ಲಿಂಗಾಯತ ಜಾತಿ ಅಲ್ಲ, ಅದೊಂದು ತತ್ವ-ಸಿದ್ಧಾಂತ

ಲಿಂಗಾಯತ ಜಾತಿ ಅಲ್ಲ, ಅದೊಂದು ತತ್ವ-ಸಿದ್ಧಾಂತ

ಜಿಲ್ಲಾ ಶಸಾಪ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ದಾವಣಗೆರೆ, ಡಿ. 19- ಲಿಂಗಾಯತ ಜಾತಿ ಅಲ್ಲ, ಅದೊಂದು ತತ್ವ-ಸಿದ್ಧಾಂತ. ಯಾರೂ ಆ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿ ಅಂಗದ ಮೇಲೆ ಲಿಂಗ ಧರಿಸಿ ನಿತ್ಯ ಪೂಜೆ ಮಾಡುತ್ತಾರೋ ಅವರೇ ನಿಜವಾದ ಲಿಂಗಾಯತರು ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ಇವರ ವತಿಯಿಂದ ಏರ್ಪಡಿಸಿದ್ದ ದಾವಣ ಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹುಟ್ಟಿನಿಂದ ಲಿಂಗಾಯತ ಎಂದು ಇರುವುದಿಲ್ಲ. ಬದಲಾಗಿ ಸಾಧನೆ, ಅರಿವಿನ ಮೂಲಕ ಬರುವಂತಹದ್ದು. ನಮ್ಮದು ಲಿಂಗಾಯತ ಧರ್ಮ, ಬಸವ ಧರ್ಮ, ವಿಶ್ವ ಧರ್ಮ ಎಂದು ಹೇಳಿದರೆ ಪ್ರಯೋಜವಾಗುವುದಿಲ್ಲ. ಬದಲಾಗಿ ಬಸವ ತತ್ವಗಳನ್ನು ಆಚರಣೆಗೆ ತರಬೇಕು. ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳ ಬೇಕೆಂದರು.

ಬಸವ ಪರಂಪರೆಯನ್ನು ಒಪ್ಪಿಕೊಂಡವರು ವೈದಿಕ ಪರಂಪರೆಯನ್ನು ದೂರವಿಡಬೇಕು. ವೈದಿಕ ಮತ್ತು ಬಸವ ಪರಂಪರೆಯ ನಡುವೆ ತುಂಬಾ ವ್ಯತ್ಯಾಸವಿದೆ. ವೈದಿಕದ ಕಡೆ ಅಥವಾ ಬಸವ ಪರಂಪರೆ ಎರಡೂ ಕಡೆ ಎಂಬ ದ್ವಂದ್ವ ಭಾವ ಬೇಡ. ಹೀಗಿದ್ದರೆ ತತ್ವಕ್ಕೆ ಬದ್ಧರಾಗಲು ಸಾಧ್ಯವಿಲ್ಲ ಎಂದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ತಳ ಸಮುದಾಯಗಳನ್ನು ಅಪ್ಪಿಕೊಂಡು ಸಮ ಸಮಾಜದ ನಿರ್ಮಾಣಕ್ಕೆ ಪ್ರಯತ್ನ ಮಾಡಿದರು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ ದಾವಣಗೆರೆ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಳ್ಳಬೇಕು. ಇಲ್ಲಿ ಮಾಡಿದ ಪ್ರತಿಜ್ಞೆ ಕೂಡ ರಾಜಕೀಯ ಪ್ರಮಾಣದಂತೆ ಆಗಬಾರದು. ಇದಕ್ಕೆ ಸಂಬಂಧಿಸಿದ ವಚನಗಳನ್ನು ವಿವರಿಸಿದರೆ ಹಲವರ ಕಣ್ಣು ಕೆಂಪಾಗುತ್ತವೆ ಎಂದು ತಿಳಿಸಿದರು.

ಮನಸ್ಸು, ಬುದ್ಧಿ, ಹೃದಯ, ವಿವೇಕ ಏನು ಹೇಳುತ್ತವೆಯೋ ಅದನ್ನು ಕೇಳಬೇಕು. ಅದಕ್ಕೆ ಅನುಗುಣವಾಗಿ ನಡೆದುಕೊಂಡಾಗ ನಾವು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಜನ ಮೆಚ್ಚುವ ಬದುಕಿಗಿಂತ ಮನ ಮೆಚ್ಚುವಂತೆ ಬದುಕು ಸಾಗಿಸಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ಚನ್ನಗಿರಿ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಹೆಚ್.ಎಸ್. ಮಲ್ಲಿಕಾರ್ಜುನಪ್ಪ ಅವರು `ನಡೆ-ನುಡಿಗಳ ಶುದ್ಧಿ’ ಕುರಿತು ಮಾತನಾಡಿ, ಶರಣರ ನಡೆ-ನುಡಿ ಒಂದಾಗದಿದ್ದಲ್ಲಿ ಬಸವ ತತ್ವದಿಂದ ಸಂಪೂರ್ಣ ದೂರವಿದ್ದೇವೆ ಎಂದರ್ಥ. ದ್ವಂದ್ವ ಮನೋಭಾವನೆಯಿದ್ದರೆ ತತ್ವಕ್ಕೆ ಬದ್ಧರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಲಿಂಗಾಯತರೆಲ್ಲರೂ ಕಾಯಕ ಮಾಡಿ ಜೀವಿಸಬೇಕು. ಕಾಯಕವಿದ್ದಲ್ಲಿ ಕೈಲಾಸ ಎಂದು ಶರಣರು ಹೇಳಿದ್ದಾರೆ. ಮೊದಲು ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಲಿಂಗ ಧರಿಸಿ, ಗುಡಿ-ಗುಂಡಾರಗಳಿಗೆ ಅಲೆಯುವುದನ್ನು ತಪ್ಪಿಸಬೇಕು. ನಿನ್ನಲ್ಲಿ ನೀನು ದೇವರನ್ನು ಕಾಣು. ಬಸವ ತತ್ವ ಅನುಯಾಯಿಗಳಾದ ನಾವುಗಳು ಚಾಚೂ ತಪ್ಪದೇ ಪಾಲಿಸಬೇಕು ಎಂದು ಹಿತ ನುಡಿದರು.

ಪರಿಷತ್ತಿನ ಗೌರವಾಧ್ಯಕ್ಷ ಹೆಚ್.ಆರ್. ಲಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು. ರೈತ ಹೋರಾಟಗಾರ ಎನ್.ಜಿ. ಪುಟ್ಟಸ್ವಾಮಿ, ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಬಿ. ಕೊಟ್ರೇಶ್, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಬಿ. ರುದ್ರಗೌಡ, ಕೋಶಾಧಿಕಾರಿ ಕಲಿವೀರ ಕಳ್ಳಿಮನಿ ಮತ್ತಿತರರು ಉಪಸ್ಥಿತರಿದ್ದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅವರು ನೂತನ ಅಧ್ಯಕ್ಷ ರುದ್ರಗೌಡ ಮತ್ತವರ ತಂಡಕ್ಕೆ ದೀಕ್ಷಾ ಬೋಧನೆ ಮಾಡಿದರು. 

ಬಸವ ಕಲಾ ಲೋಕದ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎನ್.ಎಸ್. ರಾಜು ಸ್ವಾಗತಿಸಿದರು. ವಿಶ್ವ ಮಾನವ ಮಂಟಪ ಸಂಸ್ಥಾಪಕ ಆವರಗೆರೆ ರುದ್ರಮುನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!