ತೋಟದ ಬೆಳೆಗಳಿಗೆ ನೀರು ಹರಿಸುವ ಹಿನ್ನೆಲೆ 6 ಕ್ಕೆ ಭದ್ರಾ ಕಾಡಾ ಸಭೆ

ತೋಟದ ಬೆಳೆಗಳಿಗೆ ನೀರು ಹರಿಸುವ ಹಿನ್ನೆಲೆ  6 ಕ್ಕೆ ಭದ್ರಾ ಕಾಡಾ ಸಭೆ

15 ದಿವಸ ನೀರು ಹರಿಸಲು ಆಗ್ರಹ

ಅಚ್ಚುಕಟ್ಟಿನ ತೋಟದ ಬೆಳೆಗಳಿಗೆ 15 ದಿವಸ ನೀರು  ಹರಿಸಿ 20 ದಿವಸ ಬಂದ್‌ ಮಾಡುವ `ಆನ್‌ ಅಂಡ್‌ ಆಫ್‌’ ಪದ್ಧತಿ ಜಾರಿ ಮಾಡು ವಂತೆ ಭದ್ರಾ ಅಚ್ಚುಕಟ್ಟಿನ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಆಗ್ರಹಿಸಿದ್ದಾರೆ.

ಶಿವಮೊಗ್ಗ, ಜ.02- ಭದ್ರಾ ಅಚ್ಚುಕಟ್ಟಿನ ತೋಟದ ಬೆಳೆಗಳಿಗೆ ಭದ್ರಾ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ನೀರು ಹರಿಸುವ ಸಂಬಂಧ ಚರ್ಚಿಸಲು ಇದೇ ದಿನಾಂಕ 6 ರ ಶನಿವಾರ ಬೆಳಿಗ್ಗೆ 10.30 ಗಂಟೆಗೆ ಮಲವಗೊಪ್ಪ ದಲ್ಲಿರುವ ಭದ್ರಾ ಕಾಡಾ ಕಛೇರಿಯಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯನ್ನು ಕರೆಯಲಾಗಿದೆ.

ಭದ್ರಾ ಕಾಡಾ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಗೆ ಅಚ್ಚುಕಟ್ಟಿನ ವ್ಯಾಪ್ತಿಯಲ್ಲಿ ಬರುವ ಸಚಿವರಿಗೆ, ಸಂಸದರಿಗೆ, ಶಾಸಕರಿಗೆ ಮತ್ತು ರೈತ ಮುಖಂಡರಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಭದ್ರಾ ಜಲಾಶಯದಲ್ಲಿ ಮಂಗಳವಾರದ ವರದಿ ಪ್ರಕಾರ 151 ಅಡಿ 4 ಇಂಚು ನೀರಿದ್ದು, ಕಳೆದ ವರ್ಷಕ್ಕಿಂತ 30 ಅಡಿ ನೀರು ಕಡಿಮೆ ಇದೆ. ಕಳೆದ ವರ್ಷ ಜಲಾಶಯದಲ್ಲಿ ಈ ದಿನ 182 ಅಡಿ ನೀರಿನ (67 ಟಿಎಂಸಿ) ಸಂಗ್ರಹವಿತ್ತು.

ಈ ವರ್ಷ ಮಳೆಯ ಕೊರತೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಭಾರೀ ಪ್ರಮಾಣದಲ್ಲಿ ಕಡಿಮೆ ಇರುವುದರಿಂದ ಬೇಸಿಗೆ ಹಂಗಾಮಿನ ಭತ್ತದ ಬೆಳೆಗೆ ನೀರು ಹರಿಸಲು ಸಾಧ್ಯವಿಲ್ಲ. ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲೂ ಅಚ್ಚುಕಟ್ಟಿನ 2.42 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತಿದ್ದ ಭದ್ರಾ ಜಲಾಶಯವು ಈ ಬಾರಿ ಕುಡಿಯುವ ನೀರು ಮತ್ತು ತೋಟದ ಬೆಳೆಗಳಿಗೆ ಕನಿಷ್ಠ ನೀರು ಪೂರೈಸುವುದೂ ಕಷ್ಟಸಾಧ್ಯ ಎಂಬ ಪರಿಸ್ಥಿತಿಯಲ್ಲಿದೆ. 

71.535 ಟಿಎಂಸಿ ನೀರಿನ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಸದ್ಯ 26.90 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಇದರಲ್ಲಿ ಡೆಡ್‌ ಸ್ಟೋರೇಜ್‌ 8.50 ಟಿಎಂಸಿ ಹೊರತುಪಡಿಸಿದರೆ ಉಳಿದ ಸುಮಾರು 18 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿರುತ್ತದೆ. 

ಇದರಲ್ಲಿ 6.5 ಟಿಎಂಸಿ ನೀರನ್ನು ಕಡ್ಡಾಯವಾಗಿ ಕುಡಿಯುವ ನೀರಿಗಾಗಿ ಮೀಸಲಿಡಬೇಕಾಗುತ್ತದೆ. ಉಳಿದ ಸುಮಾರು 12 ಟಿಎಂಸಿ ನೀರನ್ನು  ಕೃಷಿ ಉದ್ದೇಶಕ್ಕೆ ಬಳಸಲು ಅವಕಾಶವಿರುತ್ತದೆ. 12 ಟಿಎಂಸಿ ನೀರನ್ನು ಜನವರಿಯಿಂದ ಮೇ ತಿಂಗಳವರೆಗೆ ಅಂದರೆ 5 ತಿಂಗಳವರೆಗೆ ತಿಂಗಳಿಗೆ 10 ದಿನದಂತೆ ನಾಲೆಗಳಿಗೆ ನೀರು ಹರಿಸುವ ಚಿಂತನೆಯನ್ನು ಅಧಿಕಾರಿಗಳು ಹೊಂದಿದ್ದಾರೆ ಎನ್ನಲಾಗಿದೆ. 

ಜಲಾಶಯದಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದರಿಂದ ನೀರನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಬೇಕೆಂಬ ದೊಡ್ಡ ಸವಾಲು ಐಸಿಸಿ ಸಭೆಗೆ ಎದುರಾಗಿದ್ದು, ಅಚ್ಚುಕಟ್ಟಿನ ತೋಟದ ಬೆಳೆಗಾರರ ಚಿತ್ತ ಜ. 6 ರಂದು ನಡೆಯುವ ಭದ್ರಾ ಕಾಡಾ ಸಭೆಯತ್ತ ಇದೆ.

error: Content is protected !!