ಜಿಲ್ಲೆಯಲ್ಲಿ 249 ಅಪ್ರಾಪ್ತ ಹೆರಿಗೆ ಪ್ರಕರಣ

ಜಿಲ್ಲೆಯಲ್ಲಿ 249 ಅಪ್ರಾಪ್ತ ಹೆರಿಗೆ ಪ್ರಕರಣ

ಆಧಾರ್ ಮಾಹಿತಿಯಿಂದ ಬಯಲಾಯಿತು ಅಪ್ರಾಪ್ತ ವಿವಾಹ ವ್ಯಾಪಕವಾಗಿರುವ ಸುಳಿವು

ವೈದ್ಯರು ಅಪ್ರಾಪ್ತರ ಹೆರಿಗೆ ಬಗ್ಗೆ ಮಾಹಿತಿ ನೀಡದಿದ್ದರೆ ಕ್ರಮ ಎಂದು ಡಿಸಿ ಎಚ್ಚರಿಕೆ

ದಾವಣಗೆರೆ, ಡಿ. 27 – ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯರಾಗಿ ಹೆರಿಗೆಯಾಗುವ 249 ಪ್ರಕರಣಗಳು ದಾವಣಗೆರೆ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಇದು ಬಾಲ್ಯವಿವಾಹ ಸಮಸ್ಯೆ ಹೆಚ್ಚಾಗಿರುವುದನ್ನು ಬೆಳಕಿಗೆ ತಂದಿದೆ.
ಜಿಲ್ಲೆಯಲ್ಲಿ ಈ ವರ್ಷ ಬಾಲ್ಯ ವಿವಾಹದ 41 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 38 ಪ್ರಕರಣಗಳಲ್ಲಿ ಮದುವೆ ಆಗುವುದನ್ನು ತಡೆಯ ಲಾಗಿದೆ. ಮೂರು ಪ್ರಕರಣಗಳಲ್ಲಿ ಮದುವೆಯಾ ಗಿದ್ದು, ಈ ಬಗ್ಗೆ ಎಫ್.ಐ.ಆರ್. ದಾಖಲಿಸಲಾಗಿದೆ.
ಆದರೆ, ಇದಕ್ಕಿಂತ ಹಲವು ಪಟ್ಟು ಹೆಚ್ಚು ಮದುವೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ ಎಂಬುದನ್ನು ಅಪ್ರಾಪ್ತ ವಯಸ್ಸಿನಲ್ಲೇ ಹೆರಿಗೆಯಾದ ಪ್ರಕರಣಗಳು ಹೇಳುತ್ತಿವೆ.
ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನಲ್ಲೇ 249 ಹೆಣ್ಣು ಮಕ್ಕಳಿಗೆ ಹೆರಿಗೆಯಾಗಿರುವುದು, ಆಸ್ಪತ್ರೆ ಯಲ್ಲಿ ನೀಡಲಾದ ಆಧಾರ್ ದಾಖಲೆಗಳಿಂದ ಪತ್ತೆಯಾಗಿದೆ. ಆದರೆ, ಈ ಯಾವುದೇ ಅಪ್ರಾಪ್ತ ಹೆರಿಗೆಗಳ ಬಗ್ಗೆ ವೈದ್ಯರು ಸಂಬಂಧಿಸಿದವರಿಗೆ ಮಾಹಿತಿ ನೀಡಿಲ್ಲ. ಕೇವಲ ಜಿಲ್ಲೆಯಷ್ಟೇ ಅಲ್ಲದೇ, ರಾಜ್ಯಾದ್ಯಂತ ಅಪ್ರಾಪ್ತೆಯರ ಹೆರಿಗೆ ಪ್ರಕರಣಗಳು ನಡೆದಿವೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದವರ ವಿವರಗಳನ್ನು ರಾಜ್ಯ ಮಟ್ಟದಲ್ಲಿ ಪರಿಶೀಲಿಸಿದಾಗ, ಬಾಲ್ಯ ವಿವಾಹ ಹೆಚ್ಚು ವ್ಯಾಪಕವಾಗಿರುವುದು ಕಂಡು ಬಂದಿದೆ.
ಅಪ್ರಾಪ್ತೆಯರು ಹೆರಿಗೆಗಾಗಿ ದಾಖಲಾಗಿದ್ದಾರೆ ಎಂದ ಮೇಲೆ ಮದುವೆಯಾಗದೇ ಇರುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಾಗಿ ಇಂತಹ ಪ್ರಕರಣಗಳ ಬಗ್ಗೆ ಹೆಚ್ಚು ಗಮನ ಹರಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬಾಲ್ಯ ವಿವಾಹ ತಡೆಯುವ ಸಮನ್ವಯ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.
ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಪ್ರಾಪ್ತರು ಹೆರಿಗೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದ ತಕ್ಷಣ ವೈದ್ಯರು ಎಂ.ಎಲ್.ಸಿ. (ವೈದ್ಯಕೀಯ ಕಾನೂನು ಪ್ರಕರಣ) ದಾಖಲಿಸಬೇಕು. ಇಂತಹ ಪ್ರಕರಣಗಳ ಬಗ್ಗೆ ವರದಿ ದಾಖಲಿಸದೇ ಇದ್ದರೆ ವೈದ್ಯರ ಮೇಲೆಯೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಪಘಾತ ಪ್ರಕರಣಗಳಲ್ಲಿ ವೈದ್ಯರು ಕಡ್ಡಾಯವಾಗಿ ಎಂ.ಎಲ್.ಸಿ. ದಾಖಲಿಸುತ್ತಾರೆ. ಅದೇ ರೀತಿ ಅಪ್ರಾಪ್ತರ ಹೆರಿಗೆ ವಿಷಯದಲ್ಲೂ ಕ್ರಮ ವಹಿಸಬೇಕು. ಇಲ್ಲವಾದರೆ ಆರೋಗ್ಯ ಇಲಾಖೆಯ ವಿರುದ್ಧವೇ 249 ಎಫ್.ಐ.ಆರ್. ದಾಖಲಿಸುವ ಪರಿಸ್ಥಿತಿ ಬರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ್ ಎಚ್ಚರಿಸಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಇಂತಹ ಪ್ರಕರಣಗಳ ಬಗ್ಗೆ ವಹಿಸಬೇಕಾದ ಕ್ರಮಗಳ ಕುರಿತು ವೈದ್ಯರಿಗೆ ತರಬೇತಿ ಕೊಡಲಾಗುತ್ತಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಸ್ಥಳೀಯ ಮಟ್ಟದಲ್ಲಿ ಸರ್ಕಾರದ ಕಣ್ಣು – ಕಿವಿ ಇದ್ದಂತೆ. ಅವರು ಅಪ್ರಾಪ್ತರ ಮದುವೆ ತಡೆಯುವಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.
ಆಧಾರ್‌ನಲ್ಲಿ ಮಾತ್ರ ಅಪ್ರಾಪ್ತರು : ಅಪ್ರಾಪ್ತ ತಾಯಂದಿರ 249 ಪ್ರಕರಣಗಳು ಜಿಲ್ಲೆಯಲ್ಲಿ ಹೆರಿಗೆಯ ಸಂದರ್ಭದಲ್ಲಿ ವರದಿಯಾಗಿವೆ. ಈ ಬಗ್ಗೆ ಪರಿಶೀಲಿಸಿದಾಗ 36 ಪ್ರಕರಣಗಳಲ್ಲಿ ತಾಯಂದಿರು ಪ್ರಾಪ್ತ ವಯಸ್ಸಿನವರು ಎಂಬುದು ಕಂಡು ಬಂದಿದೆ. ಆಧಾರ್‌ನಲ್ಲಿ ಇವರ ವಯಸ್ಸನ್ನು ಕಡಿಮೆ ನಮೂದಿಸಲಾಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಅಪ್ರಾಪ್ತರು ಮದುವೆಯಾದ ಸಂದರ್ಭದಲ್ಲಿ ಅದನ್ನು ಮುಚ್ಚಿಡಲು ತಾಳಿ ಹಾಗೂ ಕಾಲುಂಗುರವನ್ನೇ ಧರಿಸದ ಪ್ರಕರಣಗಳೂ ಗಮನಕ್ಕೆ ಬಂದಿವೆ. ಒಂದು ವೇಳೆ ಅಪ್ರಾಪ್ತರು ಗರ್ಭಿಣಿಯಾಗಿರುವುದು ಗಮನಕ್ಕೆ ಬಂದಾಗ ಅವರಿಗೆ ಚಿಕಿತ್ಸೆ ಇಲ್ಲವೇ ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ. ಅವರಿಗೆ ಸೌಲಭ್ಯಗಳನ್ನು ನೀಡುತ್ತಲೇ ಪ್ರಕರಣವನ್ನೂ ದಾಖಲಿಸಬೇಕಾಗುತ್ತದೆ ಎಂದವರು ವಿವರಿಸಿದ್ದಾರೆ.

error: Content is protected !!