ನ್ಯಾಯಮೂರ್ತಿ ಖನ್ನಾ, ವಕೀಲ ಫಾಲ್ಕಿವಾಲಾ ಸಂವಿಧಾನದ ದಿಗ್ಗಜರು

ನ್ಯಾಯಮೂರ್ತಿ ಖನ್ನಾ, ವಕೀಲ ಫಾಲ್ಕಿವಾಲಾ ಸಂವಿಧಾನದ ದಿಗ್ಗಜರು

ಹೆಚ್ಚುವರಿ ಸಾಲಿಸಿಟರ್ ಜನರಲ್
ಕೆ. ಅರವಿಂದ ಕಾಮತ್‌

ದಾವಣಗೆರೆ, ಜ. 5 – ಭಾರತದ ಸಂವಿಧಾನ ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದ ಹೆಚ್.ಆರ್. ಖನ್ನಾ ಹಾಗೂ ಹಿರಿಯ ವಕೀಲ ನಾನಿ ಫಾಲ್ಕಿವಾಲಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಸಂವಿಧಾನದ ದಿಗ್ಗಜರು ಎಂದು ಹೈಕೋರ್ಟ್‌ನಲ್ಲಿ ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಕೆ. ಅರವಿಂದ ಕಾಮತ್ ಬಣ್ಣಿಸಿದರು.

ಅವರು ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಅಧಿವಕ್ತ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ `ಸಂವಿಧಾನದ ಚೌಕಟ್ಟು ಎತ್ತಿ ಹಿಡಿಯುವುದೇ ವೃತ್ತಿ ಧರ್ಮ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ತುರ್ತು ಪರಿಸ್ಥಿತಿ ಜಾರಿ ಸಂದರ್ಭದಲ್ಲಿ ಜನರಿಗೆ ಜೀವನದ ಹಕ್ಕಿಲ್ಲ ಹಾಗೂ ಈ ವಿಷಯದಲ್ಲಿ ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಆಗಿನ ಕೇಂದ್ರ ಸರ್ಕಾರ ನಿಲುವು ತಳೆದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿತ್ತು.

ಆಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎನ್. ರೇ ಹಾಗೂ ನ್ಯಾಯಮೂರ್ತಿಗಳಾದ ಎಂ.ಹೆಚ್. ಬೇಗ್, ವೈ. ವಿ. ಚಂದ್ರಚೂಡ್ ಹಾಗೂ ಪಿ.ಎನ್. ಭಗವತಿ ಅವರು ಸರ್ಕಾರದ ಪರ ತೀರ್ಪು ನೀಡಿದ್ದರು. ನ್ಯಾಯಮೂರ್ತಿ ಹೆಚ್.ಆರ್. ಖನ್ನಾ ಅವರು ಮಾತ್ರ ಭಿನ್ನಮತದ ನಿಲುವು ತಳೆದು, ಜನರ ಜೀವನದ ಹಕ್ಕು ಎತ್ತಿ ಹಿಡಿದಿದ್ದರು. ಅವರ ತೀರ್ಪು ದೇಶದ ಸಂವಿಧಾನದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಕಾಮತ್ ಹೇಳಿದರು.

1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ಸ್ವರೂಪ ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠ 7-6 ಬಹುಮತದಿಂದ ತೀರ್ಪು ನೀಡಿತು. ಈ ಪ್ರಕರಣದಲ್ಲಿ ಹಿರಿಯ ವಕೀಲ ನಾನಿ ಫಾಲ್ಕಿವಾಲಾ ಅವರು ಮಂಡಿಸಿದ ವಾದ, ಸಂವಿಧಾನದ ಮೂಲ ಸ್ವರೂಪವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.  ಈ ಕಾರಣದಿಂದ ದೇಶದಲ್ಲಿ ಸಂವಿಧಾನ ಸುಸ್ಥಿತಿಯಲ್ಲಿ ಉಳಿದಿದೆ ಎಂದು ಕಾಮತ್ ತಿಳಿಸಿದರು.

ಸಂವಿಧಾನ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯಾಯಮೂರ್ತಿ ಖನ್ನ ಹಾಗೂ ವಕೀಲ ಫಾಲ್ಕಿವಾಲ ಅವರು ನನಗೆ ಆದರ್ಶ ಎಂದು ಕಾಮತ್ ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಜಿ.ಎಸ್. ಯತೀಶ್, ಕಾನೂನು ಕಲಿಕೆ ಹಾಗೂ ವಕೀಲ ವೃತ್ತಿ ನಿರ್ವಹಣೆ ಸಂದರ್ಭದಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆ ಇರಬೇಕು ಎಂದು ಹೇಳಿದರು.

ಅಧಿವಕ್ತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ದಯಾನಂದ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ವಕೀಲೆ ಎಸ್. ಸುಜಾತ ಉಪಸ್ಥಿತರಿದ್ದರು.

ಬಿಂದುಶ್ರೀ ಪ್ರಾರ್ಥಿಸಿದರು. ಗೋವಿಂದರಾಜ್ ಸ್ವಾಗತಿಸಿದರು. ವಸಂತ ಕುಮಾರ್ ನಿರೂಪಿಸಿದರೆ, ಬಿ.ಪಿ. ಬಸವನಗೌಡ ವಂದಿಸಿದರು.

error: Content is protected !!