ಮಕ್ಕಳು ಬದುಕು, ದೇಶ ಕಟ್ಟುವಂತವರಾಗಬೇಕು

ಮಕ್ಕಳು ಬದುಕು, ದೇಶ ಕಟ್ಟುವಂತವರಾಗಬೇಕು

ಸೋಮೇಶ್ವರೋತ್ಸವದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್

ದಾವಣಗೆರೆ, ಜ. 8 – ಹಳ್ಳಿ ಮಕ್ಕಳು ಇಂಗ್ಲಿಷ್ ಕಲಿತು ಸ್ಪರ್ಧಾತ್ಮಕ ಯುಗವನ್ನು ಸಮರ್ಥವಾಗಿ ಎದುರಿಸಿ ಬದುಕು, ದೇಶ ಕಟ್ಟುವಂತಾಗಬೇಕು ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಹಿತ ನುಡಿದರು.

ಇಲ್ಲಿಗೆ ಸಮೀಪದ ಗೋಣಿವಾಡದ ಸೋಮೇಶ್ವರ ವಸತಿ ಶಾಲೆಯಲ್ಲಿ ನಿನ್ನೆ ನಡೆದ ಸೋಮೇಶ್ವರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಕ್ಕಳು ಚಂಚಲತೆಯಿಂದ ನಾನಾ ದುಷ್ಟ ಚಟಗಳಿಗೆ ಬೀಳುತ್ತಿದ್ದಾರೆ. ಇದನ್ನು ನೋಡಿದರೆ ಮುಂದೆ ಏನಾಗಲಿದೆ ಎಂಬ ಆತಂಕ ಕಾಡುತ್ತಿದೆ. ಸ್ಟೇರಿಂಗ್‌ನ ಹಿಡಿತ ತಪ್ಪಿದರೆ ಸಮುದ್ರಕ್ಕೆ ಹೋಗಿ ಬೀಳಬಹುದು ಎಚ್ಚರವಿರಲಿ ಎಂದು ಮಾರ್ಮಿಕವಾಗಿ ಕಿವಿಮಾತು ಹೇಳಿದರು.

ಈ ಶಾಲೆಗೆ ಮಕ್ಕಳನ್ನು ಸೇರಿಸಲು ನಮ್ಮಿಂದ ಪ್ರಭಾವ ಬೀರಿಸಲು ಜನ ಬರುತ್ತಾರೆ. ಆ ಮಟ್ಟದ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಈ ಶಾಲೆ ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಸಂಸ್ಕಾರಯುತ ಆಧುನಿಕ ಶಿಕ್ಷಣ ಕೊಡುವ ಸಂಕಲ್ಪವನ್ನು ಈ ಶಾಲೆ ಮಾಡುತ್ತಿದೆ. ಶಿಕ್ಷಣ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಸಬೇಕು ಎಂದು ಹೇಳಿದರು.

ಶಿಕ್ಷಣ ಆತ್ಮವಿಶ್ವಾಸವನ್ನು ಬೆಳೆಸುವ ಕೆಲಸವನ್ನು ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಹಂತದಲ್ಲಿ ಧೈರ್ಯ ಕಳೆದುಕೊಳ್ಳಬಾರದು, ಬದುಕನ್ನು ಎಚ್ಚರದಿಂದ, ಆತ್ಮವಿಶ್ವಾಸದಿಂದ ಎದುರಿಸುವುದನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್. ಎಂ. ಮುರುಗೇಶ್ ಆರಾಧ್ಯ ಮಾತನಾಡಿ, ಇಂದು ಮೊಬೈಲ್ ಮತ್ತು ಸೀರಿಯಲ್ ಗಳು ಭವಿಷ್ಯವನ್ನು ಹಾಳು ಮಾಡುತ್ತವೆ. ಈ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳು ಅಂಕಕ್ಕೆ ಜೋತು ಬೀಳದೆ ಸಾಂಸ್ಕೃತಿಕವಾಗಿ ಸದಾ ಎಚ್ಚರವಾಗಿರಬೇಕು ಎಂದು ಹೇಳಿದರು.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕ್ರೀನಾಗೆ ಸೋಮೇಶ್ವರ ಸಿರಿ ಪ್ರಶಸ್ತಿ ಮತ್ತು 25 ಸಾವಿರ ರೂ. ನಗದು ಬಹುಮಾನ ನೀಡಲಾಯಿತು ಮತ್ತು 90 ಕ್ಕಿತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ತಲಾ 5 ಸಾವಿರ ನಗದು ನೀಡಿ ಗೌರವಿಸಲಾಯಿತು.

ಶಾಸಕ ಎಸ್. ಎ. ಬಸವಂತಪ್ಪ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್, ಲೆಕ್ಕ ಪರಿಶೋಧಕ ಉಮೇಶ್ ಶೆಟ್ಟಿ, ಒಲಂಪಿಯಾಡ್ ಶಾಲೆಯ ಪದ್ಮನಾಭ, ರೈತ ಕಾರಿಗನೂರಿನ ವೀರಣ್ಣ, ಶಾಲಾ ಆಡಳಿತ ಮಂಡಳಿ  ಅಧ್ಯಕ್ಷ ಅಶೋಕ್ ರೆಡ್ಡಿ, ಶಾಲೆ ಪ್ರಾಚಾರ್ಯರಾದ ವೀಣಾ ಸುರೇಶ್ ಹಾಗೂ ಇತರರು ಇದ್ದರು. 

ಸಂಗೀತ ಸಂಜೆ : ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ಎಂ.ಡಿ.ಪಲ್ಲವಿ ಜೋಡಿ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.

ಎಂ.ಡಿ.ಪಲ್ಲವಿ ಭಾವಗೀತೆ, ರಾಜೇಶ್ ಕೃಷ್ಣನ್ ಜನಪ್ರಿಯ ಚಿತ್ರಗೀತೆಗಳ ಜುಗಲ್ ಬಂದಿ ಪೋಷಕ, ಮಕ್ಕಳನ್ನು ಸೆಳೆಯಿತು.

error: Content is protected !!