ದೇವಸ್ಥಾನಗಳು ಸಮಾಜದ ಸ್ವಾಸ್ಥ್ಯದ ಸಂಕೇತ

ದೇವಸ್ಥಾನಗಳು ಸಮಾಜದ ಸ್ವಾಸ್ಥ್ಯದ ಸಂಕೇತ

 `ಶ್ರೀ ವಾಸವಿ ದೇವಾಲಯಗಳ ಮಹಾ ಅಧಿವೇಶನ’ ಉದ್ಘಾಟಿಸಿದ ಚಕ್ರವರ್ತಿ ಸೂಲಿಬೆಲೆ

ದಾವಣಗೆರೆ, ಜ. 7- ದೇವಸ್ಥಾನಗಳು ಸಮಾಜದ ಸ್ವಾಸ್ಥ್ಯದ ಸಂಕೇತ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾ, ಕರ್ನಾಟಕ ಶ್ರೀ ವಾಸವಿ ದೇವಾಲಯಗಳ ಒಕ್ಕೂಟ ದಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ  ಭಾನುವಾರ ಹಮ್ಮಿಕೊಳ್ಳಲಾಗಿದ್ದ `ಶ್ರೀ ವಾಸವಿ ದೇವಾಲಯಗಳ ಪ್ರಥಮ ಮಹಾ ಅಧಿವೇಶನ’ ಉದ್ಘಾಟಿಸಿ ಅವರು ಮಾತನಾಡಿದರು.

ದೇಹದ ಯಾವುದೇ ಅಂಗಕ್ಕೆ ಪೆಟ್ಟಾದರೆ ಆಸ್ಪತ್ರೆಗಳಿಗೆ ಹೋಗುತ್ತೇವೆ. ಆದರೆ ಮನಸ್ಸನ್ನು ಹಿಡಿತಕ್ಕೆ ತರಲು ದೇವಸ್ಥಾನಗಳಿಗೆ ಹೋಗಬೇಕಾ ಗುತ್ತದೆ. ಮಂದಿರಗಳು ಹೆಚ್ಚಾಗಿರುವ ಊರಿನಲ್ಲಿ ನೆಮ್ಮದಿ, ಶಾಂತಿ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.

ಯಾವ ದೇವಸ್ಥಾನದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತವೋ ಅಲ್ಲಿ ಸಮಸ್ಯೆಗಳು ಶುರುವಾಗುತ್ತವೆ. ಆದ್ದರಿಂದ ಮಂದಿರಗಳು ಕಿತ್ತು ಕೊಳ್ಳುವ ಜಾಗಗಳಾಗದೇ ಕೊಡುವ ಮಂದಿರ ಗಳಾಬೇಕು. ದೇವಸ್ಥಾನಗಳಿಗೆ ಬಂದು ತುಸು ಹೊತ್ತು ಕುಳಿತರೆ ಆಯಾಸ ಪರಿಹಾರ ವಾಗುವಂತಹ ವಾತಾವರಣ ನಿರ್ಮಿಸುವ ಜವಾಬ್ದಾರಿ ಧರ್ಮದರ್ಶಿಗಳದ್ದಾಗಬೇಕು ಎಂದು ಹೇಳಿದರು.

ಮಂದಿರಗಳು ದೇವರ ಮೇಲಿನ ವಿಶ್ವಾಸ ದೃಢಪಡಿಸುವಂತಿರಬೇಕು. ನೊಂದು ಬಂದವರಿಗೆ ಆತ್ಮ ವಿಶ್ವಾಸ ತುಂಬುವ ಕೇಂದ್ರಗಳಾಗಬೇಕು. ಕೇವಲ ಉತ್ಸವ, ಪೂಜೆಗಳಗೆ ಸೀಮಿತವಾಗದೆ ಅಂತಃಶ್ರದ್ಧಾ ಕೇಂದ್ರಗಳಾಗಬೇಕು. ಪ್ರಜ್ಞಾವಂತಿಕೆ ವ್ಯಾಪಕಗೊಳಿಸುವ ಪ್ರಕ್ರಿಯೆ ಹೆಚ್ಚಾದಂತೆ ಸಮಾಜದ ಸ್ವಾಸ್ಥ್ಯವೂ ಹೆಚ್ಚಾಗುತ್ತದೆ. ಪ್ರೀತಿ ಹಂಚುವ ಪ್ರಯತ್ನ ಮಾಡಿದರೆ ಮಂದಿರಗಳ ಗೌರವವೂ ಹೆಚ್ಚಾಗುತ್ತದೆ ಎಂದು ನುಡಿದರು.

25 ಸಾವಿರ ವರ್ಷಗಳಷ್ಟು ಹಳೆಯದಾದ ವೇದಗಳನ್ನು ಹಿರಿಯರು ಉಳಿಸಿಕೊಂಡು ಬಂದಿದ್ದಾರೆ. ಅವು ಮುಂದಿನ ಪೀಳಿಗೆಗೂ ಉಳಿಯುವಂತಾಗಬೇಕು. ಪ್ರತಿ ದೇವಸ್ಥಾನಗಳೂ ನಮ್ಮ ಶಾಸ್ತ್ರ ಗ್ರಂಥಗಳನ್ನು ಉಳಿಸಬೇಕು. ಅದಕ್ಕಾಗಿ ನಿರಂತರ ಪ್ರಯತ್ನಗಳಿರಬೇಕು ಎಂದ ಸೂಲಿಬೆಲೆ, ಆರ್ಯವೈಷ್ಯ ಸಮಾಜದವರು ತಮ್ಮ ಮಕ್ಕಳಿಗೆ ಸಂಸ್ಕೃತ ಕಲಿಸುವ ಪ್ರಯತ್ನ ಮಾಡಿದಲ್ಲಿ `ಸಂಸ್ಕೃತ ಸತ್ತ ಭಾಷೆ’ ಎನ್ನುವವರಿಗೆ ತಕ್ಕ ಉತ್ತರ ನೀಡಬಹುದು ಎಂದು ಸಲಹೆ ನೀಡಿದರು.

ಆರ್ಯವೈಶ್ಯ ಸಮಾಜ ಹಿಂದೂ ಸಮಾಜದಿಂದ ಪ್ರತ್ಯೇಕವಾಗಿ ಎಂದೂ ತೋರಿಸಿಕೊಂಡಿಲ್ಲ. ಎಲ್ಲರನ್ನೂ ಜೊತೆ ಸೇರಿಸಿಕೊಂಡು ಹೋಗುವ ಸಮಾಜವಾಗಿದೆ. ಆದ್ದರಿಂದಲೇ ಈ ಸಮಾಜದ ಬಗ್ಗೆ ಹೆಮ್ಮೆ, ಗೌರವ, ಅಭಿಮಾನವಿದೆ ಎಂದು ಸೂಲಿಬೆಲೆ ಹೇಳಿದರು.

ಆರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್, ದೇವಾಲಯಗಳ ನಿರ್ಮಾಣ ಮುಖ್ಯವಲ್ಲ. ದೇವಾಲಯಗಳು ಸೇವಾಲಯಗಳಾದರೆ ಸಮಾಜಕ್ಕೂ ಶಕ್ತಿ ಬರುತ್ತದೆ. ಹಿಂದೂ  ಸಮಾಜ ಭದ್ರವಾಗಿ ನಿಲ್ಲುತ್ತದೆ ಎಂದು ಹೇಳಿದರು.

ರಾಜ್ಯಾದ್ಯಂತ ಇರುವ 232 ವಾಸವಿ ದೇವಾಲಯಗಳು ಕೇವಲ ವಾಸವಿ ಜಯಂತಿ, ದಸರಾ ಕಾರ್ಯಕ್ರಮಕ್ಕಷ್ಟೇ ಸೀಮಿವಾಗದೇ ವರ್ಷಕ್ಕೆ ಮೂರು ಸೇವಾ ಕಾರ್ಯಗಳನ್ನು ಮಾಡುವ ಸಂಕಲ್ಪ ಮಾಡುವಂತೆ ಕರೆ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್, ಧರ್ಮ ಜಾಗೃತಿಯಲ್ಲಿ ದೇವಾಲಯಗಳ ಪಾತ್ರ ಕುರಿತು ಮಾತನಾಡಿದರು. ವಿದ್ವಾಂಸರು, ಚಿಂತಕರೂ ಆದ ಹಿರೇಮಗಳೂರು ಕಣ್ಣನ್ ನಿತ್ಯಪೂಜಾ ವಿಧಿಗಳು, ಹೋಮ, ಯಾಗಗಳು ಹಾಗೂ ಪರಿಣಾಮಗಳ ಕುರಿತು ಮಾತನಾಡಿದರೆ, ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಮನೋಹರ ಮಠದ್, ದೇವಾಲಯಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಮಾತನಾಡಿದರು.

ಕರ್ನಾಟಕ ವಾಸವಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಯುವ ಜನ ಮಹಾಸಭಾ ಅಧ್ಯಕ್ಷ ಸುನೀಲ್, ನಾಗೇಂದ್ರ ಪ್ರಕಾಶ್, ಕೆ.ಆರ್. ಕೃಷ್ಣ, ಕುಂಟನಾಳ್ ವೆಂಕಟೇಶ್ ಇತರರು ಉಪಸ್ಥಿತರಿದ್ದರು.

error: Content is protected !!