ಒಂದಾಗಿ ಒ.ಬಿ.ಸಿ. ಬೇಡಿಕೆ ಮುಂದಿಡಬೇಕಿದೆ

ಒಂದಾಗಿ ಒ.ಬಿ.ಸಿ. ಬೇಡಿಕೆ ಮುಂದಿಡಬೇಕಿದೆ

ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಡಿ. 24 – ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ಹಾಗೂ ಒಳಪಂಗಡಗಳ ಸ್ವಾಮೀಜಿಗಳು ಸೇರಿಕೊಂಡು ಒಂದಾಗಿ ಕೇಂದ್ರ ಸರ್ಕಾರದ ಒ.ಬಿ.ಸಿ. ಮೀಸಲಾತಿಗೆ ಬೇಡಿಕೆ ಮುಂದಿಡಬೇಕಿದೆ. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾದ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 24ನೇ ಮಹಾ ಅಧಿವೇಶನದ ಧಾರ್ಮಿಕ ಅಧಿವೇಶನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪಂಚಪೀಠದ ಜಗದ್ಗುರುಗಳು ಎಲ್ಲಾ ವರ್ಗಗಳ ಸಮಾಜದ ಮುಖಂಡರ ಜೊತೆಗೂಡಿ ಕೇಂದ್ರದಿಂದ ಒ.ಬಿ.ಸಿ. ಮೀಸಲಾತಿ ಪಡೆಯುವ ಕುರಿತು ಚರ್ಚಿಸಿದ್ದೇವೆ. ವೀರಶೈವ ಲಿಂಗಾಯತ ಮಹಾಸಭಾ ಸಹ ಇದೇ ವಿಷಯವನ್ನು ಮುಂಚೂಣಿಗೆ ತರುತ್ತಿದೆ ಎಂದವರು ಹೇಳಿದರು.

ಜಾತಿಗಳನ್ನು ಬಿಡುವಂತೆ ಬಸವಣ್ಣನವರು ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದರು. ಆದರೆ, ವೀರಶೈವ ಲಿಂಗಾಯತರು ವೃತ್ತಿ ಆಧರಿತ ಒಳಪಂಗಡಗಳನ್ನೇ ಜಾತಿಗಳಾಗಿ ಮುಂದುವರೆಸಿಕೊಂಡು ಬಂದರು. ಈಗ ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಪರಿಸ್ಥಿತಿ ಆಗಿದೆ. ಒಳಪಂಗಡ ಕೈ ಬಿಡದ ಹೊರತು ಸಮಾಜ ಬಲಿಷ್ಠವಾಗುವುದಿಲ್ಲ ಎಂದು ಶ್ರೀಗಳು ಹೇಳಿದರು.

ದೇಶಾದ್ಯಂತ ವೀರಶೈವ ಲಿಂಗಾಯತ ಸಮುದಾಯದವರಿದ್ದಾರೆ. ಆ ಎಲ್ಲರನ್ನೂ ಒಗ್ಗೂಡಿಸಲು ಮಹಾಸಭಾ ಕ್ರಮ ತೆಗೆದುಕೊಳ್ಳಬೇಕಿದೆ. ಕರ್ನಾಟಕದ ಹೊರಗಿನ ಸಮುದಾಯಗಳ ಪ್ರತಿನಿಧಿಗಳನ್ನು ಆಹ್ವಾನಿಸಬೇಕಿದೆ ಎಂದು ಸ್ವಾಮೀಜಿ ತಿಳಿಸಿದರು.

ಧಾರ್ಮಿಕ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗದ ಆನಂದಪುರಂನ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮಠ ಪರಂಪರೆಗಳು ಮಠಗಳಿಗೆ ಸೀಮಿತವಾಗಬೇಕು. ಹೊರಗಡೆ ಬಂದಾಗ ಸ್ವಾಮೀಜಿಗಳೆಲ್ಲರೂ ಒಂದಾಗಬೇಕು ಎಂದು ಹೇಳಿದರು.

ಲಿಂಗಾಯತ ನಿಂತಿರುವುದೇ ಮಠಗಳ ಮೇಲೆ. ಹೀಗಾಗಿ ಸಮಾಜ ಬೆಳೆಯಬೇಕಾದರೆ ಮಠಗಳು ಬೆಳೆಯಬೇಕಿದೆ. ಮಠಾಧೀಶರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಠಗಳ ಶಾಲೆಗಳಲ್ಲಿ ಅಧ್ಯಯನ ಮಾಡುವ ಬಹುತೇಕರು ಲಿಂಗಾಯತೇತರರೇ ಆಗಿದ್ದಾರೆ. ಲಿಂಗಾಯತ ಸಮಾಜ ಬೆಳೆದಷ್ಟೂ ಇಡೀ ಸಮಾಜ ಬೆಳೆಯಲು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದರು.

ಕೊಟ್ಟೂರು ಸಂಸ್ಥಾನ ಮಠದ ಜಗದ್ಗುರು ಶ್ರೀ ಅನ್ನದಾನೀಶ್ವರ ಮಹಾಶಿವಯೋಗಿಗಳು ಮಾತನಾಡಿ, ಲಿಂಗಾಯತ ಹಾಗೂ ವೀರಶೈವ ಎರಡೂ ಒಂದೇ ಆಗಿದೆ. ಅಂಗದ ಮೇಲೆ ಲಿಂಗ ಧರಿಸುವವನು ಲಿಂಗಾಯತ. ಅಷ್ಟಾವರಣ, ಷಟ್‌ಸ್ಥಳ, ಪಂಚಾಚಾರಗಳನ್ನು ಪಾಲಿಸುವವನೇ ವೀರಶೈವ ಎಂದು ವಿಶ್ಲೇಷಿಸಿದರು.

ಹಾವೇರಿಯ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಕೇವಲ ಶ್ರೀಮಂತರು ಹಾಗೂ ಮೇಲ್ಜಾತಿಯವರಿಗೆ ಸೀಮಿತವಾಗಿತ್ತು. ಆ ಸಂದರ್ಭದಲ್ಲಿ ಹಾನಗಲ್ ಕುಮಾರೇಶ್ವರು ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಲು ವೀರಶೈವ ಮಹಾಸಭಾ ಸ್ಥಾಪಿಸಿದರು. ಶರಣ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದರು ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧಾರ್ಮಿಕ ಅಧಿವೇಶನ ಉದ್ಘಾಟಿಸಿದರು.

ಕಾರ್ಯಕ್ರಮದ ವೇದಿಕೆಯ ಮೇಲೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಬಾಳೆಹೊಸೂರಿನ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಚಿಕ್ಕಮಗಳೂರಿನ ಬಸವ ತತ್ವಪೀಠದ ಶ್ರೀ ಬಸವ ಮರುಳಸಿದ್ದಸ್ವಾಮೀಜಿ, ವಿಭೂತಿಪುರ ಸಂಸ್ಥಾನ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗಾದ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬೀದರ್‌ನ ಶ್ರೀ ರಾಜಶೇಖರ ಗೋರ್ಟಾ ಸ್ವಾಮೀಜಿ, ಮುಖಂಡರಾದ ಅಲ್ಲಂ ವೀರಭದ್ರಪ್ಪ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ಯತೀಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!