ದಾವಣಗೆರೆ, ಡಿ.19- ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಕೋವಿಡ್ನ ರೂಪಾಂತರ ತಳಿಯಾಗಿರುವ ಜೆಎನ್-1 ಪತ್ತೆಯಾಗಿದ್ದು, ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮತ್ತು ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಪಾಲಿಸಲು ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರು ಆತಂಕಪಡದೇ ಎಲ್ಲಾ ಮುಂ ಜಾಗ್ರತಾ ಕ್ರಮ ಅನುಸರಿಸುವಂತೆ ಜಿಲ್ಲಾಧಿ ಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.
ಅವರು, ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ನ ಮೊದಲ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್ ರೂಪಾಂತರಿ ತಳಿಯ ಪತ್ತೆಯಾಗಿರುವುದರಿಂದ ರಾಜ್ಯದಲ್ಲಿ ಮುಂಜಾಗ್ರತೆ ವಹಿಸಬೇಕಾಗಿದೆ. ರಾಜ್ಯದಲ್ಲಿ 70 ಸಕ್ರಿಯ ಪ್ರಕರಣಗಳಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿರುವುದಿಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.
ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸೋಂಕಿನ ಲಕ್ಷಣಗಳಿರುವವರು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಮತ್ತು ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಕಿಡ್ನಿ, ಹೃದಯ, ಲಿವರ್ ಸಮಸ್ಯೆ ಯಿಂದ ಬಳಲುತ್ತಿರುವವರು, ಗರ್ಭೀಣಿ ಯರು, ತಾಯಂದಿರು ಹೊರಾಂಗಣ ಪ್ರದೇಶ ಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು. ಅಗತ್ಯ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ತೆರಳದಂತೆ ಕ್ರಮ ವಹಿಸುವುದು ಅಗತ್ಯವಾಗಿದೆ ಎಂದರು.
ಆರೋಗ್ಯ ಸಮಸ್ಯೆ ಇರುವವರು ಮನೆಯಲ್ಲಿರುವುದು ಸೂಕ್ತವಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಸ್ವಯಂ ನಿಯಂತ್ರಣ ಹೊಂದುವ ಮೂಲಕ ಎಚ್ಚರಿಕೆ ವಹಿಸಬೇಕು. ಉತ್ತಮ ವೈಯಕ್ತಿಕ ಸ್ವಚ್ಛತೆ, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದನ್ನು ಮಾಡಬೇಕು.
ಔಷಧ ದಾಸ್ತಾನು ಮಾಡಲು ಸೂಚನೆ : ಕೋವಿಡ್ ವರದಿಯ ಹಿನ್ನೆಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಬೇಕಾದ ಔಷಧಗಳ ದಾಸ್ತಾನು ಮಾಡಲು ಮತ್ತು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ಗಳನ್ನು ಸಿದ್ದ ಮಾಡಿಟ್ಟುಕೊಂಡು ಚಿಕಿತ್ಸೆಗೆ ಬೇಕಾದ ಆಕ್ಸಿಜನ್, ವೆಂಟಿಲೇಟರ್ಗಳನ್ನು ಸಿದ್ದಮಾಡಿಕೊಂಡಿರಬೇಕು. ಕೋವಿಡ್ ಪತ್ತೆಗಾಗಿ ರಾಪಿಡ್ ಕಿಟ್ ಮತ್ತು ಆರ್ಟಿಪಿಸಿಆರ್ ಲ್ಯಾಬ್ ಸಿದ್ದಮಾಡಿಕೊಳ್ಳಲು ಆರೋಗ್ಯಾಧಿಕಾರಿಗಳಿಗೆ ತಿಳಿಸಿ, ಕೋವಿಡ್ ಚಿಕಿತ್ಸೆ ಬಗ್ಗೆ ವೈದ್ಯರು ಮತ್ತು ಇತರೆ ಸಿಬ್ಬಂದಿಗಳಿಗೆ ತರಬೇತಿ ಏರ್ಪಡಿಸಲು ತಿಳಿಸಿದರು.
ಐಎಲ್ಐ, ಸಾರಿ ಪ್ರಕರಣ : ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಈ ಪ್ರಕರಣಗಳು ಹೆಚ್ಚಲಿದ್ದು, ಆತಂಕಪಡುವ ಅಗತ್ಯವಿರುವುದಿಲ್ಲ. ಆದರೂ ಸಹ ಬಹಳ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಇಂತಹ ಪ್ರಕರಣಗಳು ಕಂಡು ಬಂದಾಗ ಎಕ್ಸ್ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಲ್.ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಚಿಗಟೇರಿ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ನಾಗೇಂದ್ರಪ್ಪ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ರಾಘವನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರುದ್ರಸ್ವಾಮಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಮಂಜುನಾಥ್ ಪಾಟೀಲ್, ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್ ಉಪಸ್ಥಿತರಿದ್ದರು.