ಹಿಮೋಫಿಲಿಯಾಕ್ಕೆ ಮುಂದುವರೆದ ರಾಷ್ಟ್ರಗಳಲ್ಲಿ ದೊರೆಯುವ ಚಿಕಿತ್ಸೆ ನಮ್ಮಲ್ಲೂ ಸಿಗುವಂತಾಗಬೇಕು

ಹಿಮೋಫಿಲಿಯಾಕ್ಕೆ ಮುಂದುವರೆದ ರಾಷ್ಟ್ರಗಳಲ್ಲಿ ದೊರೆಯುವ ಚಿಕಿತ್ಸೆ ನಮ್ಮಲ್ಲೂ ಸಿಗುವಂತಾಗಬೇಕು

ದಾವಣಗೆರೆ, ಡಿ.15- ಹಿಮೋಫಿಲಿಯಾ ಕಾಯಿಲೆಗೆ ಮುಂದುರೆದ ರಾಷ್ಟ್ರಗಳಲ್ಲಿ ಸಿಗುತ್ತಿರುವ ಔಷಧೋಪಚಾರ ನಮ್ಮ ದೇಶದಲ್ಲಿಯೂ ದೊರೆಯುವಂತಾಗಬೇಕು ಎಂದು ಹಿಮೋ ಫಿಲಿಯಾ ಪೀಡಿತ ವಿದ್ಯಾರ್ಥಿಗಳು ಹೇಳಿದರು.

ನಗರದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ವತಿಯಿಂದ ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ‘ಬ್ಲೂ ಬೆಲ್’ ಹಿಮೋಫಿಲಿಯಾ ಯೂತ್ ಕ್ಯಾಂಪ್-2023ರ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಮಾಧ್ಯಮದವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹಿಮೋಫಿಲಿಯಾ ಪೀಡಿತ ವಿದ್ಯಾರ್ಥಿಗಳು ಪಾಲ್ಗೊಂಡು ಅನಿಸಿಕೆಗಳನ್ನು ಹಂಚಿಕೊಂಡರು.

‘ಶಿಕ್ಷಕರು ಹೊಡೆಯಲು ಬಂದರೆ ನನಗೆ ಹಿಮೋಫಿಲಿಯಾ ಇದೆ. ಹೊಡೆಯ ಬೇಡಿ ಎಂದು ಸತ್ಯ ಹೇಳಿದರೆ ನನ್ನನ್ನು ಪ್ರತ್ಯೇಕಿಸಿ ನೋಡುತ್ತಾರೆ ಎಂಬ ಭಯ. ಇತ್ತ ಹೊಡೆತ ತಿಂದರೆ ರಕ್ತಸ್ರಾವದ ಭಯ’ ಎಂದು ವಿದ್ಯಾರ್ಥಿಯೊಬ್ಬ ತನ್ನ ಸಂಕಷ್ಟ ತೋಡಿಕೊಂಡ.

ಹಿಮೋಫಿಲಿಯಾ ಇದ್ದೂ ಕೆಲವರು ಸಾಧನೆ ಮಾಡಿದ್ದಾರೆ. ಅಂತವರಿಂದ ಮಾರ್ಗ ದರ್ಶನ ಅಥವಾ ಆತ್ಮ ವಿಶ್ವಾಸ ಮೂಡಿಸುವ ಅಗತ್ಯವಿದೆ. ಆ ಕೆಲಸವನ್ನು ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಮಾಡಲಿ ಎಂಬುದು ಮತ್ತೋರ್ವ ವಿದ್ಯಾರ್ಥಿಯ ಆಶಯವಾಗಿತ್ತು.

ಕಾಯಿಲೆ ಇದ್ದವರಿಗೆ ಉದ್ಯೋಗದಲ್ಲೂ ಮೀಸಲಾತಿ ಸಿಕ್ಕರೆ ಉತ್ತಮ ಉದ್ಯೋಗ ಕಂಡು ಕೊಳ್ಳಬಹುದು ಎಂಬ ಮಾತು ಕೇಳಿ ಬಂತು. ಶಿಕ್ಷಣಕ್ಕಿಂತ ಮೊದಲು ನಮಗೆ ಸರಿಯಾದ ಚಿಕಿತ್ಸೆ ಬೇಕು. ಅನುಕಂಪಕ್ಕಿಂತ ಅವಕಾಶ ಕೊಡ ಬೇಕು ಎಂದಿದ್ದು ಮತ್ತೋರ್ವ ವಿದ್ಯಾರ್ಥಿ.

ಚಿಕ್ಕಮಕ್ಕಳಲ್ಲಿ ಹಿಮೋಫಿಲಿಯಾ ಇರುವುದೇ ಗೊತ್ತಾಗಿರುವುದಿಲ್ಲ. ಆದ್ದರಿಂದ ಕಾಯಿಲೆಯ ಲಕ್ಷಣಗಳು ಕಂಡಾಕ್ಷಣ ಗುರು ತಿಸಿ, ಚಿಕಿತ್ಸೆ ನೀಡುವಂತಾಗಲು ಮಾಧ್ಯಮಗಳ ಮೂಲಕ ಅರಿವು ಮೂಡಿಸುವ ಅಗತ್ಯ ಹೆಚ್ಚಾ ಗಿದೆ ಎಂದು ವಿದ್ಯಾರ್ಥಿಯ ಸಲಹೆಯಾಗಿತ್ತು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ, ಪ್ರತಿ ಹತ್ತು ಸಾವಿರದಲ್ಲಿ ಒಬ್ಬರು ಹಿಮೋಫಿಲಿಯಾದಿಂದ ಬಳಲುತ್ತಿದ್ದಾರೆ. ಪ್ರಪಂಚದಾದ್ಯಂತ 4 ಲಕ್ಷ ಹಿಮೋಫಿಲಿಯಾ ರೋಗಿಗಳಿದ್ದು, ಶೇ.25ರಷ್ಟು ಜನ ಭಾರತ ದೇಶದಲ್ಲಿದ್ದಾರೆ. ಪ್ರತಿ ವರ್ಷ 1500 ಹೊರ ರೋಗಿಗಳು ಪತ್ತೆಯಾಗುತ್ತಿದ್ದಾರೆ ಎಂದು ಹೇಳಿದರು.

ಮುಂದುವರೆದ ದೇಶಗಳಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಮೊದಲೇ ರಕ್ತ ಸ್ರಾವವಾಗದಂತೆ ತಡೆಯಲು ಚುಚ್ಚುಮದ್ದುಗಳನ್ನು ನೀಡಲಾಗುತ್ತಿದೆ. ಅಂತಹ ವ್ಯವಸ್ಥೆ ನಮ್ಮಲ್ಲೂ ಬಂದರೆ ರೋಗಿಗಳು ಯಾವುದೇ ಭಯವಿಲ್ಲದೆ ಸದೃಢ ಜೀವನ ನಡೆಸಬಹುದಾಗಿದೆ ಎಂದರು.

5 ದಿನಗಳ ಈ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ, ಭೌತಿಕ ಚಿಕಿತ್ಸಾ ತರಬೇತಿ, ಮನೋ ಸಾಮಾಜಿಕ ಸಮಸ್ಯೆಗಳು, ಶೈಕ್ಷಣಿಕ ಮಾರ್ಗದರ್ಶನ, ವೃತ್ತಿ ಮಾರ್ಗದರ್ಶನ, ವೈವಾಹಿಕ ಜೀವನದ ಬಗ್ಗೆ ಸಲಹೆ, ಸರ್ಕಾರದಿಂದ ಸಿಗುವ ಸಾಮಾಜಿಕ ಸೌಲತ್ತುಗಳ ಬಗ್ಗೆ ಮಾಹಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನದ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಸೊಸೈಟಿಯ ಆಡಳಿತಾಧಿಕಾರಿ ಡಾ.ಮೀರಾ ಹನಗವಾಡಿ ಪತ್ರಕರ್ತರುಗಳಾದ ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, ಮಂಜು ನಾಥ ಕಾಡಜ್ಜಿ, ಡಿ.ಎಂ. ಮಹೇಶ್, ವೈದ್ಯರು ಗಳಾದ ಡಾ.ಕಿರಣ್ ಕುಮಾರ್, ಡಾ.ರವಿಕುಮಾರ್ ಹಿಮೋಫಿಲಿಯಾ ಸೊಸೈಟಿಯ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿದ್ದರು

error: Content is protected !!