ವಿಕಲಚೇತನರ ಸಾಧನೆಗೆ ಅವಕಾಶ ನೀಡಬೇಕು

ವಿಕಲಚೇತನರ ಸಾಧನೆಗೆ ಅವಕಾಶ ನೀಡಬೇಕು

ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ

ದಾವಣಗೆರೆ, ಡಿ. 28 – ವಿಕಲಚೇತನರಿಗೆ ಸಾಧನೆ ಮಾಡುವ ಛಲ ಹಾಗೂ ಸಾಮರ್ಥ್ಯ ಇದೆ. ಸರ್ಕಾರ ಹಾಗೂ ಸಮಾಜಗಳು ಸಾಧನೆಗೆ ಅಗತ್ಯ ಅವಕಾಶ ನೀಡಬೇಕು ಎಂದು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಹೇಳಿದರು.
ಕರ್ನಾಟಕ ರಾಜ್ಯ ವಿಕಲಚೇತನರ ಆರ್.ಪಿ.ಡಿ. ಟಾಸ್ಕ್‌ ಫೋರ್ಸ್ (ಬೆಂಗಳೂರು), ಲಯನ್ಸ್ ಕ್ಲಬ್ (ದಾವಣಗೆರೆ) ಹಾಗೂ ಮಾನಸ ಸಾಧನಾ ವಿಕಲಚೇತನರ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಲಯನ್ಸ್‌ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಣ್ಣಿಗೆ ಕಾಣುವ ಹಾಗೂ ಕಣ್ಣಿಗೆ ಕಾಣದೇ ಇರುವ ಎರಡೂ ರೀತಿಯ ಅಂಗವೈಕಲ್ಯ ಇರು ತ್ತದೆ. ಈ ವೈಕಲ್ಯಗಳ ನಡುವೆಯೂ ಸಾಧನೆಗೆ ಅವಕಾಶ ಇದೆ. ಹೀಗಾಗಿ ವಿಕಲಚೇತನರಿಗೆ ಈಗ ಬೇಕಾಗಿರುವುದು ಅವಕಾಶವೇ ಹೊರತು ಅನುಕಂಪವಲ್ಲ ಎಂದರು.
ಕುಸುಮರೋಗವೂ ಒಂದು ವಿಧದ ಅಂಗವೈಕಲ್ಯವಾಗಿದೆ. ನಾನು ಈ ವೈಕಲ್ಯವನ್ನು ಹೊಂದಿದ ಕಾರಣ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೂ, ಸಾಧನೆ ಮಾಡುವ ಛಲವೂ ದೊರೆಯಿತು ಎಂದವರು ತಮ್ಮ ಅನುಭವ ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಅಂಗವೈಕಲ್ಯದ ನಡುವೆಯೂ ಸಾಧನೆ ಮಾಡಿರುವವರನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಛಲದಿಂದ ಸಾಧನೆ ಮಾಡುವ ಗುಣ ಎಲ್ಲ ವಿಕಲಚೇತನರಲ್ಲೂ ಬರಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಜನ ವಿಕಲಚೇತನ ಸಾಧಕರಿಗೆ ವಿಶೇಷ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ನೀಲಿ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಮುಖಂಡರಾದ ಕೆ. ಎಸ್. ಮಂಜುನಾಥ್, ಮಂಜುನಾಥ ಹೊಸಕೆರೆ, ಸುರೇಶ್ ಭಂಡಾರಿ, ವೀರಯ್ಯ ಸ್ವಾಮಿ, ಡಾ. ಪುಷ್ಪಲತ, ಕೆ.ಬಿ. ರೂಪಾ ನಾಯ್ಕ, ಡಾ. ಬಿ. ಕಿರಣ್ ನಾಯ್ಕ, ಸುಮನ, ಮೀನಾಕ್ಷಿ, ಎಂ. ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!