ದಾವಣಗೆರೆ, ಡಿ. 25- ಸೈದ್ಧಾಂತಿಕವಾಗಿ ಬಿಜೆಪಿಯನ್ನು ಟೀಕಿಸುತ್ತಿದ್ದವರೂ ಕೂಡ ವಾಜಪೇಯಿಯವರನ್ನು ವಿರೋಧಿಸುತ್ತಿರಲಿಲ್ಲ. ಇಂತಹವರೆಲ್ಲರ ಪಾಲಿಗೆ ವಾಜಪೇಯಿ ಅಜಾತ ಶತ್ರುವಾಗಿದ್ದರು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ದಿ. ಅಟಲ್ ಬಿಹಾರಿ ವಾಜಪೇಯಿಯವರ 99ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ಬಿಜೆಪಿಯ ಮೃದು ಹಿಂದುತ್ವದ ಮುಖವಾಗಿದ್ದ ವಾಜಪೇಯಿಯವರು ಈ ದೇಶ ಕಂಡ ಅಪ್ರತಿಮ ನಾಯಕ ಎಂದು ಬಣ್ಣಿಸಿದರು.
ಪ್ರಸ್ತುತ ಬಿಜೆಪಿಯ ಬೆಳವಣಿಗೆಯಲ್ಲಿ ವಾಜಪೇಯಿ ಎಂಬ ಮಹಾನ್ ನಾಯಕನ ಕೊಡುಗೆ ಸಾವಿರದಷ್ಟಿದೆ. ಪಕ್ಷ ಹೆಮ್ಮರವಾಗಿ ಬೆಳೆದು ನಿಲ್ಲಲು ವಾಜಪೇಯಿ ಅವರು ಹಾಕಿದ ಭದ್ರ ಬುನಾದಿಯೇ ಕಾರಣ ಎಂದರೆ ತಪ್ಪಾಗಲಾರದು ಎಂದರು.
ವಾಜಪೇಯಿಯವರು ಇಂದು ನಮ್ಮನೆಲ್ಲ ಬಿಟ್ಟು ದೈಹಿಕವಾಗಿ ಅಗಲಿರಬಹುದು. ಆದರೆ ಅವರ ನೆನಪುಗಳು ಪ್ರತಿಯೊಬ್ಬರಲ್ಲೂ ಅಚ್ಚಳಿಯದೇ ಉಳಿದಿವೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಮಂಜಾನಾಯ್ಕ, ಪಾಲಿಕೆ ವಿರೋಧ ಪಕ್ಷದ ನಾಯಕರಾದ ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಹಿರಿಯ ಮುಖಂಡರಾದ ವೈ. ಮಲ್ಲೇಶ್, ಅಕ್ಕಿ ಪ್ರಭು, ಡಿ.ಸಿ.ಸಿ. ಬ್ಯಾಂಕ್ ಮಾಜಿ ನಿರ್ದೇಶಕ ನಾಗರಾಜಪ್ಪ ಕತ್ತಲಗೆರೆ ಮತ್ತು ಶೇಖರಪ್ಪ, ಶಿವನಗೌಡ ಪಾಟೀಲ್ ಮತ್ತು ಇತರರು ಇದ್ದರು.