ತೃಪ್ತಿ, ಮಾನವೀಯ ಮೌಲ್ಯಗಳಿಂದ ಸಮಾಜದ ಬದಲಾವಣೆ ಸಾಧ್ಯ

ತೃಪ್ತಿ, ಮಾನವೀಯ ಮೌಲ್ಯಗಳಿಂದ ಸಮಾಜದ ಬದಲಾವಣೆ ಸಾಧ್ಯ

ಜಗಳೂರಿನ ಕಾರ್ಯಕ್ರಮದಲ್ಲಿ ನ್ಯಾ. ಎನ್. ಸಂತೋಷ್ ಹೆಗ್ಡೆ ಅಭಿಮತ

ಮಕ್ಕಳಿಗೆ ಶಿಕ್ಷಣ ಕೊಟ್ಟೆ, ಶಾಸಕನಾದೆ ನನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಿದ ಫಲವಾಗಿ ಶಾಸಕನಾಗಿರುವೆ. ಪೋಷಕರು ಹಣ, ಆಸ್ತಿ ಗಳಿಕೆಗಿಂತ ಅವರಿಗೆ ಶಿಕ್ಷಣ ನೀಡಿ ಆಸ್ತಿಯನ್ನಾಗಿಸಿ ಕೊಳ್ಳಬೇಕು.
-ಬಿ. ದೇವೇಂದ್ರಪ್ಪ, ಶಾಸಕ

ಜಗಳೂರು, ಡಿ.27- ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಸಮಾಜದ ಬದಲಾವಣೆ ಸಾಧ್ಯ ಎಂದು ಸುಪ್ರೀಂ‌ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜೆ.ಎಂ.ಇಮಾಂ ಟ್ರಸ್ಟ್ ವತಿಯಿಂದ ಜೆ.ಎಂ.ಇಮಾಂ ಸ್ಮಾರಕ ಶಾಲೆ ಆವರಣದಲ್ಲಿ ಇಂದು ಏರ್ಪಾಡಾಗಿದ್ದ `ಮುಷೀರ್-ಉಲ್-ಮುಲ್ಕ್’ `ಇಮಾಂ ರಾಜ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಕರ್ನಾಟಕ ಲೋಕಾಯುಕ್ತನಾಗಿ ಆಗಮಿ ಸಿದ ನಂತರ ಸಮಾಜದಲ್ಲಿ ನಡೆಯುವ ಸಾಕಷ್ಟು ಅನ್ಯಾ ಯಗಳನ್ನು ಕಂಡು ಕಣ್ಣೀರಿಟ್ಟಿರುವೆ. ಇದು ವ್ಯಕ್ತಿಯ ತಪ್ಪಲ್ಲ, ಸಮಾಜದ ತಪ್ಪಾಗಿದೆ. ಇಂದಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆಯಿಲ್ಲ. ಶ್ರೀಮಂತಿಕೆ ಹಾಗೂ ದುರಾಸೆಯಿಂದ‌ ಕೂಡಿದ್ದು, ಶ್ರೀಮಂತಿಕೆ ಗಳಿಸುವ ಸ್ವಾರ್ಥಭಾವನೆಯಿಂದಾಗಿ ಕಾನೂನು ವಿರುದ್ಧವಾಗಿ ಪೈಪೋಟಿ ಮೂಲೆ-ಮೂಲೆಗಳಲ್ಲಿ ಪಸರಿಸಿದೆ ಎಂದರು.
ಕಷ್ಟಪಟ್ಟು ಶ್ರಮದ ಹಣದಿಂದ ಸಿಗುವ ಸಂತಸದ ತೃಪ್ತಿ ಮತ್ತೊಂದಿಲ್ಲ. ಕಳೆದ  ದಶಕದಲ್ಲಿ ಅವಲೋಕನ ನಡೆಸಿದಾಗ ಭ್ರಷ್ಟಾಚಾರಗಳು ದಶಕಕ್ಕೊಂದು ನಡೆದ ಪ್ರಮುಖ ಹಗರಣಗಳಲ್ಲಿ ಬೋಫೋರ್ಸ್ ಹಗರಣದಲ್ಲಿ 64 ಕೋಟಿ, ಕಾಮನ್ ವೆಲ್ತ್ ಗೇಮ್ ಹಗರಣದಲ್ಲಿ 74 ಸಾವಿರ ಕೋಟಿ, ಕೋಲ್ ಗೇಟ್ 186000 ಕೋಟಿ, 2 ಜಿ ಸ್ಪೆಕ್ಟ್ರಂ 1,76,000 ಕೋಟಿ ಗಳಷ್ಟು ದೇಶಕ್ಕೆ ನಷ್ಟವಾಗಿದೆ. ಇದಕ್ಕೆ ಅಂಕಿ-ಅಂಶದ ದಾಖಲೆಗಳಿವೆ. ಇದು 1985ರಲ್ಲಿ ರಾಜೀವ್ ಗಾಂಧಿ ಹೇಳಿಕೆಯಂತೆ ದೇಶದ ಅಭಿವೃದ್ದಿಗೆ ಮೀಸಲಿಟ್ಟ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತಿದೆ ಎಂಬ ಹೇಳಿಕೆ ಬೇಸರ ತರಿಸುತ್ತದೆ.
ಲೋಕಾಯುಕ್ತನಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ ತೃಪ್ತಿ ಇದೆ : ನಾನೊಬ್ಬ ನ್ಯಾಯಮೂರ್ತಿ ಯಾಗಿದ್ದುಕೊಂಡು, ಲೋಕಾಯುಕ್ತನಾಗಿ ಮೂರು ಸರ್ಕಾರಗಳು ನನ್ನ ವಿರುದ್ದವಾಗಿದ್ದವು.ಆದರೆ, ನನ್ನನ್ನು  ನೇಮಿಸಿಕೊಂಡ ಮುಖ್ಯಮಂತ್ರಿಯ ವಿರುದ್ದವೇ ಪ್ರಕರಣ ದಾಖಲಿಸಿದೆ. ನಾನೊಬ್ಬ ನಿಸ್ವಾರ್ಥ ಸೇವಕನಾಗಿ ನಿವೃತ್ತನಾಗಿರುವೆ.
ನಾನು ಅನೇಕ ಪ್ರಶಸ್ತಿಗಳನ್ನು ಪಡೆದಿರುವೆ. ಆದರೆ `ಜೆ.ಎಂ.ಇಮಾಂ‌ ರಾಜ್ಯ ಪ್ರಶಸ್ತಿ’ ಶ್ರೇಷ್ಠ ಪ್ರಶಸ್ತಿಯಾಗಿದೆ ಎಂದರು.
ಇಂದಿನ ಸಮಾಜದಲ್ಲಿ ಶಾಂತಿ ಸೌಹಾರ್ದತೆಗಾಗಿ ಹಿರಿಯರು ಹೇಳಿಕೊಟ್ಟ ತೃಪ್ತಿ ಮತ್ತು ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಅನ್ಯಾಯಗಳನ್ನು ಕಂಡು ಕಣ್ಣೀರಿಟ್ಟಿರುವೆ. ಮಾನವೀಯ ಮೌಲ್ಯಗಳನ್ನು ಪೋಷ ಕರು ಮಕ್ಕಳಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಮತ್ತೊಬ್ಬರಿಗೆ ಲಂಚಕೊಡುವುದು ಮತ್ತು ಪಡೆಯುವುದು ಎರಡೂ ತಪ್ಪು. ದೇಶದಲ್ಲಿ ದುರಾಸೆಯ ಪರಿಣಾಮ ಹೆಚ್ಚಾದರೆ, ದೇಶದ ಆರ್ಥಿಕ ಪರಿಸ್ಥಿತಿ ಕುಸಿತವಾಗಿ ಅಶಾಂತಿ ರಣರಂಗದಲ್ಲಿ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಧ್ಯಾಪಕ  ಡಾ.ಜಗದೀಶ್ ಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮ ಜಾತಿ ಎಲ್ಲೇ ಮೀರಿ ಬದುಕಿದ್ದ ರಾಜಕಾರಣಿ ಇಮಾಂ ಸಾಹೇಬರ ಸೇವೆ ಅವಿಸ್ಮರಣೀಯ ಎಂದರು.
ಮೈಸೂರು ಸಂಸ್ಥಾನದಲ್ಲಿ ಬಯಲು ಸೀಮೆ ಚಿತ್ರದುರ್ಗದ ಜನತೆಯ ಬದುಕಿಗೆ ಬಡತನವಿತ್ತು. ಆದರೆ, ಹೃದಯ ಶ್ರೀಮಂತಿಕೆ ಅಪಾರವಾಗಿತ್ತು. ಅಂದಿನ ರಾಜಕಾರಣಿಗಳು ಮೀಸಲಾತಿ, ಗ್ರಾಮೀಣಾಭಿವೃದ್ದಿ, ಶಿಕ್ಷಣ, ಆರೋಗ್ಯ, ನೀರಾವರಿ ಕನಸುಗಳ ದೂರದೃಷ್ಟಿಯನ್ನು ಹೊಂದಿದ್ದರು. ಇಮಾಂ ಸಾಹೇಬರು ಕೇವಲ ಒಬ್ಬ ರಾಜಕಾರಣಿಯಾಗದೇ ಶಿಕ್ಷಣ ತಜ್ಞರಾಗಿ, ಸಾಮಾಜಿಕ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಸಲ್ಲುತ್ತದೆ ಎಂದು ಸ್ಮರಿಸಿದರು.
ಭಾರತ ದೇಶ ಬಹುಸಂಸ್ಕೃತಿಯ ನೆಲೆಬೀಡು. ಸೂಫಿ – ಸಂತರು ನೆಲೆಸಿದ್ದ ನೆಲದಲ್ಲಿ ಪೂರ್ವಜರ ಕಾಲದಿಂದಲೂ ಸಂವೇದನೆ, ಭ್ರಾತೃತ್ವದ ಬದುಕು ನಡೆಸಿದ್ದರು. ಆದರೆ, ಇಂದು ಜಾತಿ – ಧರ್ಮದ ಹೆಸರಲ್ಲಿ ಕಚ್ಚಾಡುವುದು ಮಹನೀಯರಿಗೆ ತೋರುವ ಅಪಮಾನವಾಗಿದೆ ಎಂದು ಹೇಳಿದರು.
ಇದೇ ವೇಳೆ `ಶೌರ್ಯ ಪ್ರಶಸ್ತಿ’ ಪುರಸ್ಕೃತರಾದ ಮಹಿಮಾ ಮಾನಸಿ, ಪಾಲ್ಗುಣಿಯಜ್ಞ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಜೆಎಂ ಇಮಾಂ ಟ್ರಸ್ಟ್‌ನ ಅಧ್ಯಕ್ಷ ಹುಸೇನ್ ಮಿಯಾ ಸಾಬ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪಿಂಜಾರ್, ನದಾಫ್ ಸಂಘದ ಅಧ್ಯಕ್ಷ ಜಲೀಲ್ ಸಾಬ್, ಪ್ರಶಸ್ತಿ ಸಲಹಾ ಸಮಿತಿ ಅಧ್ಯಕ್ಷ ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಸದಸ್ಯರಾದ ಡಿ.ಸಿ.ಮಲ್ಲಿಕಾರ್ಜುನ್, ಡಾ.ದಾದಾಪೀರ್ ನವಿಲೇಹಾಳ್, ಎಂ.ಎಸ್ ಬಸವೇಶ್, ಜೆ.ಯಾದವರೆಡ್ಡಿ, ಕೆ.ಸುಜಾತಮ್ಮ, ಎಂ.ಶಿಲ್ಪಾ, ಆಡಳಿತ ಮಂಡಳಿಯ ಮುನ್ನಾ, ಮೊಹಮದ್ ಷರೀಫ್, ಮಸ್ತಾನ್ ಸಾಬ್ ಹಾಗೂ ಮತ್ತಿತರರಿದ್ದರು.

error: Content is protected !!