ಉಪನ್ಯಾಸಕರ ಶೈಕ್ಷಣಿಕ ಸಮಾವೇಶದಲ್ಲಿ ಡಾ.ವೈ.ಎ. ನಾರಾಯಣಸ್ವಾಮಿ ವಿಶ್ವಾಸ
ದಾವಣಗೆರೆ, ಜ. 11- ಬರುವ ಮಾರ್ಚ್ ತಿಂಗಳೊಳಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ವರದಿ ಜಾರಿಯಾಗುವ ನಿರೀಕ್ಷೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ, ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಳೆದ ನವೆಂಬರ್ ತಿಂಗಳಲ್ಲೇ ಏಳನೇ ವೇತನ ಆಯೋಗದ ವರದಿ ಜಾರಿಯಾಗುತ್ತದೆ ಎಂಬ ವಿಶ್ವಾಸ ನಮ್ಮದಾಗಿತ್ತು. ಅದು ಮಾ.15 ಕ್ಕೆ ಮುಂದೂಡಲಾಗಿದೆ. ಈ ಸಂಬಂಧ ಕಲಾಪ ಬಹಿಷ್ಕರಿಸಿ ಹೋರಾಟ ಮಾಡಿರುವುದನ್ನು ನೆನಪಿಸಿಕೊಂಡರು.
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 2.35 ಲಕ್ಷ ಹುದ್ದೆಗಳಿದ್ದು, ಇದರಿಂದಾಗಿ 8.876 ಕೋಟಿ ರೂ. ಉಳಿತಾಯ ಆಗುತ್ತಿದೆ. ನೌಕರರೂ ಸಹ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿದ ಹಣ ಉಳಿತಾಯ ಮಾಡಿದ್ದಾರೆ. ಉಳಿಕೆ ಹಣ ಬಿಡುಗಡೆಗೂ ಕೂಡ ಒತ್ತಾಯಿಸಿದ್ದೇವೆ ಎಂದರು.
ಚುನಾವಣೆ ಸಮೀಪಿಸುತ್ತಿದ್ದು, ಉಳಿಕೆ ಹಣ ಬಿಡುಗಡೆ ಮುಂದೂಡುವ ಸಾಧ್ಯತೆ ಇರುವ ಕಾರಣ ಧರಣಿ ಸತ್ಯಾಗ್ರಹ ಸಹ ಮಾಡಿದ್ದೇವೆ. ಬಜೆಟ್ ಜೊತೆಗೆ ಮಾರ್ಚ್ ತಿಂಗಳಲ್ಲಿ ಏಳನೇ ವೇತನ ಘೋಷಣೆ ನಿರೀಕ್ಷೆ ಇದೆ ಎಂದು ಹೇಳಿದರು.
ಹಳೆಯ ಮತ್ತು ಹೊಸ ಪಿಂಚಣಿ ಯೋಜನೆ ಬಗ್ಗೆ ಗೊಂದಲವಿದ್ದು, ನೌಕರರ ಹಣ ಕೇಂದ್ರ ಸರ್ಕಾರದ ಪಿಎಫ್ ಖಾತೆಯಲ್ಲಿದೆ. ಆ ಹಣವನ್ನು ತರಬೇಕಾದರೆ ಸಂಸತ್ನಲ್ಲಿ ತಿದ್ದುಪಡಿ ತರುವ ಅಗತ್ಯವಿದ್ದು, ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರರಷ್ಟು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಲಿದೆ.
– ಡಾ. ವೈ.ಎ. ನಾರಾಯಣಸ್ವಾಮಿ
ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಅನೇಕ ಗೊಂದಲಗಳಿದ್ದು, ನಿವಾರಣೆ ಹೋರಾಟ ಅವಶ್ಯವಾಗಿದೆ. ಪದವಿ ಪೂರ್ವ ಶಿಕ್ಷಣವನ್ನು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಟ್ಟಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಮೂಲ ಸೌಲಭ್ಯಗಳ ಪುನರ್ ಪರಿಶೀಲನೆಗೆ ಮಾತ್ರ ಸಿಇಓಗೆ ಅಧಿಕಾರ ನೀಡಲಾಗಿದೆ ಎಂದರು.
ಅಕಾಡೆಮಿಕ್ ವ್ಯಾಪ್ತಿಗೆ ಧಕ್ಕೆ ಇರುವುದಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು 16 ಸೇವೆಗಳನ್ನು ಪದವಿ ಪೂರ್ವ ಶಿಕ್ಷಣ ಹಂತದಲ್ಲಿಯೇ ಮಾಡಲು ಆದೇಶ ಹೊರಡಿಸಲಾಗಿದೆ ಎಂದ ಅವರು, ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪಿಯು ಉಪನ್ಯಾಸಕರಿಗೆ ಸಂಬಂಧಪಟ್ಟಂತೆ ಜ್ವಲಂತ ಸಮಸ್ಯೆಗಳಿದ್ದರೂ ಶಿಕ್ಷಣ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಸರ್ಕಾರ ಆಡಳಿತ ನಡೆಸಬೇಕೆಂದರು.
ಪಿಯು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಸಿ.ಬಿ. ರವಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಡಿಡಿಪಿಯು ಎಸ್.ಜಿ. ಕರಿಬಸಪ್ಪ, ಕಾರ್ಯಕಾರಿ ಸಮಿತಿ ಸದಸ್ಯ ಬಿ. ಪಾಲಾಕ್ಷಿ, ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ ಎಸ್. ಒಡೇನಪುರ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ಧಬಸಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ, ಇತರೆ ಪದಾಧಿಕಾರಿಗಳಾದ ಶ್ರೀನಿವಾಸಮೂರ್ತಿ, ಮುಬಾರಕ್ ಅಲಿ, ಹೆಚ್. ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಣ ತಜ್ಞ ಡಾ.ಹೆಚ್.ವಿ. ವಾಮದೇವಪ್ಪ, ಮಹೇಶ್ ಮಾಶ್ಯಾಳ್ ವಿಶೇಷ ಉಪನ್ಯಾಸ ನೀಡಿದರು.