ಪ್ರತ್ಯೇಕ ಧರ್ಮ ಎಂಬ ಸಂಚು ತಡೆದಿದ್ದು ಎಸ್ಸೆಸ್‌

ಪ್ರತ್ಯೇಕ ಧರ್ಮ ಎಂಬ ಸಂಚು ತಡೆದಿದ್ದು ಎಸ್ಸೆಸ್‌

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ದಾವಣಗೆರೆ, ಡಿ. 24 – ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳಲು ಮುಂದಾದ ಸಂದರ್ಭದಲ್ಲಿ, ಅದನ್ನು ತಡೆದಿದ್ದು ಅಖಿಲ ಬಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದ ಸಂದರ್ಭದಲ್ಲಿ ನಗರದ ಎಂ.ಬಿ.ಎ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮತ್ತು ಯುವ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನಿಸಲಾಗಿತ್ತು. ಆಗ ಶಾಮನೂರು ಶಿವಶಂಕರಪ್ಪ ನವರು ರಾಜಕಾರಣವನ್ನು ಕಿಂಚತ್ತೂ ಲೆಕ್ಕಿಸದೇ ಈ ಪ್ರಯತ್ನ ತಡೆದರು ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಗೌರವದ ಪ್ರಶ್ನೆ ಬಂದಾಗ ಸಮಾಜದ ಏಳಿಗೆಯೇ ಮುಖ್ಯ ಎಂಬ ನಿಲುವು ತಳೆದರು. ನಮ್ಮ ಸಮಾಜವನ್ನು ಅಡ್ಡದಾರಿಗೆ ತೆಗೆದುಕೊಂಡು ಹೋಗಲು ಕೆಲವರು ನಡೆಸುತ್ತಿರುವ ಯತ್ನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಗಟ್ಟಿಯಾಗಿ ದನಿ ಎತ್ತಿದ ಧೀಮಂತ ನಾಯಕ ಶಾಮನೂರು ಶಿವಶಂಕರಪ್ಪ ಎಂದವರು ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜ ಈಗ ಕವಲು ದಾರಿಯಲ್ಲಿದೆ. ಇಂದು ಸಮಾಜದ ಪರವಾಗಿ ಗಟ್ಟಿಯಾಗಿ ದನಿ ಎತ್ತದೇ ಇದ್ದರೆ, ವೀರಶೈವ ಲಿಂಗಾಯತ ಸಮಾಜ ಇತಿಹಾಸದ ಪುಟ ಸೇರಲಿದೆ ಎಂದವರು ಎಚ್ಚರಿಸಿದರು.

ಕರ್ನಾಟಕ ಸಮಗ್ರ ಅಭಿವೃದ್ಧಿ ಕಾಣಲು ಸರ್ಕಾರಗಳು ಕಾರಣವಲ್ಲ. ಹತ್ತಾರು ದಶಕಗಳಿಂದ ಅನ್ನ ಹಾಗೂ ಶಿಕ್ಷಣ ದಾಸೋಹ ಮಾಡುತ್ತಿರುವ  ಜಗದ್ಗುರುಗಳು ಹಾಗೂ ಸ್ವಾಮೀಜಿಗಳ ಮುಂದಾಲೋಚನೆ ಕಾರಣ. ವೀರಶೈವ ಲಿಂಗಾಯತ ಸಮುದಾಯ ಇಡೀ ರಾಜ್ಯದ ಮುನ್ನಡೆಗೆ ನೆರವಾಗುತ್ತಿದೆ ಎಂದು ವಿಜಯೇಂದ್ರ ಹೇಳಿದರು.

ಇಂತಹ ಸಮಾಜವನ್ನು ರಕ್ಷಿಸಲು ನಾವೆಲ್ಲರೂ ಕೈ ಜೋಡಿಸಬೇಕಿದೆ. ಇಲ್ಲವಾದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಸಮಾಜಕ್ಕೆ ಸಮಸ್ಯೆ ಬಂದಾಗ ನಾವೆಲ್ಲರೂ ಒಂದಾಗಿ ದನಿ ಎತ್ತಬೇಕು ಎಂದವರು ತಿಳಿಸಿದರು.

error: Content is protected !!