ದಾವಣಗೆರೆ, ಜ.11- ಜಿಲ್ಲಾ ಪೊಲೀಸ್ ಹಾಗೂ ದಾವಣಗೆರೆ ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ 2024 ರ ಅಂಗವಾಗಿ ಗುರುವಾರ ರಸ್ತೆ ಸುರಕ್ಷಾ ಸಪ್ತಾಹ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ್ ಜಾಥಾಕ್ಕೆ ಚಾಲನೆ ನೀಡಿದರು. ನಗರದ ಬಾಪೂಜಿ, ಡಿಆರ್ಆರ್, ಸಿದ್ಧಗಂಗಾ ಶಾಲೆ, ಮಾಗನೂರು ಬಸಪ್ಪ, ಎವಿಕೆ, ಪಟೇಲ್ ವೀರಪ್ಪ, ಸೆಂಟ್ ಪಾಲ್ಸ್ ಶಾಲೆಯ ಸ್ಕೌಟ್ಸ್ & ಗೈಡ್ಸ್ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಸಂಚಾರ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಘೊಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಎಲ್ಲಾ ವಾಹನ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು.
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸಬೇಕು, ಅತೀ ವೇಗವಾಗಿ ವಾಹನ ಚಾಲನೆ ಮಾಡಬಾರದು ಎಂದರು.
ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸುವಾಗ ರಸ್ತೆಯ ಎಡ ಭಾಗದಲ್ಲಿ ಸಂಚರಿಸಬೇಕು. ರಸ್ತೆಗಳನ್ನು ದಾಟುವಾಗ ಅತಿ ಜಾಗರೂಕತೆಯಿಂದ ರಸ್ತೆ ದಾಟಬೇಕು. ಶಾಲಾ ವಾಹನಗಳ ಚಾಲಕರನ್ನು ನೇಮಿಸುವ ಮುನ್ನ ಅವರುಗಳ ಪೂರ್ವಾಪರವನ್ನು ಪರಿಶೀಲಿಸಬೇಕಾಗುತ್ತದೆ. ಈ ಬಗ್ಗೆ ಆದೇಶ ಕೂಡ ಬಂದಿದೆ. ಈ ಬಗ್ಗೆ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳೊಂದಿಗೆ ಸಭೆ ನಡೆಸಿ ತಿಳಿಸಲಾಗುವುದು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ ರವರು, ದಾವಣಗೆರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಗ್ರಾಮಾಂತರ ಡಿವೈಎಸ್ಪಿ ಬಸವರಾಜ ಬಿ.ಎಸ್, ಆರ್ ಟಿಓ ಪ್ರಮುತೇಶ್, ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಅಧ್ಯಕ್ಷ ದಿನೇಶ್ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಗುರುಬಸವರಾಜ್, ಮಲ್ಲಮ್ಮ ಚೌಬೆ, ಶೈಲಜಾ, ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಕಮೀಷನರ್ ಷಡಕ್ಷರಿ ಇತರರು ಈ ಸಂದರ್ಭದಲ್ಲಿದ್ದರು.