ಅವೈಜ್ಞಾನಿಕ ಕೆಳ ಸೇತುವೆಗಳನ್ನು ಸರಿಪಡಿಸಿ

ಅವೈಜ್ಞಾನಿಕ ಕೆಳ ಸೇತುವೆಗಳನ್ನು ಸರಿಪಡಿಸಿ

ಹೆದ್ದಾರಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ಸೆಂ ನಿರ್ದೇಶನ

ದಾವಣಗೆರೆ, ಡಿ. 27 – ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಲಾಗಿರುವ ಅವೈಜ್ಞಾನಿಕ ಕೆಳ ಸೇತುವೆಗಳನ್ನು ಸರಿಪಡಿಸಬೇಕು ಹಾಗೂ ಸರ್ವೀಸ್ ರಸ್ತೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ತಮ್ಮ ಗೃಹ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಶಾಮನೂರು ಬಳಿ ಇರುವ ಕೆಳ ಸೇತುವೆ ಮಾದರಿಯಲ್ಲೇ ಉಳಿದ ಸೇತುವೆಗಳನ್ನೂ ನಿರ್ಮಿಸಬೇಕು ಎಂದು ತಾಕೀತು ಮಾಡಿದರು.
ಹದಡಿ ಮಾರ್ಗದಲ್ಲಿರುವ ರಸ್ತೆಯಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆ. ಈ ಕೆಳ ಸೇತುವೆಯನ್ನು ಸರಿ ಮಾಡುವ ಜೊತೆಗೆ, ಅಲ್ಲಿ ಸರ್ಕಲ್ ನಿರ್ಮಿಸಬೇಕು. ಅಲ್ಲಿನ ನೀರಿನ ಕಾಲುವೆಯನ್ನು ಗಮನದಲ್ಲಿಟ್ಟುಕೊಂಡು, ನೀರಿನ ಹರಿವು ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕೆಳ ಸೇತುವೆ ನಿರ್ಮಾಣವಾಗಬೇಕಿದೆ ಎಂದು ಸಚಿವರು ಹೇಳಿದರು.
ಬನಶಂಕರಿ ಬಡಾವಣೆ, ಎಸ್.ಎಸ್.
ಆಸ್ಪತ್ರೆ ಎದುರು, ಕುಂದುವಾಡ ಹಾಗೂ ಬಾತಿ ಬಳಿಯ ಕೆಳ ಸೇತುವೆಗಳನ್ನು ಸರಿಪಡಿಸಬೇಕು. ಇನ್ನು ಮುಂದೆ ಯಾವುದೇ ಅವೈಜ್ಞಾನಿಕ ಕಾಮಗಾರಿಯಾಗುವುದನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.
ಸರ್ವೀಸ್ ರಸ್ತೆಯ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ಸಂಪರ್ಕ ಕಲ್ಪಿಸಬೇಕು. ಸರ್ವೀಸ್ ರಸ್ತೆ ಇಲ್ಲದೇ ಅಪಘಾತ ಹೆಚ್ಚಾಗುತ್ತಿದೆ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಇಂತಹ ಸಂದರ್ಭದಲ್ಲೂ ಅವೈಜ್ಞಾನಿಕ ಕಾಮಗಾರಿ ಸಲ್ಲದು ಎಂದು ತಿಳಿಸಿದರು.
ಸಾರ್ವಜನಿಕರ ಜೀವಕ್ಕೆ ಬೆಲೆ ಕೊಡುವ ರೀತಿಯಲ್ಲಿ ಹಾಗೂ ಅಪಘಾತಗಳಿಗೆ ಅವಕಾಶವಾಗದ ರೀತಿಯಲ್ಲಿ ಕಾಮಗಾರಿ ನಡೆಯಬೇಕು. ಇಲ್ಲದಿದ್ದರೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಗೌರವ್, ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್, ದೂಡಾ ಆಯುಕ್ತ ಬಸವನಗೌಡ ಕೋಟೂರು, ತಹಶೀಲ್ದಾರ್ ಅಶ್ವತ್ಥ್‌, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!