ಯು.ಬಿ.ಡಿ.ಟಿ. ಕಾಲೇಜಿನ ಕಾರ್ಯಾಗಾರದಲ್ಲಿ ವಾಲ್ಮಿ ನಿರ್ದೇಶಕ ಬಿ.ವೈ. ಬಂಡಿವಡ್ಡರ
ದಾವಣಗೆರೆ, ಡಿ. 14 – ಬಹಳಷ್ಟು ರೈತರು ಅತಿ ನೀರು ಬಳಸಿ ಪೋಲು ಮಾಡುತ್ತಿದ್ದಾರೆ. ಇದರಿಂದ ಜಮೀನಿನಲ್ಲಿ ಲವಣದ ಅಂಶ ಹೆಚ್ಚಾಗುತ್ತಿದೆ ಹಾಗೂ ಇಳುವರಿಯೂ ಕಡಿಮೆಯಾಗುತ್ತಿದೆ ಎಂದು ಧಾರವಾಡದ ಜಲ ಹಾಗೂ ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ನಿರ್ದೇಶಕ ಬಿ.ವೈ. ಬಂಡಿವಡ್ಡರ ತಿಳಿಸಿದರು.
ನಗರದ ಯು.ಬಿ.ಡಿ.ಟಿ. ಕಾಲೇಜಿನಲ್ಲಿ ಜಲ ಹಾಗೂ ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೀರಾವರಿ ನಿರ್ವಹಣೆ ಹಾಗೂ ಜಲ ಮೂಲಗಳ ಸಂರಕ್ಷಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶೇ.50-60ರಷ್ಟು ರೈತರು ನೀರು ಅತಿಯಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಬೆಳೆಗಳ ಬೇರುಗಳಿಗೆ ಉಸಿರು ಗಟ್ಟಿದ ವಾತಾವರಣ ಆಗುತ್ತಿದೆ. ನೀರು ಹೆಚ್ಚಾದಾಗ, ಅದು ಜಮೀನಿನ ಅಡಿ ಇದರಿಂದ ಲವಣಾಂಶವನ್ನು ಕರಗಿಸಿ ಮೇಲೆ ತರುತ್ತದೆ. ಇದು ಜಮೀನಿನ ಫಲವತ್ತತೆ ಕುಸಿಯುತ್ತದೆ ಎಂದು ವಿವರಿಸಿದರು.
ಅಲ್ಲದೇ, ನೀರಾವರಿ ಅಚ್ಚುಕಟ್ಟಿನ ಮೇಲ್ಭಾಗದ ರೈತರು ಅತಿಯಾಗಿ ನೀರು ಬಳಸಿದಾಗ ಕೊನೆ ಭಾಗದ ರೈತರಿಗೆ ನೀರು ಕಡಿಮೆಯಾಗುತ್ತದೆ ಎಂದವರು ಹೇಳಿದರು.
ಹೊಲಗಳಿಗೆ ನೀರು ಹರಿಸುವ ಪದ್ಧತಿ ಹೆಚ್ಚು ದಕ್ಷವಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ನೀರಿನ ದಕ್ಷತೆ ಶೇ.95ರಷ್ಟು ಹೆಚ್ಚಾಗುತ್ತದೆ ಎಂದು ಬಂಡಿವಡ್ಡರ ತಿಳಿಸಿದರು.
ವಸತಿ ಪ್ರದೇಶಗಳಲ್ಲಿ ಮಳೆ ಕೊಯ್ಲು ಮೂಲಕ ನೀರು ಸಂರಕ್ಷಿಸಬೇಕು. ಕಟಾವಿನ ವೇಳೆ ಧಾನ್ಯಗಳನ್ನು ಸಂರಕ್ಷಿಸುವ ರೀತಿಯಲ್ಲೇ, ಮಳೆಗಾಲದಲ್ಲಿ ಪ್ರತಿ ಹನಿ ನೀರನ್ನೂ ಉಳಿಸಿಕೊಳ್ಳ ಬೇಕು. ನೀರಿನ ರಕ್ಷಣೆಗಾಗಿ ಪ್ರತಿಯೊಬ್ಬರೂ ಜಲ ಯೋಧರ ರೀತಿ ಕಾರ್ಯನಿರ್ವಹಿಸಬೇಕು ಎಂದವರು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮಿ ಸಂಸ್ಥೆಯ ಸಂಚಾಲಕಿ ಸುವರ್ಣ ದೊಡ್ಡಮನಿ, ಭೂಮಿಯ ಮೇಲೆ ಲಭ್ಯವಿರುವ ನೀರಿನ ಪೈಕಿ ಶೇ.3ರಷ್ಟು ಮಾತ್ರ ಕುಡಿಯಲು ಯೋಗ್ಯ. ಈ ನೀರಿನಲ್ಲೂ ಶೇ.1.2ರಷ್ಟು ಮಾತ್ರ ನದಿಗಳಲ್ಲಿದೆ. ಉಳಿದದ್ದು ಮಂಜುಗಡ್ಡೆ ಸ್ವರೂಪದಲ್ಲಿದೆ. ಹೀಗಾಗಿ ಸೀಮೀತವಾಗಿರುವ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದರು.
ವಾಲ್ಮಿ ಸಂಸ್ಥೆಯ ಉಪನ್ಯಾಸಕ ಪ್ರೊ. ಜಿ. ಭೀಮಾನಾಯಕ್ ಮಾತನಾಡಿ, ದೇಶದಲ್ಲಿ 18 ಕೋಟಿ ಮನೆಗಳಿವೆ. ನೀರಿನ ಕೊರತೆಯಿಂದಾಗಿ ದೇಶದ ಕೋಟ್ಯಂತರ ಮನೆಗಳಿಗೆ ನಲ್ಲಿ ನೀರು ತಲುಪಿಲ್ಲ ಎಂದು ಹೇಳಿದರು.
ಯು.ಬಿ.ಡಿ.ಟಿ. ಕಾಲೇಜಿನ ಪ್ರಾಂಶುಪಾಲ ಡಿ.ಪಿ. ನಾಗರಾಜಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಯು.ಬಿ.ಡಿ.ಟಿ. ಡೀನ್ ಡಾ. ಕೆ. ಮಂಜುನಾಥ, ಯು.ಬಿ.ಡಿ.ಟಿ. ಸಿವಿಲ್ ವಿಭಾಗದ ಮುಖ್ಯಸ್ಥರಾದ ಹೆಚ್. ಈರಮ್ಮ, ವಾಲ್ಮಿ ಸಹಾಯಕ ಉಪನ್ಯಾಸಕ ಹನುಮಂತಪ್ಪ, ಯು.ಬಿ.ಡಿ.ಟಿ. ಸಹಾಯಕ ಉಪನ್ಯಾಸಕಿ ತೇಜಸ್ವಿನಿ ಭಾಗವತ್, ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಾಳೆ, ವಾಲ್ಮಿ ಸಹ ಉಪನ್ಯಾಸಕ ಬಸವರಾಜ ಹೆಚ್. ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.