಿ ಸಂಕ್ರಾಂತಿ ಆಚರಣೆ

ಹರಿಹರದಲ್ಲಿ ಸಡಗರ – ಸಂಭ್ರಮ, ಅದ್ಧೂರಿ ಸಂಕ್ರಾಂತಿ ಆಚರಣೆ

ಹರಿಹರ, ಜ15- ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮ ಮತ್ತು ಅದ್ಧೂರಿಯಾಗಿ ಆಚರಿಸಲಾಯಿತು.

ತುಂಗಭದ್ರಾ ನದಿ ದಂಡೆಯ ಮೇಲೆ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುವುದಕ್ಕೆ ರಾಜ್ಯದ ವಿವಿಧ ನಗರಗಳಿಂದ ಟ್ರ್ಯಾಕ್ಟರ್, ಕಾರು, ಎತ್ತಿನ ಗಾಡಿ, ಮಜಡ, ಅಪೇ ಆಟೋಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ತುಂಗಭದ್ರಾ ನದಿಗೆ ವಿಶೇಷ ಪೂಜೆ ಅರ್ಪಿಸಿದರು.

ತದನಂತರ ತಾವು ತಂದಿದ್ದ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು, ರೊಟ್ಟಿ, ಚಪಾತಿ, ಬುತ್ತಿ, ಚಿತ್ರಾನ್ನ, ಶೇಂಗಾ, ಕಡಲೆ, ಗುರಾಳು ಚಟ್ನಿ, ವಿವಿಧ ಕಾಳುಗಳ ಮತ್ತು ತರಕಾರಿಗಳ ಪಲ್ಯ, ಕ್ಯಾರೆಟ್, ಮೂಲಂಗಿ, ಸೌತೆಕಾಯಿ, ಸಿಹಿ ಪದಾರ್ಥಗಳು ಸೇರಿದಂತೆ ವಿವಿಧ ಬಗೆಯ ಅಡುಗೆಯನ್ನು ತುಂಗಭದ್ರಾ ನದಿಯ ದಂಡೆಯ ಮೇಲೆ ಕುಳಿತುಕೊಂಡು, ಕುಟುಂಬದ ಸದಸ್ಯರೊಂದಿಗೆ ಊಟ ಮಾಡಿದರು.

ತುಂಗಭದ್ರಾ ನದಿಯ ರಾಘವೇಂದ್ರ ಸ್ವಾಮಿ ಮಠದ ಹಿಂಬದಿಯಲ್ಲಿ ತುಂಗಾರತಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಇದ್ದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಜನರು ಈ ಸ್ಥಳದಲ್ಲಿ ಕುಳಿತುಕೊಂಡು ಊಟ ಮಾಡಿದ್ದು ಕಂಡುಬಂದಿತು. 

ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಇದ್ದ ಪರಿಣಾಮ ಮತ್ತು ಬಿಸಿಲನ ತಾಪ ಹೆಚ್ಚು ಇದ್ದಿದ್ದರಿಂದ ಐಸ್, ತಂಪಾದ ಪಾನೀಯ ಜ್ಯೂಸ್ ಅಂಗಡಿಗಳಲ್ಲಿ ಹಾಗೂ ಹೋಟೆಲ್ ಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.    

 ನಗರದ ನದಿ ದಂಡೆಯ ಮೇಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನ, ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಚೌಡೇಶ್ವರಿ ಅಮ್ಮನವರ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನಗಳಿಗೆ ಅಧಿಕ ಪ್ರಮಾಣದಲ್ಲಿ ಭಕ್ತರು ಆಗಮಿಸಿ ದೇವರ ಆಶೀರ್ವಾದ ಪಡೆದುಕೊಂಡರು.

ಆದರೆ ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸದೇ ಇರುವುದು ಕಂಡುಬಂದಿತು. ಜೊತೆಗೆ ಹರ ಮಠದಲ್ಲಿ ಸರಳವಾಗಿ ಹರ ಜಾತ್ರಾ ಮಹೋತ್ಸವ ಆಚರಣೆ ಮಾಡಿದ್ದರೂ ಸಹ ಸಾರ್ವಜನಿಕರು ಅಲ್ಲಿಗೆ ಸ್ವಯಂ ಪ್ರೇರಿತರಾಗಿ ಹೋಗಿದ್ದರಿಂದ ಮತ್ತು ಮಲೇಬೆನ್ನೂರು ಹತ್ತಿರ ಕುಂಬಳೂರಿನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹೋಮ ಹವನಗಳ ವಿಶೇಷ ಪೂಜೆ ಇದ್ದುದರಿಂದ ನಗರದಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಕಡಿಮೆ ಪ್ರಮಾಣದಲ್ಲಿ ಸಾರ್ವಜನಿಕರು ಇರುವುದು ಕಂಡುಬಂದಿತು. 

error: Content is protected !!