ದಾವಣಗೆರೆ, ಡಿ.24- ಒಳ ಪಂಗಡಗಳ ಗುದ್ದಾಟದಿಂದ ಹೊರ ಬಂದು ಒಂದಾಗಿ ಹೆಜ್ಜೆ ಇಟ್ಟಾಗ ಮಾತ್ರ ಈ ಮಹಾ ಅಧಿವೇಶನ ನಡೆಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಸಭಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅವೇಶನದ ಸಮಾರೋಪ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವನ್ನು ಒಂದುಗೂಡಿಸಬೇಕು. ಭಿನ್ನಾಭಿಪ್ರಾಯ ಬದಿಗೊತ್ತಿ ಒಟ್ಟಾಗಿ ಹೋದಾಗ ಮಾತ್ರ ಭವಿಷ್ಯ ಇದೆ ಎಂಬ ಕಾರಣಕ್ಕಾಗಿ ಶಾಮನೂರು ಶಿವಶಂಕರಪ್ಪನವರು ವಿಶೇಷ ಶ್ರಮ ವಹಿಸಿ ಅಧಿವೇಶನ ನಡೆಸುತ್ತಿದ್ದಾರೆ. ಈ ದಿಕ್ಕಿನಲ್ಲಿ ನಾವೆಲ್ಲರೂ ಒಂದಾಗಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಕಡುಬಡವರು, ಹಿಂದುಳಿದವರು ಸೇರಿದಂತೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ. ಹೀಗೆ ಒಟ್ಟಾಗಿ ಮುನ್ನಡೆದಾಗ ಮಾತ್ರ ಸಮಾಜ ಪ್ರಭಲ ಶಕ್ತಿಯಾಗಿ ಹೊರ ಹೊಮ್ಮಲು ಸಾಧ್ಯ ಎಂದು ಹೇಳಿದರು.
ಒಬಿಸಿ ಪಟ್ಟಿಯಲ್ಲಿ ಸಮಾಜವನ್ನು ಸೇರಿಸಬೇಕೆಂಬ ಬಹು ದಿನದ ಹೊರಾಟಕ್ಕೆ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಕೊಡುವುದಾಗಿ ಯಡಿಯೂರಪ್ಪ ಹೇಳಿದರು.
ಮಠ ಮಾನ್ಯಗಳು ಇರದಿದ್ದರೆ ದೇಶ ಎಂದೋ ನಾಶವಾಗುತ್ತಿತ್ತು. ನಮ್ಮ ಸಂಸ್ಕೃತಿಯ ಬಲಿಷ್ಠ ಬೇರುಗಳಂತೆ ಮಠ ಮಾನ್ಯಗಳು ಕಾರ್ಯ ನಿರ್ವಹಿಸುತ್ತಿವೆ. ಅಕ್ಷರ, ಆರೋಗ್ಯ ದಾಸೋಹದ ಮೂಲಕ ಸರ್ಕಾರದ ಹೊಣೆಯನ್ನು ಕಡಿಮೆ ಮಾಡಿವೆ. ಈ ಹಿನ್ನೆಲೆಯಲ್ಲಿ ಎಷ್ಟೇ ಟೀಕೆಗಳು ಬಂದರೂ ತಾವು ಮುಖ್ಯಮಂತ್ರಿಗಳಾಗಿದ್ದಾಗ ಮಠಗಳಿಗೆ ಅನುದಾನ ಕೊಡುವ ಕಾರ್ಯ ಮುಂದುವರೆಸಿದ್ದಾಗಿ ಅವರು ಹೇಳಿದರು.
ವೀರಶೈವ-ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ದೊರೆಯದಿರುವ ಬಗ್ಗೆ ದೂರುಗಳಿವೆ. ಸರ್ಕಾರದ ಸಚಿವರು ಸಮಾಜದ ಅಧಿಕಾರಿಗಳಿಗೆ ಸೂಕ್ತ ಜವಾಬ್ದಾರಿ ನೀಡಲು ಹಿಂದೇಟು ಹಾಕಬಾರದು ಎಂದು ಹೇಳಿದರು.
ಮಹಾಧಿವೇಶನದಲ್ಲಿ 8 ನಿರ್ಣಯಗಳು
ನಿರ್ಣಯ ಮಂಡಿಸಿದ ಎಸ್ಸೆಸ್
ಕಳೆದ ಎರಡು ದಿನಗಳ ಕಾಲ ನಡೆದ ವೀರಶೈವ-ಲಿಂಗಾಯತ ಮಹಾಸಭಾದ ಮಹಾ ಅಧಿವೇಶನದಲ್ಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು 8 ನಿರ್ಣಯಗಳನ್ನು ಮಂಡಿಸಿದರು.
ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ `ಮಹಾಸಭೆ’ ಹಾಗೂ ನಮ್ಮ ಸಮಾಜ ಸದಾ ಕಟಿಬದ್ಧವಾಗಿದ್ದು, ಅಂತಹ ಯಾವುದೇ ಹೋರಾಟ, ಪ್ರಯತ್ನಗಳಿಗೆ ಈ ಹಿಂದಿನಂತೆಯೇ ಪ್ರೋತ್ಸಾಹ, ಬೆಂಬಲ ನೀಡುತ್ತದೆ.
ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು.
ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಒಳಗೊಂಡಂತೆ ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ (ಓ.ಬಿ.ಸಿ.) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಭಾರತ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಮತ್ತು ಕೇಂದ್ರ ಸರ್ಕಾರ ಈ ಶಿಫಾರಸ್ಸನ್ನು ಅಂಗೀಕರಿಸಬೇಕು.
ಜಾತಿ ಜನಗಣತಿ ಸುಮಾರು 8 ವರ್ಷಗಳಷ್ಟು ಹಳೆಯ ದಾಗಿದ್ದು, ಅಧಿಕೃತವಾಗಿ ಅಂಗೀಕಾರವಾಗುವ ಮೊದಲೇ ಅದರಲ್ಲಿನ ಅಂಶಗಳು ಸೋರಿಕೆಯಾಗಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳದೆ, ವೀರಶೈವ – ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಒಳಗೊಂಡಂತೆ ವಾಸ್ತವಿಕತೆಯ ಮತ್ತು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವಿಕೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು.
ಜನ ಗಣತಿಯ ವೇಳೆ ನಮ್ಮ ಸಮಾಜದ ಬಾಂಧವರು ಹಿಂದು ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸದೆ, ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸಬೇಕು.
ರೈತರಿಗೆ ಅನುಕೂಲ ಆಗುವಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯ.
ಮಾಜಿ ಮುಖ್ಯಂಮತ್ರಿ ಎಸ್. ನಿಜಲಿಂಗಪ್ಪನವರು ವಾಸವಿದ್ದ ಚಿತ್ರದುರ್ಗದ ಅವರ ನಿವಾಸವನ್ನು ಸರ್ಕಾರ ಖರೀದಿಸಿ, ಸಂರಕ್ಷಿಸಿ, ಶಾಶ್ವತ ಸ್ಮಾರಕ ನಿರ್ಮಾಣ ಮಾಡಬೇಕು. ದಿ. ನಿಜಲಿಂಗಪ್ಪನವರ ಪುಣ್ಯ ಸ್ಮರಣೆಯ ದಿನವಾದ ಆಗಸ್ಟ್ 8, 2024ರೊಳಗೆ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸಬೇಕು.
ಮಹಾಸಭಾದ 24ನೇ ಮಹಾಧಿವೇಶ ಯಶಸ್ವಿಯಾಗಿ ನಡೆಯಲು ಕಾರಣ ಕರ್ತರಾದ ಸ್ವಾಮೀಜಿಗಳು, ಮುಖಂಡರು, ಗಣ್ಯರು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಮರ್ಪಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.
ಸರ್ಕಾರವು ಯಾವುದೇ ಒಂದು ವರ್ಗವನ್ನು ಅತಿಯಾಗಿ ಓಲೈಸದೆ, ತುಷ್ಠೀಕರಣ ಮಾಡದೆ ಲಭ್ಯವಿರುವ ಅನುದಾನವನ್ನು ಸೂಕ್ತವಾಗಿ ಹಂಚಿಕೆ ಮಾಡುವ ಮೂಲಕ ಎಲ್ಲರ ವಿಶ್ವಾಸ ಗಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಪಕ್ಷ ಬೇಧ ಮರೆತು ಸಮಾಜ ಸಂಘಟನೆ ಯಲ್ಲಿ ತೊಡಗಿಸಿಕೊಂಡಿರುವ ಶಾಮನೂರು ಶಿವಶಂಕರಪ್ಪ ನವರ ಕಾರ್ಯವನ್ನು ಶ್ಲ್ಯಾಘಿಸಿ ದ ಯಡಿಯೂರಪ್ಪ, ಅವರ ಮುಂದಿನ ಎಲ್ಲಾ ಕಾರ್ಯಗಳಿಗೂ ಬೆಂಬಲ ನೀಡುವುದಾಗಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡುತ್ತಾ, ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಮಾತನಾಡಿ, ಮಹಾ ಅಧಿವೇಶನದಲ್ಲಿ ಕೈಗೊಂಡಿರುವ ಎಲ್ಲಾ ನಿರ್ಣಯಗಳನ್ನು ಸಮಾಜದ ಮಗಳಾಗಿ, ಸಚಿವೆಯಾಗಿ ಬೆಂಬಲಿಸುವುದಾಗಿ ಹೇಳಿದರು.
12ನೇ ಶತಮಾನದಲ್ಲಿಯೇ ವಿಶ್ವಕ್ಕೆ ದಾರಿ ತೋರಿಸಿದ ಬಸವಣ್ಣನವರು ಹುಟ್ಟುಹಾಕಿದ ಸಮಾಜ ನಮ್ಮದು. ಇಂದು ನಮ್ಮೆಲ್ಲಾ ಒಳ ಪಂಗಡಗಳು ಒಂದಾಗುವ ಕಾಲ ಬಂದಿದೆ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಒಂದಾಗಲೇ ಬೇಕಿದೆ. ಆಗ ಮಾತ್ರ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡುತ್ತಾ, ಕೈಯಲ್ಲಿರುವ ಐದು ಬೆರಳುಗಳನ್ನು ಒಗ್ಗೂಡಿಸಿ ಹೇಗೆ ಸುಲಭವಾಗಿ ಕೆಲಸ ಮಾಡಬಹುದೋ ಹಾಗೆ, ಎಲ್ಲಾ ಒಳ ಪಂಗಡಗಳು ಒಂದಾದಾಗ ಸಮಾಜಕ್ಕೆ ಬಲ ಬರುತ್ತದೆ ಎಂದು ನುಡಿದರು.
ಬೇರೆ ಬೇರೆ ಮರದ ಕಟ್ಟಿಗೆಯನ್ನು ಸುಟ್ಟಾಗ ಅದು ಹೇಗೆ ಬೂದಿಯಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತದೋ ಹಾಗೆಯೇ ಲಿಂಗಧಾರಣೆಯಾದಾಗ ಮನುಷ್ಯನೂ ತನ್ನ ಮೂಲ ಸ್ವರೂಪ ಕಳೆದಕೊಂಡು ಕೇವಲ ವೀರಶೈವ ಲಿಂಗಾಯತನಾಗುತ್ತಾನೆ. ಈ ತತ್ವಸಿದ್ಧಾಂತವನ್ನೇ ಮಹಾಸಭಾ ಬಯಸುತ್ತದೆ ಎಂದು ತಿಳಿಸಿದರು.
ವೀರಶೈವ ಮಹಾಸಭಾವೇ ಸಮಾಜದ ಮುಖಂಡರುಗಳ ಮೂಲಕ ತಳ ಮಟ್ಟದಿಂದ ಜಾತಿ ಗಣತಿ ಮಾಡಿ, ಅಂಕಿ ಅಂಶಗಳನ್ನು ಇಟ್ಟುಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಅಕ್ಕಮಹಾದೇವಿ, ಹೇಮರಡ್ಡಿ ಮಲ್ಲಮ್ಮ ಹಾಗೂ ಕಿತ್ತೂರು ಚನ್ನಮ್ಮ ಜಯಂತಿಯನ್ನು ಪ್ರತ್ಯೇಕ ದಿನಗಳಲ್ಲಿ ಆಚರಿಸದೆ, ಒಂದೇ ದಿನ ಆಚರಿಸುವಂತಾಗಬೇಕು ಎಂದರು.
ಶಿರಹಟ್ಟಿಯ ಶ್ರೀ ಮಹಾರಾಜ ನಿರಂಜನ ಜಗದ್ಗುರು ಪಕೀರ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಪಾಂಡೋಮಟ್ಟಿಯ ಶ್ರೀ ಗುರುಬಸವ ಮಹಾಸ್ವಾಮೀಜಿ, ಕನಕಪುರದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಮಹಾಸಭೆಯ ಹಿರಿಯ ಉಪಾಧ್ಯಕ್ಷ ಡಾ.ಎನ್. ತಿಪ್ಪಣ್ಣ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಬಿ. ಖಂಡ್ರೆ, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಉದ್ಯಮಿ ಅಥಣಿ ವೀರಣ್ಣ, ಬಿ.ಎಸ್. ಉಮಾಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸೌಮ್ಯ ಸತೀಶ್ ಪ್ರಾರ್ಥಿಸಿದರು. ಟಿ.ಬಿಜಿ. ಸುರೇಶ್ ಸ್ವಾಗತಿಸಿದರು. ಕರೇಶಿವಪ್ಳ ಸಿದ್ದೇಶ್ ವಂದಿಸಿದರು.